ಕ್ರೆಟಾ ಡಬಲ್ ಧಮಾಕಾ; ವಾರ್ಷಿಕ ಆವೃತ್ತಿ ಜೊತೆಗೆ 'ಇ ಪ್ಲಸ್' ಬಿಡುಗಡೆ
ಭಾರತದ ನಂ.1 ಕಾರು ಸಂಸ್ಥೆ ಮಾರುತಿ ಸುಜುಕಿಗೆ ಪ್ರಬಲ ಪೈಪೋಟಿಯನ್ನು ಒಡ್ಡುತ್ತಿರುವ ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಕಂಪನಿ ಹ್ಯುಂಡೈ, ತನ್ನ ಜನಪ್ರಿಯ ಕ್ರೆಟಾ ಕ್ರೀಡಾ ಬಳಕೆಯ ಕಾರಿನ ಒಂದನೇ ವಾರ್ಷಿಕೋತ್ಸದ ಸಂಭ್ರಮಾಚರಣೆಯ ಭಾಗವಾಗಿ ಎರಡು ವಿಶೇಷ ಕೊಡುಗೆಗಳನ್ನು ನೀಡಿದೆ.
ಹ್ಯುಂಡೈ 'ಕ್ರೆಟಾ ವಾರ್ಷಿಕ ಆವೃತ್ತಿ'ಯ ಜೊತೆ ಜೊತೆಗೆ ನೂತನ ಇ' ಪ್ಲಸ್' ಪೆಟ್ರೋಲ್ ವೆರಿಯಂಟನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ. ಇದರೊಂದಿಗೆ ಹ್ಯುಂಡೈ ಕಾರು ಪ್ರೇಮಿಗಳಿಗೆ ಡಬಲ್ ಧಮಾಕಾ ದೊರಕಿದಂತಾಗಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಹ್ಯುಂಡೈ ಕ್ರೆಟಾ ವಾರ್ಷಿಕ ಆವೃತ್ತಿ
ಪೆಟ್ರೋಲ್ (ಮ್ಯಾನುವಲ್): 12.23 ಲಕ್ಷ ರು.
ಡೀಸೆಲ್ (ಮ್ಯಾನುವಲ್): 13.76 ಲಕ್ಷ ರು.
ಕ್ರೆಟಾ ಇ ಪ್ಲಸ್: 9.99 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಎಸ್ ಎಕ್ಸ್ ಪ್ಲಸ್ ಗ್ರೇಡ್ ತಳಹದಿಯಲ್ಲಿ ನಿರ್ಮಾಣಗೊಂಡಿರುವ ಹ್ಯುಂಡೈ ಕ್ರೆಟಾ ವಾರ್ಷಿಕ ಆವೃತ್ತಿಯು ಕಾಂಟ್ರಾಸ್ಟ್ ಬ್ಲ್ಯಾಕ್ ರೂಫ್, ಕಪ್ಪು ವರ್ಣದ ಸಿ ಪಿಲ್ಲರ್, ಇಂಟೇಗ್ರೇಟಡ್ ಸ್ಪಾಯ್ಲರ್, ಡ್ಯುಯಲ್ ಟೋನ್ 17 ಇಂಚುಗಳ ಅಲಾಯ್ ಚಕ್ರಗಳು (ಎಸ್ ಎಕ್ಸ್ ಐಚ್ಛಿಕ ಆವೃತ್ತಿಯಲ್ಲಿರುವುದಕ್ಕೆ ಸಮಾನ), ಸಿಲ್ವರ್ ಸ್ಕಿಡ್ ಪ್ಲೇಟ್ ಹಾಗೂ ವಿಶೇಷ ಬಾಡಿ ಗ್ರಾಫಿಕ್ಸ್ ಗಳನ್ನು ಪಡೆಯಲಿದೆ.

ಕಾರಿನೊಳಗೆ ಡ್ಯುಯಲ್ ಟೋನ್ ಬ್ಲ್ಯಾಕ್, ಗ್ರೇ ಡ್ಯಾಶ್ ಬೋರ್ಡ್, ಎಸಿ ವೆಂಟ್ಸ್ ಗಳಲ್ಲಿ ಕೆಂಪು ಪಟ್ಟಿ, ಫ್ಯಾಬ್ರಿಕ್ ಹೋದಿಕೆ, ಲೆಥರ್ ಹೋದಿಕೆಯ ಸ್ಟೀರಿಂಗ್ ವೀಲ್ ಮುಂತಾದ ಸೌಲಭ್ಯಗಳಿರಲಿದೆ.

ಎಂಜಿನ್
1.6 ಲೀಟರ್ ಪೆಟ್ರೋಲ್: 122 ಅಶ್ವಶಕ್ತಿ, 154 ಎನ್ ಎಂ ತಿರುಗುಬಲ
1.6 ಲೀಟರ್ ಡೀಸೆಲ್: 126 ಅಶ್ವಶಕ್ತಿ, 256 ಎನ್ ಎಂ ತಿರುಗುಬಲ

ಇದೇ ಸಂದರ್ಭದಲ್ಲಿ ನೂತನ ಕ್ರೆಟಾ ಇ ಪ್ಲಸ್ ವೆರಿಯಂಟ್ ಸಹ ಬಿಡುಗಡೆ ಮಾಡಲಾಗಿದೆ. ಇದು ಸಾಮಾನ್ಯ ಇ ವೆರಿಯಂಟ್ ಗಿಂತಲೂ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿದೆ.

ನೂತನ ಕ್ರೆಟಾ ಇ ಪ್ಲಸ್ ವೆರಿಯಂಟ್, ಟಚ್ ಸ್ಕ್ರೀನ್ ಆಡಿಯೋ ಸಿಸ್ಟಂ, ಸ್ಟೀರಿಂಗ್ ಮೌಂಟೆಡ್ ಆಡಿಯೋ, ಬ್ಲೂಟೂತ್ ಕಂಟ್ರೋಲ್, ರೂಫ್ ರೈಲ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ರಿಯರ್ ವ್ಯೂ ಮಿರರ್, ಎಲ್ ಇಡಿ ಟರ್ನ್ ಇಂಡಿಕೇಟರ್ ಹಾಗೂ ರಿಯರ್ ಎಸಿ ವೆಂಟ್ಸ್ ಸೇವೆಗಳನ್ನು ಪಡೆಯಲಿದೆ.

ಅಂತೆಯೇ ಬೇಸ್ ಇ ವೆರಿಯಂಟ್ ತರಹನೇ ಇ ಪ್ಲಸ್ ವೆರಿಯಂಟ್, 1.6 ಲೀಟರ್ ವಿಟಿವಿಟಿ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, ಆರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇರುತ್ತದೆ.

ಇತ್ತೀಚೆಗಷ್ಟೇ ಹ್ಯುಂಡೈ ಸಂಸ್ಥೆಯು ಅರ್ಜುನ ಪ್ರಶಸ್ತಿ, ರಾಜೀವ್ ಗಾಂಧಿ ಖೇಲ್ ರತ್ನ, ಪದ್ಮ ಶ್ರೀ ಮತ್ತು ಪದ್ಮ ಭೂಷಣ್ ಪ್ರಶಸ್ತಿಗಳಿಗೆ ಭಾಜನವಾಗಿರುವ ಭಾರತದ ಬ್ಯಾಡ್ಮಿಂಟನ್ ಪಟು ಸೈನಾ ನೆಹ್ವಾಲ್ ಅವರಿಗೆ ಕ್ರೆಟಾ ವಾರ್ಷಿಕ ಆವೃತ್ತಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ಗೌರವಿಸಿತ್ತು.


Click it and Unblock the Notifications