ಶೀಘ್ರದಲ್ಲೇ ಹ್ಯುಂಡೈ ಎಲೈಟ್ ಐ20 ಆಟೋಮ್ಯಾಟಿಕ್ ಕಾರು ಬಿಡುಗಡೆ
ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಹ್ಯುಂಡೈ, ಅತಿ ಶೀಘ್ರದಲ್ಲೇ ತನ್ನ ಜನಪ್ರಿಯ ಎಲೈಟ್ ಐ20 ಮಾದರಿಯ ಆಟೋಮ್ಯಾಟಿಕ್ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ.
ವಾಹನ ಮೂಲಗಳಿಂದ ಬಂದಿರುವ ಮಾಹಿತಿಗಳ ಪ್ರಕಾರ, ಹ್ಯುಂಡೈ ಎಲೈಟ್ ಐ20 ಆಟೋಮ್ಯಾಟಿಕ್ ಕಾರು ಮುಂದಿನ ಎರಡು ತಿಂಗಳೊಳಗೆ ಬಿಡುಗಡೆಯಾಗಲಿದ್ದು, ಹಬ್ಬದ ಆವೃತ್ತಿಯ ವೇಳೆ ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ.

ಎಲೈಟ್ ಐ20 ಕಾರಿನಲ್ಲಿ ಹ್ಯುಂಡೈ ಗ್ರಾಂಡ್ ಐ10 ಮಾದರಿಯಲ್ಲಿರುವುದಕ್ಕೆ ಸಮಾನವಾದ ಫೋರ್ ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಳವಡಿಕೆಯಾಗಲಿದೆ. ಇದಕ್ಕೂ ಮೊದಲು ಹ್ಯುಂಡೈ ಎಲೈಟ್ ಐ20, ಏಳು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೂ ಬಿಡುಗಡೆಯಾಗುವ ಬಗ್ಗೆ ಸುದ್ದಿ ಹರಡಿತ್ತು.

ಹ್ಯುಂಡೈ ಎಲೈಟ್ ಐ20 ಯುರೋಪ್ ಆವೃತ್ತಿಯು 100 ಅಶ್ವಶಕ್ತಿ ಉತ್ಪಾದಿಸಬಲ್ಲ 1.4 ಲೀಟರ್ ಪೆಟ್ರೋಲ್ ಎಂಜಿನ್ ಪಡೆದಿದೆ. ಇದರ ಬದಲಾಗಿ ಭಾರತ ಆವೃತ್ತಿಯು 1.2 ಲೀಟರ್ ಪೆಟ್ರೋಲ್ ಎಂಜಿನ್ ಪಡೆಯಲಿದ್ದು, 83 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಎಲೈಟ್ ಐ20 ತರಹನೇ, ಐ20 ಆಕ್ಟಿವ್ ಕ್ರಾಸೋವರ್ ಕಾರು ಸಹ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆಯೇ ಎಂಬುದು ಇನ್ನು ತಿಳಿದು ಬಂದಿಲ್ಲ.

ಹ್ಯುಂಡೈ ಎಲೈಟ್ ಐ20 ಎರಡು ವೆರಿಯಂಟ್ ಗಳಲ್ಲಿ ಮಾತ್ರ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಲಭ್ಯವಾಗಲಿದೆ. ಇದು ಮ್ಯಾಗ್ನಾ, ಸ್ಪೋರ್ಟ್ಸ್ ಅಥವಾ ಆಸ್ಟಾ ವೆರಿಯಂಟ್ ಗಳಲ್ಲಿ ಜೋಡಣೆಯಾಗಲಿದೆ.

ಮ್ಯಾನುವಲ್ ಆವೃತ್ತಿಗೆ ಹೋಲಿಸಿದಾ ಆಟೋಮ್ಯಾಟಿಕ್ ಐ20 ಸ್ವಲ್ಪ ದುಬಾರಿಯೆನಿಸಲಿದ್ದು, 6.5 ಲಕ್ಷ ರು.ಗಳಿಂದ ಪ್ರಾರಂಭವಾಗಲಿದೆ.

ನೂತನ ಆವೃತ್ತಿಯು ಫೋಕ್ಸ್ ವ್ಯಾಗನ್ ಪೊಲೊ, ಹೋಂಡಾ ಜಾಝ್ ಮತ್ತು ಮಾರುತಿ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಇಷ್ಟೆಲ್ಲ ಆದರು ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯ ಕೊರತೆ ಕಾಡಲಿದೆ. ನಿಕಟ ಭವಿಷ್ಯದಲ್ಲೇ ಇಂತಹದೊಂದು ಆಯ್ಕೆಯನ್ನು ನೀಡಿದ್ದಲ್ಲಿ ಹ್ಯುಂಡೈ ಮಾರಾಟದಲ್ಲಿ ನೆಗೆತ ಕಾಣಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.


Click it and Unblock the Notifications