ಬಲೆನೊಗೆ ಸೆಡ್ಡು ನೀಡಲು ಹ್ಯುಂಡೈ ಹೊಸ ರಣತಂತ್ರ
ಪ್ರೀಮಿಯಂ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಮಾರುತಿ ಬಲೆನೊ ಭಾರಿ ಮಾರಾಟವನ್ನು ಗಿಟ್ಟಿಸಿಕೊಳ್ಳುತ್ತಿದೆ. ಸಹಜವಾಗಿಯೇ ಇದರಿಂದಾಗಿ ಈ ಸೆಗ್ಮೆಂಟ್ ನಲ್ಲಿ ಗರಿಷ್ಠ ಮಾರಾಟ ಗಿಟ್ಟಿಸಿಕೊಳ್ಳುತ್ತಿದ್ದ ಹ್ಯುಂಡೈ ಎಲೈಟ್ ಐ20 ಹಿನ್ನಡೆಯನ್ನು ಅನುಭವಿಸಿದೆ.
ಇಲ್ಲಿಗೆ ತನ್ನ ಪ್ರಯತ್ನವನ್ನು ನಿಲ್ಲಿಸದ ಹ್ಯುಂಡೈ ಸಂಸ್ಥೆಯೀಗ ಹೊಸ ತಂತ್ರಗಾರಿಕೆಯೊಂದಿಗೆ ಬಲೆನೊ ಸವಾಲನ್ನು ಎದುರಿಸಲು ಸಜ್ಜಾಗುತ್ತಿದೆ. ಬಲ್ಲ ಮೂಲಗಳ ಪ್ರಕಾರ ಮುಂಬರುವ ಹಬ್ಬದ ಆವೃತ್ತಿಯ ವೇಳೆಯಲ್ಲಿ ಹ್ಯುಂಡೈ ಎಲೈಟ್ ಐ20, ಏಳು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ.

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಹ್ಯುಂಡೈ ಎಲೈಟ್ ಐ20 ಪೆಟ್ರೋಲ್ ಟಾಪ್ ಎಂಡ್ ವೆರಿಯಂಟ್ ಆಗಿರುವ ಆಸ್ಟಾ (ಐಚ್ಛಿಕ) ಮಾದರಿಯಲ್ಲಿ ಏಳು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೂ ಲಭ್ಯವಾಗಲಿದೆ.

ಹ್ಯುಂಡೈ ಐ20 ಆಸ್ಟಾ ಮಾದರಿಯು 1.2 ಲೀಟರ್ ಕಪ್ಪಾ ಡ್ಯುಯಲ್ ವಿಟಿವಿಟಿ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಇದರ ಡೀಸೆಲ್ ಆವೃತ್ತಿಯಲ್ಲಿ 1.4 ಲೀಟರ್ ಸಿಆರ್ ಡಿಐ ಟರ್ಬೊಚಾರ್ಜ್ಡ್ ಎಂಜಿನ್ ಆಯ್ಕೆಯಿರುತ್ತದೆ.

ಸದ್ಯ ಮಾರಾಟದಲ್ಲಿರುವ ಪೆಟ್ರೋಲ್ ಆವೃತ್ತಿಯು ಫೈವ್ ಸ್ಪೀಡ್ ಮ್ಯಾನುವಲ್ ಮತ್ತು ಡೀಸೆಲ್ ವೆರಿಯಂಟ್ ಆರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದುಕೊಂಡಿದೆ.

ಹ್ಯುಂಡೈ ಎಲೈಟ್ ಐ20 ಆಸ್ಟಾ (ಐಚ್ಛಿಕ) ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳು ಅನುಕ್ರಮವಾಗಿ ಪ್ರತಿ ಲೀಟರ್ ಗೆ 18.06 ಮತ್ತು 22.54 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಸದ್ಯ ಮಾರುಕಟ್ಟೆಯಲ್ಲೀಗ ಫೋರ್ಡ್ ಫಿಗೊ ಹಾಗೂ ಫೋಕ್ಸ್ ವ್ಯಾಗನ್ ಟಿಎಸ್ ಐ ಕಾರುಗಳು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿದೆ. ಇನ್ನೊಂದೆಡೆ ಹ್ಯುಂಡೈ ಏಳು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೂ ಹೊಸತನಕ್ಕೆ ಕಾರಣವಾಗಲಿದೆ.

ಹ್ಯುಂಡೈ ಎಲೈಟ್ ಐ20 ಪೆಟ್ರೋಲ್ ಟಾಪ್ ಎಂಡ್ ಮಾದರಿಯು 7.69 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತಿದೆ. ನೂತನ ಏಳು ಸ್ಪೀಡ್ ಆಟೋಮ್ಯಾಟಿಕ್ ಆವೃತ್ತಿಯು ಅಂದಾಜು 8.50 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.


Click it and Unblock the Notifications