ಎರಡನೇ ವಾಹನ ಖರೀದಿಸುವ ಮೊದಲು ಎರಡೆರಡು ಬಾರಿ ಯೋಚಿಸಿ!
ನೀವು ನಿಮ್ಮ ಮನೆಗೆ ಎರಡನೇ ಕಾರು ಅಥವಾ ಬೈಕ್ ಖರೀದಿಸುವ ಯೋಚನೆಯಲ್ಲಿದ್ದೀರಾ? ಹಾಗಿದ್ದರೆ ಮೊದಲು ಎರಡೆರಡು ಬಾರಿ ಯೋಚಿಸಿದರೆ ಒಳಿತು. ಯಾಕೆಂದರೆ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ಎರಡನೇ ವಾಹನಗಳ ಮೇಲಿನ ರಸ್ತೆ ತೆರಿಗೆಯನ್ನು ಗಣನೀಯವಾಗಿ ವೃದ್ಧಿಸಲು ನಿರ್ಧರಿಸಿದೆ.
ಅದು ಕಾರೇ, ಬೈಕೇ ಆಗಿರಬಹುದು ಅಥವಾ ಸೆಕೆಂಡ್ ಹ್ಯಾಂಡ್ ವಾಹನವಾಗಿರಬಹುದು. ನಿಮ್ಮ ಹೆಸರಲ್ಲಿ ಎರಡನೇ ವಾಹನ ಖರೀದಿಸಲು ಬಯಸುವುದಾದ್ದಲ್ಲಿ ಹೆಚ್ಚುವರಿ ತೆರಿಗೆ ಪಾವತಿಸಲು ತಯಾರಾಗಿರಿ. ಇದು ಮಾಲಿಕರನ್ನು ಎರಡೆರಡು ಬಾರಿ ಯೋಚಿಸುವಂತೆ ಮಾಡಿದೆ.

ಕರ್ನಾಟಕ ಮೋಟಾರು ವಾಹನ ಕಾಯ್ದೆಗೂ ಕೆಲವೊಂದು ತಿದ್ದುಪಡಿಯನ್ನು ಶಿಫಾರಸು ಮಾಡಿರುವ ಸಾರಿಗೆ ಇಲಾಖೆಯು ರಾಜ್ಯ ಸರಕಾರ ಅನುಮೋದನೆಗಾಗಿ ರವಾನಿಸಿದೆ.

ಇಲಾಖೆಯ ವರದಿ ಪ್ರಕಾರ ರಾಜ್ಯದಲ್ಲಿ 1.59 ಕೋಟಿಗಳಷ್ಟು ವಾಹನಗಳಿದ್ದು, ಇವುಗಳಲ್ಲಿ 60 ಲಕ್ಷಗಳಷ್ಟು ಬೆಂಗಳೂರು ನಗರದಲ್ಲಿ ಮಾತ್ರವಿದೆ. ಇವುಗಳ ಪೈಕಿ ಶೇಕಡಾ 75ರಷ್ಟು ದ್ವಿಚಕ್ರ ವಾಹನಗಳಾಗಿವೆ ಎಂಬುದು ಅಚ್ಚರಿ ಮೂಡಿಸುತ್ತದೆ.

ಇವೆಲ್ಲ ಪರಿಸ್ಥಿತಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಎರಡನೇ ವಾಹನದ ಮೇಲಿನ ತೆರಿಗೆಯನ್ನು ಹೆಚ್ಚಿಸಲು ಶಿಫಾರಸುಗೈಯಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈಗ ಶಿಫಾರಸು ಮಾಡಿರುವ ತಿದ್ದುಪಡಿಗಳು ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಅಂಗೀಕರಿಸಬೇಕಾದ ಅಗತ್ಯವಿದೆ. ಇದು ರಾಜ್ಯದ ಆಂತರಿಕ ನೀತಿಯಾಗಿರುವುದರಿಂದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಒಪ್ಪಿಗೆಯ ಅವಶ್ಯಕತೆಯಿರುವುದಿಲ್ಲ.

ಸದ್ಯ ಎರಡನೇ ವಾಹನಗಳ ಖರೀದಿ ಮೇಲೆ ತೆರಿಗೆಯನ್ನು ವಿಧಿಸಲಾಗುತ್ತಿಲ್ಲ. ನೂತನ ನಿಯಮ ಜಾರಿಗೆ ಬರುವುದರೊಂದಿಗೆ ಒಂದು ಹಂತದ ವರೆಗೆ ವಾಹನಗಳ ಸಾಂದ್ರತೆಗೆ ಕಡಿವಾಣ ಹಾಕಬಹುದಾಗಿದೆ. ಅಂತೆಯೇ ವಾಹನಗಳ ಆಧಾರದಲ್ಲಿ ತೆರಿಗೆಯಲ್ಲಿ ವ್ಯತ್ಯಯ ಕಂಡುಬರಲಿದೆ.

ಎಷ್ಟು ಪ್ರಮಾಣದಷ್ಟು ತೆರಿಗೆ ಹೇರಲಾಗುವುದು ಎಂಬುದು ತಿಳಿದು ಬಂದಿಲ್ಲ. ಹಾಗಿದ್ದರೂ ಶೇಕಡಾ 50ರಷ್ಟು ಹೆಚ್ಚುವರಿ ತೆರಿಗೆ ವಿಧಿಸುವಂತೆ ಶಿಫಾರಸು ಮಾಡುವ ಸಾಧ್ಯತೆಯಿದೆ. ಇದು ಸೆಕೆಂಡ್ ಹ್ಯಾಂಡ್ ವಾಹನಗಳಿಗೂ ಅನ್ವಯವಾಗಲಿದೆ.


Click it and Unblock the Notifications








