ಮಾರುತಿ ಕಾರುಗಳಿಗೆ 20,000 ರು.ಗಳ ವರೆಗೆ ಬೆಲೆ ಏರಿಕೆ
ಹ್ಯುಂಡೈ ಬೆನ್ನಲ್ಲೇ ದೇಶದ ನಂ.1 ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ಸಹ ತನ್ನ ಬೆಲೆ ಏರಿಕೆ ನೀತಿಯನ್ನು ಪ್ರಕಟಿಸಿದೆ. ತನ್ನ ಶ್ರೇಣಿಯ ಕಾರುಗಳಿಗೆ 20,000 ರು.ಗಳ ವರೆಗೆ ಬೆಲೆ ಏರಿಕೆಗೊಳಿಸಲು ಸಂಸ್ಥೆ ನಿರ್ಧರಿಸಿದೆ.
ನೂತನ ಬೆಲೆ 2016 ಜನವರಿ 01ರಿಂದಲೇ ಜಾರಿಗೆ ಬರಲಿದೆ. ನಿರ್ಮಾಣ ವೆಚ್ಚ ಹೆಚ್ಚಾಗಿರುವುದು ಹಾಗೂ ವಿದೇಶಿ ವಿನಿಮಯದಲ್ಲಿ ರುಪಾಯಿ ಮೌಲ್ಯ ಇಳಿಕೆಯಾಗಿರುವುದರಿಂದ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಸಂಸ್ಥೆಯ ವಕ್ತಾರ ತಿಳಿಸಿದ್ದಾರೆ.

ಕಳೆದ ದಿನವಷ್ಟೇ ಹ್ಯುಂಡೈ ಸಂಸ್ಥೆಯು ತನ್ನೆಲ್ಲ ಶ್ರೇಣಿಯ ಕಾರುಗಳಿಗೆ 30,000 ರು.ಗಳ ವರೆಗೆ ಬೆಲೆ ಏರಿಕೆ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಮಾರುತಿ ಸಹ ಬೆಲೆ ಏರಿಕೆ ನೀತಿ ಅನುಸರಿಸಿದೆ.
ಪ್ರಸ್ತುತ ಆಲ್ಟೊ 800 ರಿಂದ ಎಸ್ ಕ್ರಾಸ್ ವರೆಗಿನ ವಿವಿಧ ಶ್ರೇಣಿಯ ಕಾರುಗಳಿಗೆ ಮಾರುತಿ ಸಂಸ್ಥೆಯು 2.53 ಲಕ್ಷ ರು.ಗಳಿಂದ 13.74 ಲಕ್ಷ ರು.ಗಳ ವರೆಗೆ (ಎಕ್ಸ್ ಶೋ ರೂಂ ದೆಹಲಿ) ಬೆಲೆ ನಿಗದಿಪಡಿಸಿದೆ.
ಹ್ಯುಂಡೈ, ಮಾರುತಿ ಹೊರತುಪಡಿಸಿ ಟೊಯೊಟಾ, ಮರ್ಸಿಡಿಸ್ ಬೆಂಝ್ ಹಾಗೂ ಬಿಎಂಡಬ್ಲ್ಯು ಸಂಸ್ಥೆಗಳು ಸಹ ಏರಿ ಏರಿಕೆ ಘೋಷಿಸಿವೆ. ಇವೆಲ್ಲವೂ ಹೊಸ ವರ್ಷದಲ್ಲೇ ಅನ್ವಯವಾಗಲಿದೆ. ವಾಹನ ವಿಶ್ಲೇಷಕರ ಪ್ರಕಾರ ಈಗ ಮತ್ತಷ್ಟು ಸಂಸ್ಥೆಗಳು ಇದೇ ನೀತಿಯನ್ನು ಅನುಸರಿಸುವ ಸಾಧ್ಯತೆಗಳಿವೆ.


Click it and Unblock the Notifications