ಆಕರ್ಷಕ ನೋಟ; ಮಾರುತಿ ಮುಖ ಛಾಯೆ ಬದಲಾಯಿಸಲಿರುವ 'ಬಲೆನೊ'
ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಮಗದೊಂದು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಇದರಂಗವಾಗಿ ಅತಿ ನೂತನ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರಿನ ಮುಂಭಾಗದ ಎರಡು ಎಕ್ಸ್ ಕ್ಲೂಸಿವ್ ಚಿತ್ರಗಳನ್ನು ವಾಹನ ಪ್ರೇಮಿಗಳಿಗಾಗಿ ಬಿಡುಗಡೆಗೊಳಿಸಿದೆ.
ಹೊಚ್ಚ ಹೊಸ ಮಾರುತಿ ಸುಜುಕಿ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ಮುಂಬರುವ 66ನೇ ಐಎಎ ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲಿ ಭರ್ಜರಿ ಅನಾವರಣಗೊಳ್ಳಲಿದೆ. ಅಲ್ಲದೆ ನಿಕಟ ಭವಿಷ್ಯದಲ್ಲೇ ಭಾರತ ಮಾರುಕಟ್ಟೆಯನ್ನು ತಲುಪಲಿದೆ.

ಬಹುನಿರೀಕ್ಷಿತ ಬಲೆನೊ ಕಾರು 2015 ಸೆಪ್ಟೆಂಬರ್ 01ರಂದು ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲಿ ಅನಾವರಣಗೊಳ್ಳಲಿದೆ. ವಾಹನ ವಿಶ್ಲೇಷಕರ ಪ್ರಕಾರ ನೂತನ ಮಾರುತಿ ಕಾರು ಸೊಗಸಾದ ಮತ್ತು ಪ್ರಬಲ ವಿನ್ಯಾಸ ನೀತಿಯನ್ನು ಪಡೆದುಕೊಂಡಿದೆ.

ವರದಿಗಳ ಪ್ರಕಾರ ಮಾರುತಿ ಮುಖ ಛಾಯೆಯನ್ನು ಬಲೆನೊ ಪ್ರತಿಬಿಂಬಿಸುತ್ತಿದೆ. ಇದು 1.0 ಲೀಟರ್ ಡೈರಕ್ಟ್ ಇಂಜೆಕ್ಷನ್ ಟರ್ಬೊ ಬೂಸ್ಟ್ರರ್ ಜೆಟ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಸಾಧ್ಯತೆಯಿದೆ.

ಮಾರುತಿಯ ಮುಂದಿನ ತಲೆಮಾರಿನ ಸುಜುಕಿ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ (ಎಸ್‌ಎಚ್‌ವಿಎಸ್) ತಳಹದಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ನಿಮ್ಮ ಮಾಹಿತಿಗಾಗಿ ಮುಂಬರುವ ಸಿಯಾಝ್ ಡೀಸೆಲ್ ಹೈಬ್ರಿಡ್ ಕಾರಿನಲ್ಲೂ ಇದೇ ತಂತ್ರಜ್ಞಾನ ಆಳವಡಿಕೆಯಾಗುತ್ತಿದೆ. ಇದು ಸೆಪ್ಟೆಂಬರ್ 01ರಂದು ದೇಶದ ಮಾರುಕಟ್ಟೆ ತಲುಪಲಿದೆ.

ಆರಂಭದಲ್ಲಿ ವೈಆರ್‌ಎ ಕೋಡ್ ಪಡೆದುಕೊಂಡಿದ್ದ ಈ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು, ಜನಪ್ರಿಯ ಸ್ವಿಫ್ಟ್ ಗಿಂತಲೂ ಮೇಲ್ಧರ್ಜೆಯಲ್ಲಿ ಗುರುತಿಸಿಕೊಳ್ಳಲಿದೆ. ಅಲ್ಲದೆ ಎಸ್ ಕ್ರಾಸ್ ತರಹನೇ ಪ್ರೀಮಿಯಂ ನೆಕ್ಸಾ ಶೋ ರೂಂಗಳಲ್ಲಿ ಮಾರಾಟಗೊಳ್ಳುವುದು ಬಹುತೇಕ ಖಚಿತವೆನಿಸಿದೆ.

ಹೊರಗಿನಿಂದ ವೀಕ್ಷಿಸುವಾಗ 'ವಿ' ಆಕಾರದ ಫ್ರಂಟ್ ಗ್ರಿಲ್, ಹೆಡ್ ಲ್ಯಾಂಪ್ ಕ್ಲಸ್ಟರ್, 'ಎಲ್' ಆಕೃತಿಯ ಎಲ್‌ಇಡಿ, ಬಾಗಿದ ರೂಫ್ ಲೈನ್, ಕಪ್ಪು ವರ್ಣದ ಪಿಲ್ಲರ್ ಗಳು, ಕ್ರೋಮ್ ಸ್ಪರ್ಶತೆ, 16 ಇಂಚುಗಳ ಎಂಟು ಸ್ಪೋಕ್ ಅಲಾಯ್ ವೀಲ್ ಮತ್ತು ಎಲ್ ಇಡಿ ಟೈಲ್ ಲ್ಯಾಂಪ್ ಗಳು ಪ್ರಮುಖ ಆಕರ್ಷಣೆಗಳಾಗಿವೆ.

ಹೊಸ ಬಲೆನೊ ಕಾರಿನ ಒಳಮೈ ಸಹ ಬ್ಲ್ಯಾಕ್ ಥೀಮ್ ಪಡೆದುಕೊಳ್ಳಲಿದ್ದು, ಸಿಲ್ವರ್ ಸ್ಪರ್ಶತೆಯೂ ಕಂಡುಬರಲಿದೆ. ಹಾಗೆಯೇ ಏಳು ಇಂಚುಗಳ ಮಾಹಿತಿ ಮನರಂಜನಾ ವ್ಯವಸ್ಥೆ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕೀಲೆಸ್ ಎಂಟ್ರಿ, ಲೆಥರು ಸೀಟು, ಡ್ಯುಯಲ್ ಏರ್ ಬ್ಯಾಗ್ ಮುಂತಾದ ಸೌಲಭ್ಯಗಳು ವಿಶಿಷ್ಟವಾಗಿಸಲಿದೆ.


Click it and Unblock the Notifications