ಭಾರತಕ್ಕೆ ಬರುತ್ತಾ ರೆನೊ ಮಿನಿ ಲೈಫ್ ಸ್ಟೈಲ್ ಗಾಡಿ?
ಡಸ್ಟರ್‌ಗಳಂತಹ ಜನಪ್ರಿಯ ಮಾದರಿಗಳ ಬಳಿಕ ಭಾರತದಲ್ಲಿ ನಿಧಾನವಾಗಿ ನೆಲೆಯೂರುತ್ತಿರುವ ಫ್ರಾನ್ಸ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ರೆನೊ, ದೇಶದಲ್ಲಿ ಹಗುರ ವಾಣಿಜ್ಯ ವಾಹನಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.
ವಾಹನೋದ್ಯಮದ ನಿಕಟ ಮೂಲಗಳ ಪ್ರಕಾರ ರೆನೊ ಮಿನಿ ಓರೊಚ್ (Oroch) ಲೈಫ್ ಸ್ಟೈಲ್ ವಾಹನ ಭಾರತದಲ್ಲಿ ಬಿಡುಗಡೆಯಾಗುವ ಸಂಭವವಿದೆ. ಜಾಗತಿಕ ಮಟ್ಟದಲ್ಲಿ ಉತ್ತಮ ಹೆಸರು ಮಾಡಿರುವ ರೆನೊ ಪಿಕಪ್ ಟ್ರಕ್ ಭಾರತದಲ್ಲೂ ಬಿಡುಗಡೆಯಾದ್ದಲ್ಲಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳಲಿದೆ.

ಭಾರತದ ಹಗುರ ವಾಣಿಜ್ಯ ವಾಹನ (ಎಲ್‌ಸಿವಿ) ವಿಭಾಗವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ರೆನೊ, ಒಂದು ಟನ್ ವಿಭಾಗದಲ್ಲಿ ಮಿನಿ ಪಿಕಪ್ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ನಿಮ್ಮ ಮಾಹಿತಿಗಾಗಿ ಒಂದು ಟನ್ ವಿಭಾಗದಲ್ಲಿ ರೆನೊ ಸಂಸ್ಥೆಯು ಅಲಸ್ಕನ್ (Alaskan) ಎಂಬ ಕಾನ್ಸೆಪ್ಟ್ ರಚಿಸಿದ್ದು, 2016 ಮೊದಲಾರ್ಧದಲ್ಲಿ ನಿರ್ಮಾಣ ಹಂತವನ್ನು ತಲುಪಲಿದೆ.

ಈ ನಡುವೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಡಸ್ಟರ್ ತಳಹದಿಯ ಓರೊಚ್ ಜೀವನಶೈಲಿ ವಾಹನವನ್ನು ಭಾರತಕ್ಕೆ ಪರಿಚಯಿಸುವ ಯೋಜನೆ ಹೊಂದಿದೆ.

2015 ಬ್ಯುನಸ್ ಐರಿಸ್ ಮೋಟಾರು ಶೋದಲ್ಲಿ ಪಾದಾರ್ಪಣೆಗೈದಿರುವ ಓರೊಚ್, ಒಂದು ಹಾಗೂ ಅರ್ಧ ಟನ್ ಪಿಕಪ್ ಸಾಲಿನಲ್ಲಿ ಗುರುತಿಸಿಕೊಳ್ಳಲಿದೆ.

ಐದು ಸೀಟು, ನಾಲ್ಕು ಡೋರ್‌ಗಳ ಈ ಡಬಲ್ ಕ್ಯಾಬಿನ್ ಬಂಡಿಯು ಉದ್ಯಮಶೀಲ ಭಾರತೀಯ ಗ್ರಾಹಕರಿಗೆ ಪರಿಪೂರ್ಣ ಆಯ್ಕೆಯಾಗಲಿದೆ. ಈ ಪೈಕಿ ಮೊದಲೆರಡು ಸಾಲುಗಳು ಪ್ರಯಾಣಕ್ಕೂ ಹಾಗೂ ಹಿಂಬದಿಯಲ್ಲಿ ವಸ್ತುಗಳನ್ನು ಸಾಗಿಸಲು ನೆರವಾಗಲಿದೆ.

ಉಳಿದಂತೆ ಆಕ್ರಮಣಕಾರಿ ಫ್ರಂಟ್ ಗ್ರಿಲ್, ಬಂಪರ್, ಟೈಲ್ ಲ್ಯಾಂಪ್, ತ್ರಿ ಸ್ಪೋಕ್ ಸ್ಟೀರಿಂಗ್ ವೀಲ್, ಏಳು ಇಂಚುಗಳ ಡಿಸ್ ಪ್ಲೇ ಸಿಸ್ಟಂ ಮತ್ತು ಪಿಕಪ್ ಶೈಲಿಯ ವಿನ್ಯಾಸವು ಹೆಚ್ಚು ಆಕರ್ಷಕವೆನಿಸಲಿದೆ.

ದಕ್ಷಿಣ ಅಮೆರಿಕದಲ್ಲಿ ಹೆಚ್ಚು ಜನಪ್ರಿಯವೆನಿಸಿರುವ ಓರೊಚ್ ಲೈಫ್ ಸ್ಟೈಲ್ ವಾಹನದಲ್ಲಿ 1.6 ಹಾಗೂ 2.0 ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಗಳು ಬಳಕೆಯಾಗುವ ಸಂಭವವಿದೆ. ಅಲ್ಲದೆ ಫೋರ್ ಸ್ಪೀಡ್, ಫೈವ್ ಸ್ಪೀಡ್ ಅಥವಾ ಸಿಕ್ಸ್ ಸ್ಪೀಡ್ ಗೇರ್ ಬಾಕ್ಸ್ ಗಳು ಕಂಡುಬರಲಿದೆ. ಹಾಗಿದ್ದರೂ ಭಾರತದಲ್ಲಿ 1.6 ಲೀಟರ್ ಪೆಟ್ರೋಲ್ (103 ಅಶ್ವಶಕ್ತಿ) ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ (84 ಹಾಗೂ 108 ಅಶ್ವಶಕ್ತಿ) ಮಾತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ.


Click it and Unblock the Notifications








