ಹ್ಯುಂಡೈ ಐ10 ಪರಿಷ್ಕೃತ ಆವೃತ್ತಿ ಅನಾವರಣ
ಯುರೋಪ್ ಮಾರುಕಟ್ಟೆಗಾಗಿ ಸಿದ್ಧಗೊಂಡಿರುವ ಎರಡನೇ ತಲೆಮಾರಿನ ಪರಿಷ್ಕೃತ ಹ್ಯುಂಡೈ ಐ10 ಕಾರನ್ನು ಅನಾವರಣಗೊಳಿಸಲಾಗಿದೆ. ಈ ಸಂಬಂಧ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆಯು ಆಕರ್ಷಕ ವಿಡಿಯೋವನ್ನು ಬಿಡುಗಡೆಗೊಳಿಸಿದೆ.
ಮುಂಬರುವ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ 2016 ಪ್ಯಾರಿಸ್ ಮೋಟಾರು ಶೋದಲ್ಲಿ ಅಧಿಕೃತವಾಗಿ ಜಾಗತಿಕ ಅನಾವರಣಗೊಳ್ಳಲಿರುವ ನೂತನ ಹ್ಯುಂಡೈ ಐ10, 2017 ವರ್ಷಾರಂಭದಲ್ಲಿ ಬ್ರಿಟನ್ ಮಾರುಕಟ್ಟೆಯನ್ನು ತಲುಪಲಿದೆ.

ಹ್ಯುಂಡೈ ಗ್ರಾಂಡ್ ಐ10 ಪರಿಷ್ಕೃತ ಮಾದರಿಯು ಹೊರಮೈಯಲ್ಲಿ ಕೆಲವೊಂದು ಗಮನಾರ್ಹ ಬದಲಾವಣೆಗಳನ್ನು ಪಡೆದುಕೊಂಡಿದೆ. ಪರಿಷ್ಕೃತ ಗ್ರಿಲ್, ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಹೊಸತಾದ ಫಾಗ್ ಲ್ಯಾಂಪ್ ಎದ್ದು ಕಾಣಿಸುತ್ತದೆ.

ಇನ್ನು ಬದಿಯಲ್ಲಿ ಕ್ರೀಡಾತ್ಮಕ ಸ್ಪರ್ಶ ನೀಡಲಾಗಿದ್ದು, 14 ಇಂಚುಗಳ ಅಲಾಯ್ ಚಕ್ರಗಳು ಇದರಲ್ಲಿದೆ. ಹಿಂದುಗಡೆಯು ಪರಿಷ್ಕೃತ ಬಂಪರ್ ಪ್ರಮುಖ ಆಕರ್ಷಣೆಯಾಗಿದೆ.

ಕಾರಿನೊಳಗೆ ಏಳು ಇಂಚುಗಳ ಮಾಹಿತಿ ಮನರಂಜನಾ ಪರದೆ ಜೊತೆ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಮುಂಭಾಗದಲ್ಲಿ ಢಿಕ್ಕಿ ಎಚ್ಚರಿಕೆ ಹಾಗೂ ಲೇನ್ ನಿರ್ಗಮನ ಎಚ್ಚರಿಕಾ ವ್ಯವಸ್ಥೆಗಳಿರಲಿದೆ.

ಯುರೋಪ್ ಮಾರುಕಟ್ಟೆಗಾಗಿ 1.0 ಲೀಟರ್ ಹಾಗೂ 1.25 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯಿರಲಿದೆ. ಇದು 5 ಸ್ಪೀಡ್ ಮ್ಯಾನುವಲ್ ಹಾಗೂ 4 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ.

ಭಾರತದಲ್ಲೂ ಹ್ಯುಂಡೈ ಗ್ರಾಂಡ್ ಐ10 ಪರಿಷ್ಕೃತ ಮಾದರಿಯ ಬಿಡುಗಡೆ ಯೋಜನೆಯನ್ನು ಸಂಸ್ಥೆಯು ಹೊಂದಿದೆ. ಈ ಸಂಬಂಧ ರಹಸ್ಯ ಚಿತ್ರಗಳನ್ನು ಈಗಾಗಲೇ ಸೆರೆ ಹಿಡಿಯಲಾಗಿದೆ.

ಬಹುನಿರೀಕ್ಷಿತ ಹ್ಯುಂಡೈ ಐ10 ಹ್ಯಾಚ್ ಬ್ಯಾಕ್ ಕಾರು ಭಾರತಕ್ಕೂ ಮುಂದಿನ ವರ್ಷದಲ್ಲೇ ತಲುಪುವ ನಿರೀಕ್ಷೆಯಿದೆ.

ಯುರೋಪ್ ಮಾರುಕಟ್ಟೆಯಲ್ಲಿ ಫೋಕ್ಸ್ ವ್ಯಾಗನ್ ಅಪ್, ಸ್ಕೋಡಾ ಸಿಟಿಗೊ, ಸಿಯೆಟ್ ಎಂಐಐ ಮತ್ತು ಕಿಯಾ ಪಿಕಾಂಟೊ ಮುಂತಾದ ಮಾದರಿಗಳಿಗೆ ನೂತನ ಐ10 ಪ್ರತಿಸ್ಪರ್ಧಿಯಾಗಲಿದೆ.


Click it and Unblock the Notifications








