ಮಹೀಂದ್ರ ಬೊಲೆರೊ ಪವರ್ ಪ್ಲಸ್ ಬಿಡುಗಡೆಗೆ ರೆಡಿ
ಉಪಯುಕ್ತ ವಾಹನಗಳ ನಿರ್ಮಾಣದಲ್ಲಿ ಭಾರಿ ಹೆಸರು ಮಾಡಿರುವ ದೇಶದ ನಂ.1 ಎಸ್ ಯುವಿ ತಯಾರಿಕ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ, ಮಿನಿ ಬೊಲೆರೊ ಬಿಡುಗಡೆ ಮಾಡುವ ಬಗ್ಗೆ ನಾವು ಈಗಾಗಲೇ ವರದಿ ಮಾಡಿರುತ್ತೇವೆ. ಈಗ ಮತ್ತಷ್ಟು ಆಸಕ್ತಿದಾಯಕ ಸುದ್ದಿ ಹೊರ ಬಂದಿದ್ದು, ಮಹೀಂದ್ರ ನೂತನ ವಾಹನವು 'ಬೊಲೆರೊ ಪವರ್ ಪ್ಲಸ್' ಎಂದೆನಿಸಿಕೊಳ್ಳಲಿದೆ.
ಮಹೀಂದ್ರ ಬೊಲೆರೊ ಪವರ್ ಪ್ಲಸ್ ಬಿಡುಗಡೆ ಸಮಪೀಸುತ್ತಿದ್ದು, ನಾಲ್ಕು ಮೀಟರ್ ಉದ್ದ ಪರಿಧಿಯೊಳಗೆ ನಿರ್ಮಾಣವಾಗುತ್ತಿರುವುದರಿಂದ ತೆರಿಗೆ ವಿನಾಯಿತಿ ಪಡೆಯುವುದರೊಂದಿಗೆ ಸ್ಪರ್ಧಾತ್ಮಕ ಬೆಲೆಗಳಲ್ಲಿ ಲಾಂಚ್ ಮಾಡಲು ನೆರವಾಗಲಿದೆ.

ಮೊದಲ ನೋಟದಲ್ಲೇ ಹಿರಿಯ ಸೋದರನಿಗೆ ಸಮಾನವಾದ ನೋಟವನ್ನು ಬೊಲೆರೊ ಪವರ್ ಪ್ಲಸ್ ಮೈಗೂಡಿಸಿ ಬಂದಿದೆ. ಇನ್ನು ಸೂಕ್ಷ್ಮವಾಗಿ ಗಮನಿಸಿದಾಗ ಪರಿಷ್ಕೃತ ಬಂಪರ್ ಹಾಗೂ ಹೆಡ್ ಲ್ಯಾಂಪ್ ಕಂಡುಬರುತ್ತದೆ.

ಒಟ್ಟಾರೆಯಾಗಿ ಮಿನಿ ಬೊಲೆರೊದ ಸ್ವರೂಪದಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ ಎಂಬುದನ್ನು ಮನಗಾಣಬಹುದಾಗಿದೆ. ಆದರೂ ಆಧುನಿಕತೆಯನ್ನು ಕಾಪಾಡಿಕೊಂಡಿದೆ.

ಕಾರಿನೊಳಗೂ ಸರಳ ಹಾಗೂ ಆರಾಮದಾಯಕ ವ್ಯವಸ್ಥೆಗಳನ್ನು ಒದಗಿಸಿಕೊಡಲಾಗಿದೆ. ಇದರಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಮೂರು ಸಾಲುಗಳಲ್ಲಾಗಿ ಏಳು ಸೀಟುಗಳ ಆಸನ ವ್ಯವಸ್ಥೆ ಕಂಡುಬರಲಿದೆ.

ಕಾರಿನಡಿಯಲ್ಲಿ ಅತಿ ದೊಡ್ಡ ಬದಲಾವಣೆ ಕಂಡುಬಂದಿದ್ದು, ಮಹೀಂದ್ರ ಟಿಯುವಿ300 ಮಾದರಿಯಲ್ಲಿರುವುದಕ್ಕೆ ಸಮಾನವಾದ 1.5 ಲೀಟರ್ ಎಂಹಾಕ್ ತ್ರಿ ಸಿಲಿಂಡರ್ ಡೀಸೆಲ್ ಎಂಜಿನ್ ಬಳಕೆಯಾಗಲಿದೆ. ಇದು 195 ಎನ್ ಎಂ ತಿರುಗುಬಲದಲ್ಲಿ 70 ಅಶ್ವಶಕ್ತಿ ಉತ್ಪಾದಿಸಲಿದ್ದು, ಐದು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ನೂತನ ಮಹೀಂದ್ರ ಬೊಲೆರೊ ಪವರ್ ಪ್ಲಸ್ ಆವೃತ್ತಿಯು ಮೈಕ್ರೊ ಹೈಬ್ರಿಡ್ ವ್ಯವಸ್ಥೆಯೊಂದಿಗೂ ಲಭ್ಯವಾಗಲಿದೆ. ಇದರ ಸ್ಟ್ಯಾರ್ಟ್-ಸ್ಟಾಪ್ ತಂತ್ರಗಾರಿಕೆಯು ಹೆಚ್ಚಿನ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲು ನೆರವಾಗಲಿದೆ.

ಭಾರತೀಯ ವಾಹನ ಅಧ್ಯಯನ ಸಂಸ್ಥೆಯ (ಎಆರ್ ಎಐ) ಮಾನ್ಯತೆಯ ಪ್ರಕಾರ ನೂತನ ಮಹೀಂದ್ರ ಬೊಲೆರೊ ಪವರ್ ಪ್ಲಸ್ ಆವೃತ್ತಿಯು ಪ್ರತಿ ಲೀಟರ್ ಗೆ 16.5 ಕೀ.ಮೀ. ಮೈಲೇಜ್ ನೀಡಲಿದೆ.


Click it and Unblock the Notifications








