ಭಾರತೀಯ ಕಾರು ಸಂಸ್ಥೆಗಳ ನೆರವು ಕೋರಿದ ವೋಲ್ವೋ?
ಸ್ವಿಡನ್‌ನ ಐಕಾನಿಕ್ ಹಾಗೂ ಐಷಾರಾಮಿ ವಾಹನ ನಿರ್ಮಾಣ ಸಂಸ್ಥೆಯಾಗಿರುವ ವೋಲ್ವೋ, ಭಾರತದಲ್ಲೇ ನಿರ್ಮಾಣ ಘಟಕ ತೆರೆಯುವ ಯೋಜನೆಯಲ್ಲಿದೆ. ಈ ನಿಟ್ಟಿನಲ್ಲಿ ದೇಶಿಯ ವಾಹನ ಸಂಸ್ಥೆಗಳ ನೆರವು ಯಾಚಿಸಿದೆ.
ಭಾರತೀಯ ವಾಹನ ಸಂಸ್ಥೆಗಳ ಘಟಕದಲ್ಲೇ ಸ್ಥಳೀಯವಾಗಿ ಜೋಡಣೆ ಕಾರ್ಯ ಆರಂಭಿಸುವುದು ವೋಲ್ವೋ ಯೋಜನೆಯಾಗಿದೆ. ಇದರಂತೆ ದೇಶದ ಮುಂಚೂಣಿಯ ಸಂಸ್ಥೆಗಳಾದ ಮಹೀಂದ್ರ ಆಂಡ್ ಮಹೀಂದ್ರ, ಹಿಂದೂಸ್ತಾನ್ ಮೋಟಾರ್ಸ್ ಹಾಗೂ ಜನರಲ್ ಮೋಟಾರ್ಸ್ ಇಂಡಿಯಾ ಸಂಸ್ಥೆಗಳನ್ನು ಸಮೀಪಿಸಿದೆ.

ಭಾರತದಲ್ಲೇ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ನೀಡುವ ಮೂಲಕ ವೋಲ್ವೋ ವಾಹನಗಳು ಸ್ಮರ್ಧಾತ್ಮಕ ಬೆಲೆಗಳಲ್ಲಿ ಮಾರಾಟ ಮಾಡಲು ಸಹಕಾರಿಯಾಗಲಿದೆ. ದೇಶದ ಲಗ್ಷುರಿ ಎಸ್‌ಯುವಿ ಪರಿಚಯಿಸುವ ಯೋಜನೆಯನ್ನು ವೋಲ್ವೋ ಹೊಂದಿದೆ.
ಹಾಗಿದ್ದರೂ ಮಾತುಕತೆಯ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು ವೋಲ್ವೋ ಆಟೋ ಇಂಡಿಯಾ ವಕ್ತಾರ ನಿರಾಕರಿಸಿದ್ದಾರೆ. ಇನ್ನೊಂದೆಡೆ ಜನರಲ್ ಮೋಟಾರ್ಸ್ ಹಾಗೂ ಹಿಂದೂಸ್ತಾನ್ ಮೋಟಾರ್ಸ್ ಸಹ ಗುಟ್ಟು ಬಹಿರಂಗಪಡಿಸಿಲ್ಲ.
ದೇಶದ ಐಷಾರಾಮಿ ಮಾರುಕಟ್ಟೆಯಲ್ಲಿ ಶೇ.15ರಷ್ಟು ಶೇರು ವಶಪಡಿಸಿಕೊಳ್ಳುವ ಇರಾದೆಯಲ್ಲಿ ವೋಲ್ವೋ ಸ್ಥಳೀಯವಾಗಿ ಜೋಡಣೆ ಪ್ರಕ್ರಿಯೆ ಆರಂಭಿಸಲಿದೆ ಎಂಬುದು ಶುಭ ಸೂಚಕವಾಗಿದೆ. 2007ನೇ ಇಸವಿಯಲ್ಲಿ ಭಾರತಕ್ಕೆ ಎಂಟ್ರಿ ಕೊಟ್ಟಿರುವ ವೋಲ್ವೋ ಆಟೋ ಇಂಡಿಯಾ (ವಿಎಐ), ಭಾರತದಲ್ಲಿ ಎಸ್80, ಎಸ್60, ಎಸ್‌ಯುವಿ, ಎಕ್ಸ್‌ಸಿ60, ಎಕ್ಸ್‌ಸಿ90 ಹಾಗೂ ವಿ40 ಕ್ರಾಸ್ ಕಂಟ್ರಿ ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಸಂಸ್ಥೆಯು ನವದೆಹಲಿ ಹೊರತಾಗಿ ಬೆಂಗಳೂರು, ಗುರ್ಗಾಂವ್, ಅಹಮಾದಾಬಾದ್, ಸೂತರ್, ಮುಂಬೈ, ಚಂಡೀಗಡ, ಕೊಯಂಬತ್ತೂರು, ಹೈದರಾಬಾದ್, ಚೆನ್ನೈ, ಕೊಚ್ಚಿ, ವಿಶಾಖಪಟ್ಟಣ ಹಾಗೂ ಪುಣೆಯಲ್ಲಿ ಡೀಲರ್‌ಶಿಪ್‌ಗಳನ್ನು ಹೊಂದಿದೆ.


Click it and Unblock the Notifications








