2015ರಲ್ಲೇ ಮರ್ಸಿಡಿಸ್ ಬೆಂಝ್ ಎಎಂಜಿ ಸಿ 63 ಎಸ್ ಬಿಡುಗಡೆ
ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ ಪ್ರಸಕ್ತ ಸಾಲಿನಲ್ಲಿ 15 ಹೊಸ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇದರಲ್ಲಿ ಯಾವೆಲ್ಲ ಮಾದರಿಗಳು ಸೇರಿರಲಿದೆ ಎಂಬುದರ ಬಗೆಗಿನ ಕುತೂಹಲವನ್ನು ಸಂಸ್ಥೆಯು ಬಹಿರಂಗ ಮಾಡಿಲ್ಲ.
ಈಗ ಬಂದಿರುವ ಮಾಹಿತಿಗಳ ಪ್ರಕಾರ ಮರ್ಸಿಡಿಸ್ ಬೆಂಝ್ ಪ್ರಸಕ್ತ ಸಾಲಿನಲ್ಲೇ ಎಎಂಜಿ ಸಿ 63 ಎಸ್ ಮಾದರಿಯನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಲಿದೆ.

ಜರ್ಮನಿಯ ಐಷಾರಾಮಿ ಸಂಸ್ಥೆಯು ಇತ್ತೀಚಿಗಷ್ಟೇ ಸಿ ಕ್ಲಾಸ್ ಡೀಸೆಲ್ ಮಾದರಿಯನ್ನು ಬಿಡುಗಡೆಗೊಳಿಸಿತ್ತಲ್ಲದೆ ಸಿ ಕ್ಲಾಸ್ ಪೆಟ್ರೋಲ್ ಮಾದರಿಯ ಉತ್ಪಾದನೆಯನ್ನು ಸ್ಥಳೀಯವಾಗಿ ಆರಂಭಿಸಿತ್ತು.
ಜಾಗತಿಕ ಮಟ್ಟದಲ್ಲಿ ಬೆಂಝ್ ಸಿ 63 ಎಎಂಜಿ ಎರಡು ವರ್ಷನ್‌ಗಳಲ್ಲಿ ಲಭ್ಯವಿರುತ್ತದೆ. ಆದರೆ ಭಾರತದಲ್ಲಿ ಏಕಮಾತ್ರ ವೆರಿಯಂಟ್‌ನಲ್ಲಿ ಲಭ್ಯವಿರಲಿದೆ. ಈ ಗರಿಷ್ಠ ನಿರ್ವಹಣೆಯ ಕಾರು 1.25 ಕೋಟಿ ರು.ಗಳಷ್ಟು ದುಬಾರಿಯೆನಿಸಲಿದೆ.
ಅಂದ ಹಾಗೆ ಬೆಂಝ್ ಎಎಂಜಿ ಸಿ 63 ಎಸ್ ಮಾದರಿಯು ವಿ8 4.0 ಲೀಟರ್ ಟ್ವಿನ್ ಟರ್ಬೊ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 503 ಅಶ್ವಶಕ್ತಿ (699.22 ತಿರುಗುಬಲ) ಉತ್ಪಾದಿಸಲಿದೆ. ಇದು ಕೇವಲ ನಾಲ್ಕು ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರಲಿದೆ.
ಇನ್ನೊಂದು ಗಮನಾರ್ಹ ವೈಶಿಷ್ಟ್ಯವೆಂದರೆ ಇದರ ಇಂಧನ ಕ್ಷಮತೆಯಾಗಿದೆ. ಬೆಂಝ್ ಎಎಂಜಿ ಸಿ 63 ಎಸ್ ಮಾದರಿಯು ಪ್ರತಿ ಲೀಟರ್‌ಗೆ 14.66 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.
ದೇಶದಲ್ಲಿ ಬೆಂಝ್ ಗರಿಷ್ಠ ನಿರ್ವಹಣೆಯ ಎಎಂಜಿ ಶ್ರೇಣಿಗಳ ಕಾರುಗಳ ಸಾನಿಧ್ಯವನ್ನು ಹೆಚ್ಚಿಸುವುದು ಸಂಸ್ಥೆಯ ಗುರಿಯಾಗಿದೆ. ಪ್ರಸ್ತುತ ಸಿಎಲ್‌ಎ 45 ಎಎಂಜಿ, ಇ 63 ಎಎಂಜಿ, ಜಿಎಲ್‌ಎ 45 ಎಎಂಜಿ, ಎಸ್‌ಎಲ್‌ಕೆ 55 ಎಎಂಜಿ, ಎಂಎಲ್ 63 ಎಎಂಜಿ ಮತ್ತು ಜಿಎಲ್ 63 ಎಎಂಜಿ ಮಾದರಿಗಳು ಲಭ್ಯವಿದೆ. ಈ ಸಾಲಿಗೆ ಪ್ರಸಕ್ತ ವರ್ಷದಲ್ಲಿ ಎಎಂಜಿ ಸಿ 63 ಎಸ್ ಮತ್ತು ಜಿಟಿ ಎಸ್ ಸೂಪರ್ ಕಾರು ಸೇರ್ಪಡೆಯಾಗಲಿದೆ.
ಬೆಂಝ್ ಎಎಂಜಿ ಸಿ 63 ಜಿ ಎಸ್ ಮಾದರಿಗೆ ಬಿಎಂಡಬ್ಲ್ಯು ಎಂ3 ಸೆಡಾನ್ ಕಾರು ಪ್ರಮುಖ ಸವಾಲಾಗಲಿದೆ.


Click it and Unblock the Notifications








