ಮಹೀಂದ್ರ ನುವೊಸ್ಪೋರ್ಟ್ ಖರೀದಿಸಲು ಬಯಸುವೀರಾ? ಬುಕ್ಕಿಂಗ್ ಮೊತ್ತವೆಷ್ಟು?
2016 ಎಪ್ರಿಲ್ 04ರಂದು ಬಿಡುಗಡೆಗೆ ಸಜ್ಜಾಗಿರುವಂತೆಯೇ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಅತಿ ನೂತನ ನುವೊಸ್ಪೋರ್ಟ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಆಸಕ್ತ ಗ್ರಾಹಕರು ಮಹೀಂದ್ರ ಅಧಿಕೃತ ಡೀಲರ್ ಗಳ ಬಳಿ ತೆರಳಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.
ವಾಹನ ಮೂಲಗಳ ಪ್ರಕಾರ ಮಹೀಂದ್ರ ನುವೊಸ್ಪೋರ್ಟ್ ಮುಂಗಡ ಬುಕ್ಕಿಂಗ್ ಮೊತ್ತವನ್ನು 10,000 ರು.ಗಳಿಗೆ ನಿಗದಿಪಡಿಸಲಾಗಿದೆ. ಈ ಮುಖಾಂತರ ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ಭರ್ಜರಿ ಪುನರಾಗಮನವನ್ನು ಎದುರು ನೋಡುತ್ತಿದೆ.

ಮಹೀಂದ್ರ ನುವೊಸ್ಪೋರ್ಟ್ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವು ಇದೇ ಬರುವ ಎಪ್ರಿಲ್ 04ರಂದು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ.

ಬುಕ್ಕಿಂಗ್ ಬಗ್ಗೆ ಮಹೀಂದ್ರದಿಂದ ಅಧಿಕೃತ ಪ್ರಕಟಣೆಗಳು ಬಂದಿಲ್ಲ. ಆದರೂ ಡೀಲರ್ ಗಳ ಬಳಿ 10,000 ರುಪಾಯಿಗಳನ್ನು ಮುಂಗಡವಾಗಿ ಪಾವತಿಸಿದ್ದಲ್ಲಿ ಬುಕ್ಕಿಂಗ್ ಸ್ವೀಕರಿಸಲಾಗುತ್ತಿದೆ.

ನಿಮ್ಮ ಮಾಹಿತಿಗಾಗಿ, ಹಳೆಯ ಕ್ವಾಂಟೊ ಪರಿಷ್ಕೃತ ರೂಪದಲ್ಲಿ ಮತ್ತೆ ಮಾರುಕಟ್ಟೆಗೆ ಅಪ್ಪಳಿಸುತ್ತಿದ್ದು ನುವೊಸ್ಪೋರ್ಟ್ ಎಂಬ ಹೆಸರಿನಿಂದ ಗುರುತಿಸಲ್ಪಡಲಿದೆ. ಇಲ್ಲಿ ಕ್ಸೈಲೋ ಬದಲಾಗಿ ಸ್ಕಾರ್ಪಿಯೊ ತಳಹದಿಯನ್ನು ಉಪಯೋಗಿಸಲಾಗಿದೆ.

ಹೊಸ ಹೆಡ್ ಲ್ಯಾಂಪ್, ಡೇಟೈಮ್ ರನ್ನಿಂಗ್ ಲೈಟ್ಸ್, ದೊಡ್ಡದಾದ ಏರ್ ಡ್ಯಾಮ್, ಕ್ರೀಡಾತ್ಮಕ ಬಂಪರ್ ಮತ್ತು ಕ್ರೋಮ್ ಸ್ಪರ್ಶಿತ ಫಾಗ್ ಲ್ಯಾಂಪ್ ಗಳಿರಲಿದೆ. ಹಿಂಬದಲ್ಲಿ ಟೈಲ್ ಲ್ಯಾಂಪ್ ಮತ್ತು ಹೆಚ್ಚುವರಿ ಚಕ್ರಗಳು ಕಂಡುಬರಲಿದೆ.

ಕಾರಿನೊಳಗೆ ಪರಿಷ್ಕೃತ ಡ್ಯಾಶ್ ಬೋರ್ಡ್, ಮಾಹಿತಿ ಮನರಂಜನಾ ವ್ಯವಸ್ಥೆಗಳು ಇರಲಿದೆ. ಅಂತೆಯೇ ಸುರಕ್ಷತೆಗೂ ಆದ್ಯತೆ ಕೊಡಲಾಗಿದ್ದು, ಎಬಿಎಸ್, ಕ್ರೂಸ್ ಕಂಟ್ರೋಲ್ ಮತ್ತು ಡ್ಯುಯಲ್ ಎರ್ ಬ್ಯಾಗ್ ವ್ಯವಸ್ಥೆಯಿರಲಿದೆ.

ಇನ್ನು ಕಾರಿನಡಿಯಲ್ಲಿ 1.5 ಲೀಟರ್ ತ್ರಿ ಸಿಲಿಂಡರ್ ಎಂಹಾಕ್ ಡೀಸೆಲ್ ಎಂಜಿನ್ ಇರಲಿದ್ದು, 240 ಎನ್ ಎಂ ತಿರುಗುಬಲದಲ್ಲಿ 100 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇರಲಿದೆ.


Click it and Unblock the Notifications








