ಬ್ರಿಝಾ, ಬಲೆನೊ ಚಮಕ್; ಮಾರುತಿ ಇಗ್ನಿಸ್ ಆಗಮನಕ್ಕೆ ವಿಘ್ನ!
ಸಮಕಾಲೀನ ಮಾರುಕಟ್ಟೆಯಲ್ಲಿ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ ಬಿಡುಗಡೆ ಮಾಡಿರುವ ಎರಡು ಅತ್ಯುತ್ತಮ ಕಾರುಗಳಲ್ಲಿ ವಿಟಾರಾ ಬ್ರಿಝಾ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನ ಮತ್ತು ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರುಗಳು ಅತಿ ಹೆಚ್ಚು ಸದ್ದು ಮಾಡುತ್ತಿದೆ. ಈ ಎರಡು ಕಾರುಗಳು ಗರಿಷ್ಠ ಮಾರಾಟ ಸಾಧಿಸುತ್ತಿರುವ ಹಿನ್ನಲೆಯಲ್ಲಿ ಮುಂಬರುವ ಹೊಚ್ಚ ಹೊಸ 'ಇಗ್ನಿಸ್' ಆಗಮನಕ್ಕೆ ವಿಘ್ನ ಎದುರಾಗಿದೆ.
ಬಲ್ಲ ಮೂಲಗಳ ಪ್ರಕಾರ ಬ್ರಿಝಾ ಹಾಗೂ ಬಲೆನೊ ಕಾರುಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ಮುಂಗಡ ಬುಕ್ಕಿಂಗ್ ದಾಖಲಾಗಿದ್ದು, ಸಂಸ್ಥೆಯು ಆದಷ್ಟು ಬೇಗನೇ ಗ್ರಾಹಕರಿಗೆ ಕಾರನ್ನು ವಿತರಿಸುವ ನಿಟ್ಟಿನಲ್ಲಿ ನಿರ್ಮಾಣ ಸಾಮರ್ಥ್ಯವನ್ನು ವೃದ್ಧಿಸಲಿದೆ. ಇದು ಸಹಜವಾಗಿಯೇ ಇಗ್ನಿಸ್ ಆಗಮನವನ್ನು ಮೂರರಿಂದ ಆರು ತಿಂಗಳುಗಳಷ್ಟು ಕಾಲ ವಿಳಂಬವಾಗಿಸಲಿದೆ.

ಇದಕ್ಕೂ ಮೊದಲು ಬಹುನಿರೀಕ್ಷಿತ ಮಾರುತಿ ಇಗ್ನಿಸ್ ಮುಂಬರುವ ದೀಪಾವಳಿ ಹಬ್ಬದ ಆವೃತ್ತಿಯ ವೇಳೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿತ್ತು. ಆದರೆ ಇದನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.

ಮಾರುತಿ ಇಗ್ನಿಸ್ ನಿರ್ಮಾಣ ಆರಂಭವನ್ನು ಸೆಪ್ಟೆಂಬರ್ ತಿಂಗಳಲ್ಲಿ ನಿಗದಿಗೊಳಿಸಲಾಗಿತ್ತು. ಇದನ್ನೀಗ ನವೆಂಬರ್ ಅಂತ್ಯದ ವೇಳೆಗೆ ಮುಂದೂಡಲಾಗಿದ್ದು, ಬಹುನಿರೀಕ್ಷಿತ ಕಾರು 2017ರಲ್ಲಷ್ಟೇ ಬಿಡುಗಡೆಯಾಗುವುದು ಖಚಿತವೆನಿಸಿದೆ.

ಪ್ರತಿಯೊಂದು ಕಾರಿನ ಅಧಿಕೃತ ಬಿಡುಗಡೆಗೂ ಮುನ್ನ ಪ್ರಯೋಗ ಉತ್ಪನ್ನದ ನಿರ್ಮಾಣವು ಅತ್ಯಗತ್ಯವಾಗಿದೆ. ಪ್ರಸ್ತುತ ವಿಟಾರಾ ಬ್ರಿಝಾ ಹಾಗೂ ಬಲೆನೊಗೆ ಗ್ರಾಹಕರಿಂದ ವ್ಯಾಪಕ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮಾರಾಟದಲ್ಲಿರುವ ಮಾದರಿಗಳಿಗೆ ಹೆಚ್ಚಿನ ಆದ್ಯತೆ ಕೊಡಲು ಮಾರುತಿ ಮುಂದಾಗಿದೆ.

ಒಮ್ಮೆ ಇಗ್ನಿಸ್ ಬಿಡುಗಡೆಯಾದ್ದಲ್ಲಿ ವಾರ್ಷಿಕವಾಗಿ 60,000 ಯುನಿಟ್ ಗಳಿಂದ 8,000 ಯುನಿಟ್ ಗಳಷ್ಟು ಉತ್ಪಾದಿಸುವ ಗುರಿಯನ್ನು ಮಾರುತಿ ಹೊಂದಿದೆ. ಇದು ಮುಂದಿನ ದಿನಗಳಲ್ಲಿ ಮಾರುತಿಗೆ ಉಪಯುಕ್ತ ವಾಹನ ವಿಭಾಗದಲ್ಲೂ ತನ್ನ ಅಧಿಪತ್ಯ ಸ್ಥಾಪಿಸಲು ನೆರವಾಗಲಿದೆ.

ಅಂದ ಹಾಗೆ ಮಾರುತಿ ಇಗ್ನಿಸ್ 1.2 ಲೀಟರ್ ಪೆಟ್ರೋಲ್ ಮತ್ತು 1.3 ಲೀಟರ್ ಡೀಸೆಲ್ ಗೇರ್ ಬಾಕ್ಸ್ ಪಡೆಯುವ ಸಾಧ್ಯತೆಯಿದ್ದು, ನಾಲ್ಕರಿಂದ ಆರು ಲಕ್ಷ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ.

ಐ-ಎಂ4 ಕಾನ್ಸೆಪ್ಟ್ ಕಾರಿನಿಂದ ಅಭಿವೃದ್ಧಿಪಡಿಸಿರುವ ಮಾರುತಿ ಇಗ್ನಿಸ್ ಒಂದು ಸಬ್ ಕಾಂಪಾಕ್ಟ್ ಕ್ರಾಸೋವರ್ ಕಾರಾಗಿದೆ. ಅಂತೆಯೇ ಸಿವಿಟಿ ಗೇರ್ ಬಾಕ್ಸ್ ಜೋಡಣೆಯಾಗುವ ಸಾಧ್ಯತೆಯಿದೆ.


Click it and Unblock the Notifications