ಬಿಡುಗಡೆಗೂ ಮುನ್ನವೇ ಆಸ್ಟನ್ ಮಾರ್ಟಿನ್ ವ್ಯಾಂಗ್ವಿಷ್ ಝಗಾಟೊ ಕೂಪೆ ಸೋಲ್ಡ್ ಔಟ್!
ವಿಶ್ವದ ಅತ್ಯಂತ ಪ್ರತಿಷ್ಠಿತ ವಾಹನ ಸಂಸ್ಥೆಗಳಲ್ಲಿ ಒಂದಾಗಿರುವ ಆಸ್ಟನ್ ಮಾರ್ಟಿನ್, ಅತಿ ನೂತನ ವ್ಯಾಂಗ್ವಿಷ್ ಝಗಾಟೊ ಕೂಪೆ ಕಾರನ್ನು ಅನಾವರಣಗೊಳಿಸಿದೆ. ಬಲ್ಲ ಮೂಲಗಳ ಪ್ರಕಾರ ನೂತನ ಆಸ್ಟನ್ ಮಾರ್ಟಿನ್ ವ್ಯಾಂಗ್ವಿಷ್ ಝಗಾಟೊ ಕೂಪೆ ಕಾರು ಸೀಮಿತ 99 ಸಂಖ್ಯೆಗಳಲ್ಲಿ ಮಾತ್ರ ನಿರ್ಮಾಣವಾಗಲಿದ್ದು, ಬಿಡುಗಡೆಗೂ ಮುನ್ನವೇ ಎಲ್ಲವೂ ಮಾರಾಟವಾಗಿಬಿಟ್ಟಿವೆ.
ಕಳೆದ ತಿಂಗಳು ಇಟಲಿಯಲ್ಲಿ ನಡೆದ ವಿಲ್ಲ ಡಿ'ಸ್ಟೆ ಕಾಂಕ್ವಾರ್ಸ್ ಡಿ'ಎಲೆಗನ್ಸ್ ವಾಹನ ಪ್ರದರ್ಶನ ಮೇಳದಲ್ಲಿ ಆಸ್ಟನ್ ಮಾರ್ಟಿನ್ ವ್ಯಾಂಗ್ವಿಷ್ ಝಗಾಟೊ ಮೊದಲ ಬಾರಿಗೆ ಪ್ರದರ್ಶನ ಕಂಡಿತ್ತು. ಈಗ ಕೆಲವೇ ದಿನಗಳಲ್ಲಿ ಜಗತ್ತಿನ ಅತಿ ಬೇಡಿಕೆಯ ಕಾರುಗಳಲ್ಲಿ ಒಂದೆನಿಸಿಕೊಂಡಿದೆ.

ಇಟಲಿಯ ಐಕಾನಿಕ್ ವಿನ್ಯಾಸ ಸಂಸ್ಥೆ ಝಗಾಟೊ ಜೊತೆ ಸೇರಿಕೊಂಡು ಆಸ್ಟನ್ ಮಾರ್ಟಿನ್ ವ್ಯಾಂಗ್ವಿಷ್ ಕಾರನ್ನು ವಿನ್ಯಾಸಗೊಳಿಸಿದೆ. ಕಾನ್ಸೆಪ್ಟ್ ಹಾಗೂ ನಿರ್ಮಾಣ ಸಿದ್ಧ ಮಾದರಿಯಲ್ಲಿ ಹೆಚ್ಚಿನ ಬದಲಾವಣೆ ತರದಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಝಗಾಟೊ ಸಂಸ್ಥೆಯ ಜೊತೆಗೆ ಬಹಳ ಹಿಂದಿನಿಂದಲೇ ಒಡನಾಟವನ್ನು ಹೊಂದಿರುವ ಆಸ್ಟನ್ ಮಾರ್ಟಿನ್, ಈಗ ಈ ಜೊತೆಗಾರಿಕೆಯಲ್ಲಿ ಐದನೇ ಮಾದರಿಯನ್ನು ಹೊರತರುತ್ತಿದೆ.

ಈ ಹಿಂದೆ 1960ನೇ ಇಸವಿಯಲ್ಲಿ ಡಿಬಿ4 ಜಿಟಿ ಝಗಾಟೊ ಕಾರನ್ನು ಮೊದಲ ಬಾರಿಗೆ ಹೊರ ತರಲಾಗಿತ್ತು. ಇದು ಪ್ಯಾಪಕ ಪ್ರತಿಕ್ರಿಯೆಗೂ ಪಾತ್ರವಾಗಿತ್ತು.

ಆಸ್ಟನ್ ಮಾರ್ಟಿನ್ ವುಲ್ಕಾನ್, ಒನ್-77 ಮತ್ತು ಸಿಸಿ-100 ಮುಂತಾದ ಮಾದರಿಗಳಿಂದ ಸ್ಪೂರ್ತಿ ಪಡೆದುಕೊಂಡು ನೂತನ ಮಾದರಿಯನ್ನು ರಚಿಸಲಾಗಿದೆ.

ಕಾರ್ಬನ್ ಫೈಬರ್ ದೇಹ ವಿನ್ಯಾಸ, ಏರೋಡೈನಾಮಿಕ್ ವಿನ್ಯಾಸ ನೀತಿ ಹೀಗೆ ಹಲವಾರು ವಿನ್ಯಾಸ ನೀತಿಗಳನ್ನು ನೂತನ ಆಸ್ಟನ್ ಮಾರ್ಟಿನ್ ವ್ಯಾಂಗ್ವಿಷ್ ಝಗಾಟೊ ಕಾರಿನಲ್ಲಿ ಅನುಸರಿಸಲಾಗಿದೆ.

ಹಿಂಬದಿಯಲ್ಲಿ ಹೊಸತಾದ ಲೈಟ್ಸ್, ಆಧುನಿಕ ಎಲ್ ಇಡಿ ಲೈಟಿಂಗ್ ತಂತ್ರಜ್ಞಾನ, ಕೋನೀಯ ಡೋರ್ ಮಿರರ್ ಮತ್ತು ಇನ್ನು ಹಲವಾರು ರೇಸಿಂಗ್ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ನೂತನ ಆಸ್ಟನ್ ಮಾರ್ಟಿನ್ ವ್ಯಾಂಗ್ವಿಷ್ ಝಗಾಟೊ ಅತ್ಯಂತ ಶಕ್ತಿಶಾಲಿ ವಿ12 ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, ಬರೋಬ್ಬರಿ 576 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಕೇವಲ 3.5 ಸೆಕೆಂಡುಗಳಲ್ಲೇ 0-100 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿರಲಿದೆ.

ಅಂದ ಹಾಗೆ ಮುಂದಿನ ವರ್ಷ ಆರಂಭದಿಂದಲೇ ಎಲ್ಲ 99 ಆವೃತ್ತಿಗಳ ವಿತರಣೆ ಪ್ರಕ್ರಿಯೆಯು ಆರಂಭವಾಗಲಿದೆ.


Click it and Unblock the Notifications








