ನೋಟು ಬ್ಯಾನ್ ಎಫೆಕ್ಟ್; ಮಹೀಂದ್ರದಿಂದ 2.71 ಲಕ್ಷ ರು.ಗಳ ವರೆಗೆ ಆಫರ್
ಹಳೆಯ ನೋಟು ನಿಷೇಧ ಮಾಡಿರುವ ಕೇಂದ್ರ ಸರಕಾರದ ನೀತಿಯು ಮಹೀಂದ್ರ ಸಂಸ್ಥೆಯ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಿದೆ.
ಅಪನಗದೀಕರಣವು ದೇಶದ ಅತಿ ದೊಡ್ಡ ಉಪಯುಕ್ತ ವಾಹನ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರದ ಮಾರಾಟದ ಮೇಲೆ ಕೆಟ್ಟ ಪರಿಣಾಮವನ್ನೇ ಬೀರಿದೆ. ಸದ್ಯ ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಹರ ಸಾಹಸ ಪಡುತ್ತಿರುವ ಮಹೀಂದ್ರ ಸಂಸ್ಥೆಯು ತನ್ನ ಶ್ರೇಣಿಯ ಕಾರುಗಳಿಗೆ ಗರಿಷ್ಠ 2.71 ಲಕ್ಷ ರುಪಾಯಿಗಳ ವರೆಗೆ ಆಫರ್ ಮುಂದಿಟ್ಟಿದೆ.

ವಿವಿಧ ಮಹೀಂದ್ರ ಡೀಲರುಗಳಿಂದ ದೊರಕಿರುವ ಮಾಹಿತಿಗಳ ಪ್ರಕಾರ, 40 ದಿನಗಳಲ್ಲಿ ಮಾರಾಟವಾಗಬೇಕಿರುವ ವಾಹನಗಳ ದಾಸ್ತಾನು ಹಾಗೆಯೇ ಉಳಿದಿದೆ.

ಗ್ರಾಮೀಣ ಮತ್ತು ಸೆಮಿ ಅರ್ಬನ್ ಪ್ರದೇಶಗಳಲ್ಲಿ ಮಹೀಂದ್ರ ಮಾರಾಟಕ್ಕೆ ಹೆಚ್ಚಿನ ಧಕ್ಕೆಯುಂಟಾಗಿದೆ. ಈ ಹಿನ್ನಲೆಯಲ್ಲಿ ಡಿಸೆಂಬರ್ 31ರ ವರೆಗೆ ಆಫರ್ ನೀಡಲಾಗುತ್ತಿದೆ.

ಮಹೀಂದ್ರದ ಅತಿ ಹೆಚ್ಚು ಮಾರಾಟವಾಗುತ್ತಿರುವ ಸ್ಕಾರ್ಪಿಯೊ ಮಾದರಿಗೆ 50,000 ರು.ಗಳ ಡಿಸ್ಕೌಂಟ್ ನೀಡಲಾಗುತ್ತಿದೆ.

ಅತ್ತ ಮಹೀಂದ್ರ ಬೊಲೆರೊಗೆ ಗ್ರಾಮೀಣ ಪ್ರದೇಶಗಳಲ್ಲಿ 67,000 ರು.ಗಳ ವರೆಗೆ ರಿಯಾಯಿತಿ ಕೊಡಲಾಗುತ್ತಿದೆ.

ಇನ್ನೊಂದೆಡೆ ಮಹೀಂದ್ರ ಕೆಯುವಿ100 ಖರೀದಿ ವೇಳೆಯಲ್ಲಿ 73,000 ರು.ಗಳ ವರೆಗೆ ಡಿಸ್ಕೌಂಟ್ ಗಳಿಸಬಹುದಾಗಿದೆ.

ಮಹೀಂದ್ರ ಪ್ರೀಮಿಯಂ ಕ್ರೀಡಾ ಬಳಕೆಯ ವಾಹನ ಎಕ್ಸ್ ಯುವಿ 500 ಖರೀದಿ ವೇಳೆಯಲ್ಲಿ ಗರಿಷ್ಠ 89,000 ರು.ಗಳ ವರೆಗೆ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ.

ಏತನ್ಮಧ್ಯೆ ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಕ್ರೀಡಾ ಬಳಕೆಯ ವಾಹನ ಖರೀದಿಯಲ್ಲಿ 2.71 ಲಕ್ಷ ರು.ಗಳಷ್ಟು ಡಿಸ್ಕೌಂಟ್ ನೀಡಲಾಗುತ್ತಿದೆ.

ನವೆಂಬರ್ ತಿಂಗಳಲ್ಲಿ 29814 ಯುನಿಟ್ ಗಳ ಮಾರಾಟ ಕಂಡಿರುವ ಮಹೀಂದ್ರ ಶೇಕಡಾ 24.29ರಷ್ಟು ಮಾರಾಟ ಕುಸಿತ ಕಂಡಿದೆ. ಕಳೆದ ವರ್ಷ ಇದೇ ವೇಳೆಯಲ್ಲಿ 39,383 ಯುನಿಟ್ ಗಳಷ್ಟು ಮಾರಾಟ ದಾಖಲಿಸಿತ್ತು.


Click it and Unblock the Notifications