ಹ್ಯುಂಡೈ ಟಕ್ಸನ್ ಬೆನ್ನಲ್ಲೇ ಮಗದೊಂದು ಮಿನಿ ಎಸ್ ಯುವಿ ಭಾರತಕ್ಕೆ
ಭಾರತದಲ್ಲಿ ಧೀರ್ಘ ದೃಷ್ಟಿಯನ್ನು ಹಾಯಿಸಿರುವ ಹ್ಯುಂಡೈ ಹಂತ ಹಂತವಾಗಿ ಮತ್ತಷ್ಟು ಕ್ರೀಡಾ ಬಳಕೆಯ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಿರಿಸಿಕೊಂಡಿದೆ.
ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ ಇಂಡಿಯಾ ಇತ್ತೀಚೆಗಷ್ಟೇ ಟಕ್ಸನ್ ಪ್ರೀಮಿಯಂ ಕ್ರೀಡಾ ಬಳಕೆಯ ವಾಹನವನ್ನು (ಎಸ್ ಯುವಿ) ಬಿಡುಗಡೆಗೊಳಿಸಿತ್ತು. ಈಗ ದಕ್ಷಿಣ ಕೊರಿಯಾ ಮೂಲದ ಈ ಜನಪ್ರಿಯ ವಾಹನ ಸಂಸ್ಥೆಯು ಮಗದೊಂದು ಮಿನಿ ಎಸ್ ಯುವಿ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ಕ್ರೆಟಾ, ಟಕ್ಸನ್, ಸಾಂಟಾಫೆ ಗಳಂತಹ ಆಕರ್ಷಕ ಮಾದರಿಗಳನ್ನು ಪರಿಚಯಿಸಿರುವ ಹ್ಯುಂಡೈ, ತನ್ನ ಮಾರಾಟವನ್ನು ಮತ್ತಷ್ಟು ಕುದುರಿಸಿಕೊಳ್ಳುವ ಇರಾದೆಯಲ್ಲಿದೆ.

ಹ್ಯುಂಡೈ ಮಿನಿ ಎಸ್ ಯುವಿ 2019ನೇ ಸಾಲಿನಲ್ಲಿ ಮಾರುಕಟ್ಟೆ ಪ್ರವೇಶಿಸಲಿದ್ದು, ಪ್ರಮುಖವಾಗಿಯೂ ಮಾರುತಿ ವಿಟಾರಾ ಬ್ರಿಝಾ, ಫೋರ್ಡ್ ಇಕೊಸ್ಪೋರ್ಟ್ ಮತ್ತು ರೆನೊ ಡಸ್ಟರ್ ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಇಲ್ಲಿಗೆ ಹ್ಯುಂಡೈ ಯೋಜನೆ ಕೊನೆಗೊಳ್ಳುವುದಿಲ್ಲ. ಐಯೊನಿಕ್ ಪೆಟ್ರೋಲ್-ಎಲೆಕ್ಟ್ರಿಕ್ ಹೈಬ್ರಿಡ್ ಮತ್ತು ಐಷಾರಾಮಿ ಜೆನಿಸಿಸ್ ನಿರ್ವಹಣಾ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಪ್ರಸ್ತುತ ದಶಕವು ಕೊನೆಯ ಹಂತವನ್ನು ತಲುಪಿದ್ದು, ಈ ನಿಟ್ಟಿನಲ್ಲಿ 2017ರಿಂದ 2019ರ ವರೆಗಿನ ಅವಧಿಯಲ್ಲಿ ಹ್ಯುಂಡೈ ಸ್ಪಷ್ಟವಾದ ಯೋಜನೆಯನ್ನು ಹೊಂದಿದೆ.

ಭಾರತದಲ್ಲಿ ಕಳೆದ ಸಾಲಿನಲ್ಲಿ 4.76 ಲಕ್ಷ ಯುನಿಟ್ ಗಳ ಮಾರಾಟವನ್ನು ಕಂಡುಕೊಂಡಿದ್ದ ಹ್ಯುಂಡೈ ಪ್ರಸಕ್ತ ಸಾಲಿನಲ್ಲಿ 5.15 ಲಕ್ಷ ಯುನಿಟ್ ಗಳಷ್ಟು ಮಾರಾಟವನ್ನು ಗುರಿಯಿರಿಸಿಕೊಂಡಿದೆ.

ವರ್ಷಾರಂಭದಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ಹ್ಯುಂಡೈ ಐ20 ತಳಹದಿಯಲ್ಲಿ ನಿರ್ಮಿತ ಕಾರ್ ಲಿನೊ ಎಂಬ ಕಾಂಪಾಕ್ಟ್ ಎಸ್ ಯುವಿ ಕಾರನ್ನು ಪರಿಚಯಿಸಿತ್ತು.

ಇದೇ ಕಾರು 2018 ವರ್ಷಾಂತ್ಯದಲ್ಲಿ ಅಥವಾ 2019 ವರ್ಷಾರಂಭದಲ್ಲಿ ದೇಶಕ್ಕೆ ಲಗ್ಗೆಯಿಡುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಹೈದರಾಬಾದ್ ನ ಅಧ್ಯಯನ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ ನಿರತ ಕೆಲಸದಲ್ಲಿ ತೊಡಗಿಸಿಕೊಂಡಿದೆ.

ಕಾರ್ಲಿನೊ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಬ್ಯವಾಗಲಿದೆ. ಇದರ 1.3 ಲೀಟರ್ 3 ಸಿಲಿಂಡರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ 172 ಎನ್ ಎಂ ತಿರುಗುಬಲದಲ್ಲಿ 118 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಹಾಗೆಯೇ 1.4 ಲೀಟರ್ ಸಿಆರ್ ಡಿಐ ಎಂಜಿನ್ 224 ಎನ್ ಎಂ ತಿರುಗುಬಲದಲ್ಲಿ 89 ಅಶ್ವಶಕ್ತಿಯನ್ನು ನೀಡಲಿದೆ. ಇವೆರಡು ಐದು ಸ್ಪೀಡ್ ಮ್ಯಾನುವಲ್ ಮತ್ತು ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ.

ಅಂತಿಮವಾಗಿ ಬೆಲೆಯ ಬಗ್ಗೆ ಗಮನ ಹಾಯಿಸಿದಾಗ ಹ್ಯುಂಡೈ ಕಾಂಪಾಕ್ಟ್ ಎಸ್ ಯುವಿ ದೇಶದಲ್ಲಿ 6.5 ಲಕ್ಷ ರು.ಗಳಿಂದ ಒಂಬತ್ತು ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.


Click it and Unblock the Notifications








