ಹ್ಯುಂಡೈ ಹ್ಯಾಟ್ರಿಕ್ ಸಾಧನೆ; ಕ್ರೆಟಾ ವರ್ಷದ ಕಾರು
ಕ್ರೆಟಾ ವರ್ಷದ ಕಾರು ಪ್ರಶಸ್ತಿ ಗೆಲ್ಲುವ ಮೂಲಕ ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರ್ಸ್ ಇಂಡಿಯಾ ಲಿಮಿಟೆಡ್ ಇಂಡಿಯಾ ಸಂಸ್ಥೆಯು 'ಹ್ಯಾಟ್ರಿಕ್' ಸಾಧನೆ ಮಾಡಿದೆ.
ಇದು ಸತತವಾಗಿ ಮೂರನೇ ಬಾರಿಗೆ ಹ್ಯುಂಡೈ ಪ್ರಶಸ್ತಿಗೆ ಅರ್ಹವಾಗಿದೆ. 2014ರಲ್ಲಿ ಗ್ರಾಂಡ್ ಐ10 ಹಾಗೂ 2015ರಲ್ಲಿ ಎಲೈಟ್ ಐ20 ವರ್ಷದ ಕಾರು ಪ್ರಶಸ್ತಿಗೆ ಅರ್ಹವಾಗಿದ್ದಲ್ಲಿ ಪ್ರಸಕ್ತ ಸಾಲಿನಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಕ್ರೆಟಾ ಭಾಜನವಾಗಿದೆ.

ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನದಲ್ಲಿ ಹೊಸ ಹವಾ ಸೃಷ್ಟಿ ಮಾಡಿರುವ ಕ್ರೆಟಾ ದೇಶದ ಅತಿ ಬೇಡಿಕೆಯುಳ್ಳು ಕಾರುಗಳಲ್ಲಿ ಒಂದೆನಿಸಿಕೊಂಡಿದೆ. ಈಗಾಗಲೇ 74,000ರಷ್ಟು ಬುಕ್ಕಿಂಗ್ ಗಿಟ್ಟಿಸಿಕೊಂಡಿರುವ ಕ್ರೆಟಾ ಪ್ರತಿ ತಿಂಗಳಲ್ಲಿ 7,000ಕ್ಕಿಂತಲೂ ಹೆಚ್ಚು ಮಾರಾಟವನ್ನು ಗಿಟ್ಟಿಸಿಕೊಳ್ಳುತ್ತಿದೆ.

14 ಮಂದಿ ಸದಸ್ಯರನ್ನು ಒಳಗೊಂಡ ತೀರ್ಪು ಸಮಿತಿಯು ಕ್ರೆಟಾ ಕಾರನ್ನು ಅತ್ಯುತ್ತಮ ಕಾರನ್ನಾಗಿ ಆಯ್ಕೆ ಮಾಡಿದ್ದಾರೆ. ಇದರ 1.6 ಲೀಟರ್ ಡೀಸೆಲ್ ಎಂಜಿನ್ ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನಲ್ಲೂ ಲಭ್ಯವಿರುತ್ತದೆ.

ಫ್ಲೂಯಿಡಿಕ್ ವಿನ್ಯಾಸ ತತ್ವಶಾಸ್ತ್ರ
ಹ್ಯುಂಡೈ ಕ್ರೆಟಾ ಒಂದು ಜಾಗತಿಕ ಎಸ್ ಯುವಿ ಆಗಿದ್ದು, ಕೇವಲ ಭಾರತೀಯ ಮಾರುಕಟ್ಟೆಯನ್ನಷ್ಟೇ ಗುರಿ ಮಾಡಲಾಗುವುದಿಲ್ಲ. ಪ್ರಸ್ತುತ ಕಾರಿನಲ್ಲಿ ಫ್ಲೂಯಿಡಿಕ್ ವಿನ್ಯಾಸ ತತ್ವಶಾಸ್ತ್ರವನ್ನು (Fluidic Sculpture 2.0) ಅನುಸರಿಸಲಾಗಿದೆ. ಇದರಂತೆ ಮುಂದುವರಿದ ಎಂಜಿನಿಯರಿಂಗ್ ತಂತ್ರಗಾರಿಕೆಯನ್ನು ಆಳವಡಿಸಲಾಗಿದೆ. ಅಂತೆಯೇ ಗರಿಷ್ಠ ಗುಣಮಟ್ಟದ ದೇಹದ ಬಿಗಿತ, ರಚನಾತ್ಮಕತೆ ಕಾಪಾಡಲು ಅಲ್ಟ್ರಾ-ಹೈ ಟೆನ್ಸಿಲ್ ಸ್ಟೀಲ್ ಉಪಕರಣಗಳನ್ನು ಬಳಕೆ ಮಾಡಲಾಗಿದೆ.

ಹೈವ್ ರಚನೆ
ನೂತನ ಹ್ಯುಂಡೈ ಕ್ರೆಟಾ 'ಹೈವ್ ರಚನೆ'ಯು (Hive Structure) ಹಗುರ ಭಾರದ ದೇಹ ವಿನ್ಯಾಸವನ್ನು ಪಡೆದುಕೊಂಡಿದೆ. ಇನ್ನು ಪ್ರಬಲ ದೇಹ ವಿನ್ಯಾಸವು ಹೆಚ್ಚಿನ ಸುರಕ್ಷತೆಯನ್ನು ಖಾತ್ರಿಪಡಿಸಲಿದೆ. ಒಟ್ಟಾರೆಯಾಗಿ ಶಕ್ತಿ ಹಾಗೂ ದೃಢತೆಯಲ್ಲಿ ಹ್ಯುಂಡೈ ಕ್ರೆಟಾ ಮುಂಚೂಣಿಯಲ್ಲಿ ಗುರುತಿಸಿಕೊಳ್ಳಲಿದೆ.

ರಿಂಗ್ ಆಕಾರದ ಚೌಕಟ್ಟು
ಸಂಸ್ಥೆ ಹೇಳುವ ಪ್ರಕಾರ ರಿಂಗ್ ಆಕಾರದ ಫ್ರೇಮ್ ಅಥವಾ ಚೌಕಟ್ಟು ಕ್ರೆಟಾ ಕ್ರೀಡಾ ಬಳಕೆಯ ವಾಹನಕ್ಕೆ ಎಲ್ಲ ಬದಿಗಳಿಂತಲೂ ಸಂಪೂರ್ಣ ಭದ್ರತೆಯನ್ನು ಒದಗಿಸಲಿದೆ. ಕೇಂದ್ರ ಪಿಲ್ಲರ್, ಬಾಡಿ ಸೈಡ್ ಫ್ರೇಮ್ ಸಹಿತ ಪ್ರತಿಯೊಂದು ಪಿಲ್ಲರ್ ರಿಂಗ್ ಆಕಾರದ ರಚನೆಯನ್ನು ಪಡೆದುಕೊಂಡಿದೆ. ಈ ರೀತಿಯಲ್ಲಿ ಸುರಕ್ಷಿತ ಕವಚದಂತೆ ವಿನ್ಯಾಸ ಮಾಡಲಾಗಿದೆ. ಇವೆಲ್ಲವೂ ಅತ್ಯುತ್ತಮ ಹ್ಯಾಂಡ್ಲಿಂಗ್ ಹಾಗೂ ಗರಿಷ್ಠ ಚಾಲನಾ ಗುಣಮಟ್ಟತೆ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.

ಎಂಜಿನ್, ಗೇರ್ ಬಾಕ್ಸ್
ನೂತನ ಕ್ರೆಟಾ ಅತ್ಯಂತ ಶಕ್ತಿಶಾಲಿ ಪೆಟ್ರೋಲ್ 1.6 ಡ್ಯುಯಲ್ ವಿಟಿವಿಟಿ (VTVT) ಮತ್ತು ಯು2 1.4 ಸಿಆರ್‌ಡಿಐ ಮತ್ತು ಯು2 1.6 ಸಿಆರ್‌ಡಿಐ ವಿಜಿಟಿ (CRDi VGT) ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಎಂಜಿನ್ ಗಳನ್ನು ಗರಿಷ್ಠ ಇಂಧನ ಕ್ಷಮತೆಗಾಗಿ ವಿಶೇಷವಾಗಿ ಟ್ಯೂನ್ ಮಾಡಲಾಗುವುದು. ಅಂತೆಯೇ 6 ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ (1.6 ಸಿಆರ್‌ಡಿಐ ವಿಜಿಟಿ) ಆಯ್ಕೆಯಲ್ಲೂ ಲಭ್ಯವಿರಲಿದೆ. ಈ ಪೈಕಿ 1.6 ಸಿಆರ್ ಡಿಐ ವಿಜಿಟಿ ಡೀಸೆಲ್ ಈ ವಿಭಾಗದಲ್ಲಿ ಭಾರತೀಯರಿಗೆ ಹೊಸ ಅನುಭವವಾಗಲಿದೆ.
1.6 ಗಮ್ಮಾ (Gamma) ಡ್ಯುಯಲ್ ವಿಟಿವಿಟಿ ಪೆಟ್ರೋಲ್ ಎಂಜಿನ್ - 123 ಅಶ್ವಶಕ್ತಿ 1.6 ಸಿಆರ್‌ಡಿಐ ವಿಜಿಟಿ (ಮ್ಯಾನುವಲ್/ಆಟೋಮ್ಯಾಟಿಕ್) - 128 ಅಶ್ವಶಕ್ತಿ


Click it and Unblock the Notifications








