ಟಾಟಾ ಮಾಂಝಾ, ವಿಸ್ಟಾ ನಿರ್ಮಾಣಕ್ಕೆ ಬ್ರೇಕ್
ಕಳಪೆ ಮಾರಾಟದ ಹಿನ್ನೆಲೆಯಲ್ಲಿ ಮಾಂಝಾ ಸೆಡಾನ್ ಹಾಗೂ ವಿಸ್ಟಾ ಹ್ಯಾಚ್ ಬ್ಯಾಕ್ ಕಾರುಗಳ ನಿರ್ಮಾಣ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆ ಟಾಟಾ ಮೋಟಾರ್ಸ್ ನಿರ್ಧರಿಸಿದೆ.
ಅದೇ ಹೊತ್ತಿಗೆ ಇಂಡಿಕಾ ಹಾಗೂ ಇಂಡಿಕೊ ಮಾದರಿಗಳು ವಾಣಿಜ್ಯ ವಾಹನಗಳಾಗಿ (ಟ್ಯಾಕ್ಸಿ) ಮಾತ್ರ ಮಾರಾಟ ಮುಂದುವರಿಯಲಿದೆ.

ಹೊಸ ತಲೆಮಾರಿನ ಟಾಟಾ ಕಾರುಗಳ ಆಗಮನದೊಂದಿಗೆ ಹಳೆಯ ಮಾದರಿಗಳ ಮಾರಾಟ ಕಳೆಗುಂದಿದೆ. ನೂತನ ಹೋರಿಝೋನೆಕ್ಸ್ಟ್ ಸಿದ್ಧಾಂತದಡಿಯಲ್ಲಿ ಜೆಸ್ಟ್ ಹಾಗೂ ಬೋಲ್ಟ್ ಕಾರುಗಳನ್ನು ಬಿಡುಗಡೆ ಮಾಡಿರುವ ಟಾಟಾ ಈಗ ಮಗದೊಂದು ನೂತನ ಝಿಕಾ ಹ್ಯಾಚ್ ಬ್ಯಾಕ್ ಕಾರಿನ ಬಿಡುಗಡೆಯ ತಯಾರಿಯಲ್ಲಿದೆ.
ನಿಮ್ಮ ಮಾಹಿತಿಗಾಗಿ ಒಂದು ವರ್ಷದ ಹಿಂದೆಯಷ್ಟೇ ಹಳೆಯ ತಲೆಮಾರಿನ ನ್ಯಾನೋ ನಿರ್ಮಾಣವನ್ನು ಟಾಟಾ ಸ್ಧಗಿತಗೊಳಿಸಿತ್ತು. ಈಗ ಭಾರತೀಯ ವಾಹನ ತಯಾರಕ ಒಕ್ಕೂಟ ಸಂಘದ (ಸಿಯಾಮ್) ವರದಿಯ ಪ್ರಕಾರ ಜುಲೈ ತಿಂಗಳ ಬಳಿಕ ಟಾಟಾ ಮಾಂಝಾ ಒಂದೇ ಒಂದು ಯುನಿಟ್ ಕೂಡಾ ಮಾರಾಟವನ್ನು ಗಳಿಸಿಲ್ಲ.

2009ರಲ್ಲಿ ಬರೋಬ್ಬರಿ 2000 ಕೋಟಿ ರು. ಹೂಡಿಕೆಯಲ್ಲಿ ಮಾಂಝಾ ಕಾರಿನ ನಿರ್ಮಾಣ ಆರಂಭಗೊಂಡಿತ್ತು. ಇದೇ ತಳಹದಿಯನ್ನು ವಿಸ್ಟಾ ಜೊತೆಯೂ ಹಂಚಿಕೊಳ್ಳಲಾಗಿದೆ. ಮಾಂಝಾ ಆರಂಭದಲ್ಲಿ ಇಂಡಿಗೊ ಮಾಂಝಾ ಎಂದೆನಿಸಿಕೊಂಡಿತ್ತು.
ಮಾರುಕಟ್ಟೆಯಲ್ಲಿ ಟಾಟಾ ಮಾಂಝಾ ಕಾರು ಮಾರುತಿ ಸುಜುಕಿ ಎಸ್‌ಎಕ್ಸ್4, ಹ್ಯುಂಡೈ ವೆರ್ನಾ ಹಾಗೂ ಹೋಂಡಾ ಸಿಟಿ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿದ್ದಲ್ಲಿ ಟಾಟಾ ವಿಸ್ಟಾ ಮಾದರಿಯು ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಹ್ಯುಂಡೈ ಐ20 ಸವಾಲನ್ನು ಎದುರಿಸಿತ್ತು.


Click it and Unblock the Notifications