ಹ್ಯುಂಡೈ ಐ10 ಇನ್ನಿಲ್ಲ; ಜನಪ್ರಿಯ ಕಾರಿನ ನಿರ್ಮಾಣಕ್ಕೆ ಬ್ರೇಕ್
ಹ್ಯುಂಡೈ ಘಟಕದಿಂದ ಕೊನೆಯ ಐ10 ಕಾರನ್ನು ಹೊರತರಲಾಗಿದೆ. ಇದರೊಂದಿಗೆ ಜನಪ್ರಿಯ ಕಾರೊಂದರ ಉತ್ಪಾದನೆ ಸ್ಥಗಿತಗೊಂಡಿದೆ.
ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ, ತನ್ನ ಜನಪ್ರಿಯ ಐ10 ನಿರ್ಮಾಣವನ್ನು ಸ್ಥಗಿತಗೊಳಿಸಿದೆ. ಇದರೊಂದಿಗೆ ಐ10 ಹ್ಯಾಚ್ ಬ್ಯಾಕ್ ಕಾರಿನ ಮಾರಾಟ ನಿಲುಗಡೆಯಾಗಲಿದೆ ಎಂಬುದು ಖಚಿತವಾಗಿದೆ. ಕೊನೆಯ ಐ10 ರೂಪದಲ್ಲಿ ಕಪ್ಪು ವರ್ಣದ ಕಾರನ್ನು ಹೊರ ತರಲಾಗಿತ್ತು.

ಪ್ರಮುಖವಾಗಿಯೂ ಗ್ರಾಂಡ್ ಐ10, ಐ20 ಮತ್ತು ಕ್ರೆಟಾ ಕಾರಿಗೆ ಅತಿ ಹೆಚ್ಚಿನ ಬೇಡಿಕೆ ದಾಖಲಾಗಿರುವ ಹಿನ್ನಲೆಯಲ್ಲಿ ಕಡಿಮೆ ಮಾರಾಟದಲ್ಲಿರುವ ಐ10 ಮಾರಾಟಕ್ಕೆ ತಡೆ ಹಿಡಿಯಲು ಸಂಸ್ಥೆಯು ನಿರ್ಧರಿಸಿದೆ.

ಇನ್ನೊಂದೆಡೆ ಈಗಷ್ಟೇ ಬಿಡುಗಡೆಯಾಗಿರುವ ಟಕ್ಸನ್ ಮತ್ತು ಎಲಂಟ್ರಾ ಸಾಮಾನ್ಯ ಅತ್ಯುತ್ತಮ ಪ್ರತಿಕ್ರಿಯೆಯನ್ನು ಗಿಟ್ಟಿಸಿಕೊಳ್ಳುತ್ತಿದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಹ್ಯುಂಡೈ ಇಂತಹದೊಂದು ಕ್ರಮ ಕೈಗೊಂಡಿದೆ.

ಐ10 ಭಾರತದಲ್ಲಿ ಸದ್ಯ ಫ್ಯೂಯಿಡಿಕ್ 1.0 ಡಿಸೈನ್ ತತ್ವಶಾಸ್ತ್ರದೊಂದಿಗೆ ನಿರ್ಮಾಣವಾಗುತ್ತಿದ್ದ ಏಕೈಕ ಕಾರೆನಿಸಿಕೊಂಡಿತ್ತು. ಐದು ವರ್ಷಗಳಷ್ಟು ಹಿಂದೆ ಅಂದರೆ 2011ರಲ್ಲಿ ಇದು ಹೊಸ ಸ್ವರೂಪವನ್ನು ಪಡೆದಿತ್ತು.

ಆದರೆ ಗ್ರಾಂಡ್ ಐ10 ಬಿಡುಗಡೆಯೊಂದಿಗೆ ಐ10 ಹಿನ್ನಡೆ ಅನುಭವಿಸಿತ್ತು. ಇದರೊಂದಿಗೆ ಸರಾಸರಿ ಮಾರಾಟ 1500 ಯುನಿಟ್ ಗಳಿಗೆ ಕುಸಿದಿತ್ತು.

1.1 ಲೀಟರ್ (1086 ಸಿಸಿ) ಐಆರ್ ಡಿಇ ಎಂಜಿನ್ ನಿಂದ ನಿಯಂತ್ರಿಸ್ಪಡುವ ಐ10, ಪೆಟ್ರೋಲ್ ಹಾಗೂ ಸಿಎನ್ ಜಿ ಆವೃತ್ತಿಗಳಲ್ಲಿ ಲಭ್ಯವಾಗುತ್ತಿತ್ತು. ಇದು 99 ಎನ್ ಎಂ ತಿರುಗುಬಲದಲ್ಲಿ 68 ಅಶ್ವಶಕಕ್ತಿಯನ್ನು ಉತ್ಪಾದಿಸುವುದಲ್ಲದೆ ಐದು ಸ್ಪೀಡ್ ಗೇರ್ ಬಾಕ್ಸ್ ಹೊಂದಿತ್ತು.

ಈ ನಡುವೆ ಹೊಸ ತಲೆಮಾರಿನ ಸ್ಯಾಂಟ್ರೊ ಕಾರಿನ ಅಭಿವೃದ್ಧಿಯಲ್ಲಿ ಮಗ್ನವಾಗಿರುವ ಹ್ಯುಂಡೈ, ಈ ಬಹುನಿರೀಕ್ಷಿತ ಕಾರನ್ನು 2018ನೇ ಸಾಲಿನಲ್ಲಿ ಬಿಡುಗಡೆ ಮಾಡಲಿದೆ.

ಇರಾ, ಮಗ್ನಾ ಮತ್ತು ಸ್ಪೋರ್ಟ್ಜ್ ಗಳೆಂಬ ಮೂರು ವೆರಿಯಂಟ್ ಗಳಲ್ಲಿ ಐ10 ಮಾರಾಟವಾಗುತ್ತಿದ್ದವು. ಇದು ಮಡಚಬಹುದಾದ ಕೀ, ಕೀಲೆಸ್ ಎಂಟ್ರಿ, ಎಸಿ ಜೊತೆ ಹೀಟರ್, ಫ್ರಂಟ್ ಮತ್ತು ರಿಯರ್ ಪವರ್ ವಿಂಡೋ ಮತ್ತು 2 ಡಿನ್ ರೆಡಿಯೋ, ಸಿಡಿ, ಎಂಪಿ3 ಆಡಿಯೋ ವ್ಯವಸ್ಥೆಗಳನ್ನು ಹೊಂದಿತ್ತು.

ಪ್ರಸ್ತುತ ಹ್ಯುಂಡೈ ಸಂಸ್ಥೆಯು 2017ನೇ ಸಾಲಿನಲ್ಲಿ ಪರಿಷ್ಕೃತ ಹ್ಯುಂಡೈ ಗ್ರಾಂಡ್ ಐ10 ಕಾರನ್ನು ಬಿಡುಗಡೆ ಮಾಡಲಿದೆ. ತದಾ ಬಳಿಕ 2018ರಲ್ಲಿ ಹೊಸ ಸ್ಯಾಂಟ್ರೊದ ಆಗಮನವಾಗಲಿದೆ.


Click it and Unblock the Notifications








