ಟ್ರಾಫಿಕ್ ನಿಯಮ ಉಲ್ಲಂಘನೆ; ಸಾನಿಯಾ ಮಿರ್ಜಾಗೆ ದಂಡ
ಕಣ್ಣಿಗೆ ಕಪ್ಪು ಪಟ್ಟಿ ತೊಟ್ಟಿರುವ ನ್ಯಾಯ ದೇವತೆಯ ಮುಂದೆ ದೇಶದೆಲ್ಲ ಪ್ರಜೆಗಳು ಸಮಾನರು. ಅಲ್ಲಿ ಯಾವುದೇ ಜಾತಿ ಭೇದವಿಲ್ಲ. ಮೇಲು-ಕೀಳು, ದೊಡ್ಡವರು ಚಿಕ್ಕವರೆಂಬ ಭಾವನೆಗಳಿಲ್ಲ ಎಂಬುದು ಮಗದೊಮ್ಮೆ ಸಾಬೀತಾಗಿದೆ.
ನಮಗೆ ಬಂದಿರುವ ತಾಜಾ ಸುದ್ದಿಯಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆಗೆ ಸಂಬಂಧಪಟ್ಟಂತೆ ದೇಶದ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮೇಲೆ ದಂಡ ವಿಧಿಸಲಾಗಿದೆ.

ಈಗಷ್ಟೇ ದೇಶದ ಅತ್ಯುನ್ನತ್ತ ಕ್ರೀಡಾ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಸಾನಿಯಾ ಮಿರ್ಜಾ ಭಾಜನರಾಗುವುದು ಬಹುತೇಕ ಖಚಿತವೆನಿಸಿರುವ ನಡುವೆ ಸಾನಿಯಾ ಮಿರ್ಜಾ ಇಂತಹದೊಂದು ಪ್ರಸಂಗದಲ್ಲಿ ಸಿಕ್ಕಿ ಬಿದ್ದಿರುವುದು ಸ್ವಲ್ಪ ಹಿನ್ನೆಡೆಗೆ ಕಾರಣವಾಗಿದೆ.
ಹೈದರಾಬಾದ್‌ನಲ್ಲಿ ಸೋಮವಾರ ರಾತ್ರಿ ಸಾನಿಯಾ ಮಿರ್ಜಾ ಅವರ ಟೊಯೊಟಾ ಫಾರ್ಚ್ಯುನರ್ ಕಾರಿನಲ್ಲಿ ದೋಷಪೂರಿತ ಲೈಸನ್ಸ್ ಪ್ಲೇಟ್ ಕಂಡುಬಂದಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರು 200 ರುಪಾಯಿ ದಂಡ ವಿಧಿಸಿದ್ದಾರೆ.
ಪಾಕಿಸ್ತಾನ ಕ್ರಿಕೆಟಿಗ ಶೋಯಿಬ್ ಮಲಿಕ್ ಅವರನ್ನು ವರಿಸಿಕೊಂಡಿರುವ ಸಾನಿಯಾ ಇತ್ತೀಚೆಗಷ್ಟೇ ಸ್ವಿಜರ್ಲೆಂಡ್‌ನ ಮಾರ್ಟಿನಾ ಹಿಂಗಿಸ್ ಜೊತೆ ಸೇರಿಕೊಂಡು ಪ್ರತಿಷ್ಠಿತ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ಮಹಿಳಾ ಡಬಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.
ಇದೇ ವೇಳೆ ವರ್ಷಾರಂಭದಲ್ಲಿ ತಮ್ಮ ನೂತನ ರೇಂಜ್ ರೋವರ್ ಇವೋಕ್ ಕಾರಿನ ಫ್ಯಾನ್ಸಿ ನಂಬರ್ ಪ್ಲೇಟ್ ಗಾಗಿ (TS09-EE001) ಸಾನಿಯಾ ಮಿರ್ಜಾ ತೆಲಂಗಾಣ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ 50,000 ರುಪಾಯಿ ಪಾವತಿಸಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.


Click it and Unblock the Notifications








