ಹ್ಯುಂಡೈ ಹೊಸ ಕ್ರಾಸೋವರ್ ಕಾರು ಇದೇ ತಿಂಗಳಲ್ಲಿ ಬಿಡುಗಡೆ
ಈ ಹಿಂದೆ ಮಾಹಿತಿ ನೀಡಿರುವಂತೆಯೇ ದಕ್ಷಿಣ ಕೊರಿಯಾದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ, ಐ20 ತಳಹದಿಯಲ್ಲಿ ಹೊಸ ಕ್ರಾಸೋವರ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.
ಅದುವೇ ಐ20 ಆಕ್ಟಿವ್ ಕ್ರಾಸೋವರ್ ಕಾರು. ಇನ್ನು ಕುತೂಹಲದಾಯಕ ಸಂಗತಿಯೆಂದರೆ ಹ್ಯುಂಡೈ ಐ20 ಆಕ್ಟಿವ್ ಕ್ರಾಸೋವರ್ ಕಾರು ಈಗಾಗಲೇ ಹಲವು ಬಾರಿ ಟೆಸ್ಟಿಂಗ್ ವೇಳೆ ಕ್ಯಾಮೆರಾ ಕಣ್ಣುಗಳಿಗೆ ಸೆರೆ ಸಿಕ್ಕಿವೆ.

ಸದ್ಯ ಬಂದಿರುವ ಮಾಹಿತಿಯ ಪ್ರಕಾರ ಪ್ರಸಕ್ತ ತಿಂಗಳಲ್ಲೇ ಹ್ಯುಂಡೈ ಕ್ರಾಸೋವರ್ ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ. ವಿಶೇಷವೆಂದರೆ ಈ ನೂತನ ಕಾರು ಭಾರತದಲ್ಲೇ ಜಾಗತಿಕ ಬಿಡುಗಡೆ ಕಾಣಲಿದೆ. ಈ ಹಿಂದೆ ಎಲೈಟ್ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಸಹ ಭಾರತದಿಂದಲೇ ಜಾಗತಿಕ ಬಿಡುಗಡೆ ಕಂಡಿತ್ತು.
ಹೊಸ ಕ್ರಾಸೋವರ್ ವಿಭಾಗವು ಭಾರತದಲ್ಲಿ ಬೇಡಿಕೆ ಹೆಚ್ಚುತ್ತಲೇ ಇದ್ದು, ಇದನ್ನು ಗಮನಿಸಿರುವ ಹ್ಯುಂಡೈ ಈ ವಿಭಾಗದತ್ತ ಕಣ್ಣಾಯಿಸಿದೆ. ಹಾಗೆಯೇ ಎಲೈಟ್ ಐ20 ಕಾರಿನಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಇದರಲ್ಲಿ ಕಂಡುಬರುವ ಸಾಧ್ಯತೆಯಿದೆ.
ಪೆಟ್ರೋಲ್ ಜೊತೆಗೆ ಡೀಸೆಲ್ ಎಂಜಿನ್‌ಗಳು ಇದರಲ್ಲಿರಲಿದೆ. ಹಾಗಿದ್ದರೂ ಹ್ಯಾಚ್‌ಬ್ಯಾಕ್ ಮಾದರಿಗಿಂತಲೂ ಹೆಚ್ಚು ದುಬಾರಿಯೆನಿಸಲಿದೆ. ಸಂಸ್ಥೆಯೇ ಹೇಳುವ ಪ್ರಕಾರ ಐ20 ಆಕ್ಟಿವ್ ಕಾರನ್ನು ಜರ್ಮನಿಯಲ್ಲಿ ಸ್ಥಿತಗೊಂಡಿರುವ ಯುರೋಪ್‌ನ ಹ್ಯುಂಡೈ ಮೋಟಾರ್ಸ್ ಡಿಸೈನ್ ಸೆಂಟರ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಅಲ್ಲದೆ ಕ್ರಾಸೋವರ್ ವಿಭಾಗದಲ್ಲಿ ಹ್ಯುಂಡೈ ಐ20 ಆಕ್ಟಿವ್ ಮಾದರಿಯು ಫಿಯೆಟ್ ಅವೆಂಚ್ಯುರಾ, ಟೊಯೊಟಾ ಎಟಿಯೋಸ್ ಕ್ರಾಸ್ ಹಾಗೂ ಫೋಕ್ಸ್‌ವ್ಯಾಗನ್ ಪೊಲೊ ಕ್ರಾಸ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.


Click it and Unblock the Notifications








