ದೊಡ್ಡ ಬೇಟೆ; ಚೀನಾ ಮಾರುಕಟ್ಟೆಗೆ ಕಾಲಿಡಲಿರುವ ಮಹೀಂದ್ರ
ವಾಹನ ಇತಿಹಾಸದಲ್ಲೇ ಇದೊಂದು ಅತ್ಯಂತ ದೊಡ್ಡ ಬೇಟೆ ಎನಿಸಿಕೊಳ್ಳಲಿದ್ದು, ಫಿನಿನ್ ಫರಿನಾ ಹಾಗೂ ಸ್ಯಾಂಗ್ಯೊಂಗ್ ಗಳಂತಹ ವಿದೇಶಿ ಸಂಸ್ಥೆಗಳನ್ನು ತನ್ನ ತೆಕ್ಕೆಗೆ ಸೇರಿಕೊಂಡಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಭಾಗವಾಗಿರುವ ಮಹೀಂದ್ರ ಎಲೆಕ್ಟ್ರಿಕ್ ಈಗ ಬೃಹತ್ ಚೀನಾ ಮಾರುಕಟ್ಟೆಗೆ ಎಂಟ್ರಿ ಕೊಡುವ ಯೋಜನೆಯಲ್ಲಿದೆ. ನೆರೆಯ ಚೀನಾದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಗರಿಷ್ಠ ಮಾರಾಟವನ್ನು ಕುದುರಿಸಿಕೊಳ್ಳುವುದು ಮಹೀಂದ್ರ ಎಲೆಕ್ಟ್ರಿಕ್ ಯೋಜನೆಯಾಗಿದೆ.

ಕ್ರೀಡಾ ಬಳಕೆಯ ವಾಹನ ದೈತ್ಯ ಸಂಸ್ಥೆಯಾಗಿರುವ ಮಹೀಂದ್ರ, ದೇಶದ ಅಗ್ರಗಣ್ಯ ವಿದ್ಯುತ್ ಚಾಲಿತ ವಾಹನ ನಿರ್ಮಾಣ ಸಂಸ್ಥೆಯಾಗಿದೆ. ಚೀನಾ ಮಾರುಕಟ್ಟೆಗೆ ಎಂಟ್ರಿ ಕೊಡುವ ಮೂಲಕ ಏಷ್ಯಾ ಮಾರುಕಟ್ಟೆಯಲ್ಲಿ ತನ್ನ ವಹಿವಾಟನ್ನು ವಿಸ್ತರಿಸಿಕೊಳ್ಳುವುದು ಮಹೀಂದ್ರ ಗುರಿಯಾಗಿದೆ.

ಚೀನಾದಲ್ಲೇ ಇದ್ದುಕೊಂಡು ಎಲೆಕ್ಟ್ರಿಕ್ ವಾಹನಗಳ ನಿರ್ಮಾಣ ಹಾಗೂ ಮಾರಾಟವನ್ನು ಮಾಡುವುದು ಮಹೀಂದ್ರ ಯೋಜನೆಯಾಗಿದೆ. ಇದಕ್ಕಾಗಿ ಅಲ್ಲಿನ ಸ್ಥಳೀಯ ಸಂಸ್ಥೆಗೆಳೊಂದಿಗೆ ಕೈಜೋಡಿಸಿಕೊಳ್ಳಲಿದೆ.

ಸದ್ಯ ಭಾರತ ಉಪಖಂಡದ ಹೊರತಾಗಿ ಇಂಗ್ಲೆಂಡ್ ನಲ್ಲಿ ಮಹೀಂದ್ರ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಮಾಡುತ್ತಿದೆ. ಈ ಪೈಕಿ ನಮ್ಮ ಬೆಂಗಳೂರು ಸಂಸ್ಥೆಯ ಅತಿ ದೊಡ್ಡ ಮಾರಾಟ ಕೇಂದ್ರವೆನಿಸಿಕೊಂಡಿದೆ.

ಚೀನಾದಲ್ಲಿ ಎಲೆಕ್ಟ್ರಿಕ್ ಕಾರುಗಳ ಜೊತೆಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ, ಎಲೆಕ್ಟ್ರಿಕ್ ಬಸ್ಸುಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಇತ್ತ ಅಮೆರಿಕ, ಯುರೋಪ್, ಜಪಾನ್ ಎಲೆಕ್ಟ್ರಿಕ್ ಸಂಸ್ಥೆಗಳನ್ನು ಹೋಲಿಸಿದಾಗ ಮಹೀಂದ್ರ ಹಿಂದೆ ಬಿದ್ದಿದ್ದು, ಪ್ರಮುಖವಾಗಿಯೂ ಬೆಳೆದು ಬರುತ್ತಿರುವ ಮಾರುಕಟ್ಟೆಯನ್ನು ಗುರಿ ಮಾಡುತ್ತಿದೆ.

ಇನ್ನೊಂದೆಡೆ ಆಗಲೇ ಶಾನ್ಸಿ ಆಟೋ ಜೊತೆ ಒಪ್ಪಂದ ಮಾಡಿಕೊಂಡಿರುವ ಮಹೀಂದ್ರ ಭಾಗವಾಗಿರುವ ಸ್ಯಾಂಗ್ಯೊಂಗ್ ಚೀನಾದಲ್ಲಿ ವಾಹನ ತಯಾರಕ ಘಟಕವನ್ನು ನಿರ್ಮಿಸಲಿದೆ.

ಅತ್ತ ಟಾಟಾ ಮೋಟಾರ್ಸ್ ಅಧಿನತೆಯಲ್ಲಿರುವ ಜಾಗ್ವಾರ್ ಲ್ಯಾಂಡ್ ರೋವರ್, ಚೆರ್ರಿ ಆಟೋಮೊಬೈಲ್ ಜೊತೆ ಸೇರಿಕೊಂಡು ಇವೊಕ್ ಕ್ರೀಡಾ ಬಳಕೆ ವಾಹನವನ್ನು ನಿರ್ಮಿಸುತ್ತಿದೆ.

ಅಷ್ಟಕ್ಕೂ ಮಹೀಂದ್ರ ಎಲೆಕ್ಟ್ರಿಕ್ ವಾಹನಗಳ ಹಾದಿ ಅಷ್ಟೊಂದು ಸುಲಭವಲ್ಲ. ಉದ್ಯಮಿ ಟೆರ್ರಿ ಗೌ, ಜ್ಯಾಕ್ ಮಾ, ಜಿಯಾ ಯೂಟಿಂಗ್, ಮಾ ಹೌಟೆಂಗ್ ಸೇರಿದಂತೆ 200ರಷ್ಟು ಸಂಸ್ಥೆಗಳಿಂದ ಪ್ರತಿಸ್ಪರ್ಧೆಯನ್ನು ಎದುರಿಸಲಿದೆ.

ಟ್ರ್ಯಾಕ್ಟರ್ ನಿರ್ಮಾಣದಿಂದ ಆರಂಭವಾಗಿರುವ ಮಹೀಂದ್ರ ಜೈತ್ರಯಾತ್ರೆಯು ಫಿನಿನ್ ಫರಿನಾ ಸ್ಪಾ ಖರೀದಿಸುವುದರೊಂದಿಗೆ ತನ್ನ ಯೋಜನೆಯನ್ನು ವಿಮಾನ, ವಿಹಾರ ನೌಕೆ, ಹೋಟೆಲ್ ಹಾಗೂ ವಸತಿ ಗೃಹಗಳಿಗೆ ವಿಸ್ತರಿಸಿಕೊಂಡಿತ್ತು.

2020ರ ವೇಳೆಯಾಗುವಾಗ ಐದು ದಶಲಕ್ಷದಷ್ಟು ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸಲು ಚೀನಾ ಯೋಜನೆ ಹೊಂದಿದೆ. ಅಲ್ಲದೆ ಜಗತ್ತಿನ ಮುಂಚೂಣಿಯ ಎಲೆಕ್ಟ್ರಿಕ್ ಸಂಸ್ಥೆಗಳು ಅತ್ತ ಮುಖ ಮಾಡಿದೆ. ಇನ್ನೊಂದೆಡೆ ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳು ಇನ್ನಷ್ಟೇ ಜನಪ್ರಿಯಗೊಳ್ಳಬೇಕಿದೆ.


Click it and Unblock the Notifications








