ಮಾರುತಿ ಇಗ್ನಿಸ್ ಬಿಡುಗಡೆಗೆ ಮತ್ತೆ ಎದುರಾಯ್ತು ವಿಘ್ನ!
ಮಾರುತಿ ಇಗ್ನಿಸ್ ಬಿಡುಗಡೆ ಸಂಬಂಧ ಕಳೆದ ಕೆಲುವ ತಿಂಗಳುಗಳಿಂದ ವದಂತಿಗಳು ಹರಿದಾಡುತ್ತಿದೆ.
ಮಾರುತಿ ಸುಜುಕಿ ಇಗ್ನಿಸ್ ಬಿಡುಗಡೆಗೆ ಮತ್ತೆ ವಿಘ್ನ ಎದುರಾಗಿದೆ. ಇದರೊಂದಿಗೆ ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾಗಬೇಕಿದ್ದ ಇಗ್ನಿಸ್, ಆಗಮನವು ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ. ಇದಕ್ಕೂ ಮೊದಲು ಕಾಂಪಾಕ್ಟ್ ಕ್ರಾಸೋವರ್ ವಿಭಾಗದಲ್ಲಿ ಹೊಸ ನಿರೀಕ್ಷೆ ಹಾಗೂ ಹುಮ್ಮಸ್ಸನ್ನು ಮೂಡಿಸಿರುವ ಮಾರುತಿ ಇಗ್ನಿಸ್ ಹಬ್ಬದ ಆವೃತ್ತಿಯಲ್ಲಿ ಬಿಡುಗಡೆಯ ಬಗ್ಗೆ ಮಾಹಿತಿಗಳಿದ್ದವು.

ಆದರೆ ನಿರ್ಮಾಣ ಅಡಚಣೆಗಳಿಂದಾಗಿ ಇಗ್ನಿಸ್ ಬಿಡುಗಡೆ ಮುಂದೂಡಲ್ಪಟ್ಟಿದೆ. ಸಂಸ್ಥೆಯ ನಿರ್ದಿಷ್ಟ ಕಾರುಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿರುವುದೇ ಇಗ್ನಿಸ್ ಆಗಮನಕ್ಕೆ ತೊಡಕಾಗಿ ಪರಿಣಮಿಸಿದೆ.

ಮಾರುತಿ ಸುಜುಕಿ ಬಲೆನೊ ಮತ್ತು ವಿಟಾರಾ ಬ್ರಿಝಾ ಕಾರುಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಇದರಿಂದಾಗಿ ಕಾಯುವಿಕೆ ಅವಧಿ ಗಣನೀಯವಾಗಿ ಏರಿಕೆಯಾಗಿದೆ.

ಈ ಎಲ್ಲ ಪರಿಸ್ಥಿತಿಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ನಿರ್ಮಾಣ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಮಾರುತಿ ನಿರ್ಧರಿಸಿದೆ. ಇದರಿಂದಾಗಿ ಇಗ್ನಿಸ್ ನಿರ್ಮಾಣವು ವಿಳಂಬವಾಗುತ್ತಿದೆ.

2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಮಾರುತಿ ಇಗ್ನಿಸ್ ಕಾಂಪಾಕ್ಟ್ ಕ್ರಾಸೋವರ್ ಕಾರು ಈಗಾಗಲೇ ವಾಹನ ತಜ್ಞರ ಗಮನ ಸೆಳೆದಿದೆ.

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಮಾರುತಿ ಇಗ್ನಿಸ್ 2017 ವರ್ಷಾರಂಭದಲ್ಲಷ್ಟೇ ಬಿಡುಗಡೆಯಾಗಲಿದೆ. ಈ ಸಂಬಂಧ ಸಂಸ್ಥೆಯಿಂದ ಇನ್ನಷ್ಟೇ ಖಚಿತ ಮಾಹಿತಿ ಹೊರಬರಬೇಕಿದೆ.

ನೂತನ ಮಾರುತಿ ಇಗ್ನಿಸ್ ಮಾರುಕಟ್ಟೆಯಲ್ಲಿ ಮಹೀಂದ್ರ ಕೆಯುವಿ100 ಕಾರಿಗೆ ನೇರ ಪ್ರತಿಸ್ಪರ್ಧಿಯಾಗಲಿದೆ.

ಹ್ಯಾಚ್ ಬ್ಯಾಕ್ ವಿಭಾಗದಿಂದ ಒಂದು ಹೆಜ್ಜೆ ಮುಂದಿಟ್ಟುಕೊಂಡು ಕ್ರಾಸೋವರ್ ಕಾರುಗಳನ್ನು ಬಯಕೆ ಮಾಡುವವರಿಗೆ ಇಗ್ನಿಸ್ ಅತ್ಯುತ್ತಮ ಆಯ್ಕೆಯಾಗಿರಲಿದೆ.

ಹೊರಗಿನ ರಿಯರ್ ವ್ಯೂ ಮಿರರ್ ನಲ್ಲಿ ಟರ್ನ್ ಸಿಗ್ನಲ್ ಲಗತ್ತಿಸಲಾಗಿದ್ದು, ಹೆಚ್ಚು ಆಕರ್ಷಣೆ ಕಾಪಾಡಿಕೊಂಡಿದೆ. ಇನ್ನು ಕಪ್ಪು ವರ್ಣದ ಅಲಾಯ್ ವೀಲ್ ಕೂಡಾ ಜೋಡಿಸಲಾಗಿದೆ.

ನೂತನ ಮಾರುತಿ ಇಗ್ನಿಸ್ 3,700 ಎಂಎಂ ಉದ್ದ, 1,600 ಎಂಎಂ ಅಗಲ ಹಾಗೂ 1595 ಎಂಎಂ ಎತ್ತರವನ್ನು ಪಡೆಯಲಿದೆ. ಹಾಗೆಯೇ 2435 ಎಂಎಂ ಚಕ್ರಾಂತರ ಹಾಗೂ 180 ಎಂಎಂ ಗ್ರೌಂಡ್ ಕ್ಲಿಯರನ್ಸ್ ಸಹ ಇರಲಿದೆ.

ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಕೀಲೆಸ್ ಎಂಟ್ರಿ ಜೊತೆ ಎಂಜಿನ್ ಸ್ಟ್ಯಾರ್ಟ್ ಸ್ಟಾಪ್ ಸಿಸ್ಟಂ, ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಸ್ಮಾರ್ಟ್ ಲಿಂಕ್ ಹಾಗೂ ಆಪಲ್ ಕಾರ್ ಪ್ಲೇ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ಡ್ಯುಯಲ್ ಏರ್ ಬ್ಯಾಗ್ ಹಾಗೂ ಫೋರ್ ವೀಲ್ ಡ್ರೈವ್ ಚಾಲನಾ ವ್ಯವಸ್ಥೆಯನ್ನು ಪಡೆಯಲಿದೆ.

ಕಾರಿನಡಿಯಲ್ಲಿ 1.0 ಲೀಟರ್ ಬೂಸ್ಟರ್ ಜೆಟ್ ಪೆಟ್ರೋಲ್ ಎಂಜಿನ್ ಇರಲಿದೆ. ಇದು ಇನ್ನಷ್ಟೇ ಬಿಡುಗಡೆಯಾಗಲಿರುವ ಬಲೆನೊ ಆರ್ ಎಸ್ ಮಾದರಿಗೆ ಸಮಾನವಾಗಿರಲಿದೆ. ಹಾಗೆಯೇ ನಿಕಟ ಭವಿಷ್ಯದಲ್ಲೇ ಡೀಸೆಲ್ ಎಂಜಿನ್ ಆಳವಡಿಸಲಾಗುವುದು.

5 ಸ್ಪೀಡ್ ಗೇರ್ ಬಾಕ್ಸ್ ನಿಂದ ನಿಯಂತ್ರಿಸಲ್ಪಡುವ ಇಗ್ನಿಸ್ ಸಿವಿಟಿ ಅಥವಾ ಎಎಂಟಿ ಟ್ರಾನ್ಸ್ ಮಿಷನ್ ಪಡೆಯುವ ಸಾಧ್ಯತೆಯೂ ಇದೆ. ಅತ್ತ ಸುಜುಕಿ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ತಂತ್ರಜ್ಞಾನವೂ ಆಳವಡಿಕೆಯಾದ್ದಲ್ಲಿ ಅಚ್ಚರಿಪಡಬೇಕಿಲ್ಲ.

ಅಂದ ಹಾಗೆ ಮಾರುತಿ ಸುಜುಕಿ ಇಗ್ನಿಸ್ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 4.5 ಲಕ್ಷ ರುಪಾಯಿಗಳಿಂದ 7 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.


Click it and Unblock the Notifications