ಭಾರತದಲ್ಲಿ ಬಿಎಂಡಬ್ಲ್ಯು ಶಕ್ತಿಶಾಲಿ 520ಡಿ ಎಂ ಸ್ಪೋರ್ಟ್ ಬಿಡುಗಡೆ
ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಸಂಸ್ಥೆ ಬಿಎಂಡಬ್ಲ್ಯು, ಭಾರತದಲ್ಲಿ ಶಕ್ತಿಶಾಲಿ 520ಡಿ ಎಂ ಸ್ಪೋರ್ಟ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಇದು ಎಕ್ಸ್ ಶೋ ರೂಂ ಬೆಲೆ 54 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.
ಚೆನ್ನೈ ಘಟಕದಲ್ಲಿ ಸ್ಥಳೀಯವಾಗಿ ನಿರ್ಮಾಣವಾಗಲಿರುವ ಈ ಪರಿಷ್ಕೃತ ಡೀಸೆಲ್ 520ಡಿ ಎಂ ಸ್ಪೋರ್ಟ್ ಆವೃತ್ತಿಯು ವಾಹನ ಪ್ರೇಮಿಗಳ ಮನಸೊರೆಗೊಳ್ಳುವ ವಿಶ್ವಾಸವನ್ನು ಸಂಸ್ಥೆಯು ವ್ಯಕ್ತಪಡಿಸಿದೆ.

ಇಲ್ಲಿ 'ಎಂ' ಎಂಬುದು ಬಿಎಂಡಬ್ಲ್ಯು ಶಕ್ತಿಶಾಲಿ ಮೋಟಾರ್ ಸ್ಪೋರ್ಟ್ ವಿಭಾಗವನ್ನು ಸೂಚಿಸುತ್ತದೆ. ತನ್ಮೂಲಕ ಭಾರತದಲ್ಲೂ ಗರಿಷ್ಠ ನಿರ್ವಹಣಾ ವಾಹನಗಳ ಮಾರಾಟದತ್ತ ಬಿಎಂಡಬ್ಲ್ಯು ಹೆಚ್ಚಿನ ಆಸಕ್ತಿ ತೋರಿದೆ.

ಎಂಟು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ನೂತನ ಬಿಎಂಡಬ್ಲ್ಯು520ಡಿ ಎಂ ಸ್ಪೋರ್ಟ್, 7.7 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗ ಮತ್ತು ಗಂಟೆಗೆ ಗರಿಷ್ಠ 233 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಬಿಎಂಡಬ್ಲ್ಯು ಈ 5 ಸಿರೀಸ್ ಕಾರು, 1995 ಸಿಸಿ, ಫೋರ್ ಸಿಲಿಂಡರ್, ಟರ್ಬೊಚಾರ್ಜ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 400 ಎನ್ ಎಂ ತಿರುಗುಬಲದಲ್ಲಿ 187.4 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಇಕೊ ಪ್ರೊ, ಕಂಫರ್ಟ್ ಮತ್ತು ಸ್ಪೋರ್ಟ್ ಗಳೆಂಬ ಮೂರು ಚಾಲನಾ ವಿಧಗಳನ್ನು ಬಿಎಂಡಬ್ಲ್ಯು 520ಡಿ ಎಂ ಸ್ಪೋರ್ಟ್ ಪಡೆಯಲಿದೆ. ಅಲ್ಲದೆ ಇಂಧನ ಉಳಿತಾಯಕ್ಕಾಗಿ ಆಟೋಮ್ಯಾಟಿಕ್ ಸ್ಟ್ಯಾರ್ಟ್/ಸ್ಟಾಪ್ ತಂತ್ರಗಾರಿಕೆಯು ಜೊತೆಗಿರುತ್ತದೆ.

ವಿನ್ಯಾಸದ ಬಗ್ಗೆ ಮಾತನಾಡುವುದಾದ್ದಲ್ಲಿ ಮುಂಭಾಗದಲ್ಲಿ ಅಡಾಪ್ಟಿವ್ ಹೆಡ್ ಲೈಟ್, ಎಂ ಬ್ಯಾಡ್ಜ್ ಮತ್ತು ಬದಿಗಳಲ್ಲಿ 18 ಇಂಚುಗಳ ಹಗುರ ಭಾರದ 10 ಸ್ಪೋಕ್ ಅಲಾಯ್ ಚಕ್ರಗಳು ಜೋಡಣೆಯಾಗಿದೆ.

ಕಾರಿನೊಳಗೆ ಲೆಥರ್ ಹೋದಿಕೆ, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಸ್ಪೋರ್ಟ್ಸ್ ಸೀಟು, 10.1 ಇಂಚುಗಳ ಇನ್ಪೋಟೈನ್ಮೆಂಟ್ ಸಿಸ್ಟಂ ಹಾಗೂ ಬಿಎಂಡಬ್ಲ್ಯು ಐ-ಡ್ರೈವ್ ಸಿಸ್ಟಂಗಳಿರಲಿದೆ. ಜಿಪಿಎಸ್ ನೇವಿಗೇಷನ್, ಬ್ಲೂಟೂತ್ ಮತ್ತು ಯುಎಸ್ ಬಿ ಕನೆಕ್ಟಿವಿಟಿ ಸೇವೆಯು ಇರುತ್ತದೆ.

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಸೈಡ್ ಇಂಪಾಕ್ಟ್ ಪ್ರೊಟೆಕ್ಷನ್, ಎಲೆಕ್ಟ್ರಾನಿಕ್ ವೆಹಿಕಲ್ ಇಂಮೊಬಿಲೈಜರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಪಾರ್ಕ್ ಡಿಸ್ಟಾನ್ಸ್ ಕಂಟ್ರೋಲ್ ಮತ್ತು ಕ್ರಾಶ್ ಸೆನ್ಸಾರ್ ಮುಂತಾದ ಸೌಲಭ್ಯಗಳಿರಲಿದೆ.


Click it and Unblock the Notifications