ಇದೀಗ ಫೈನಲ್; ಮಾರುತಿ ಇಗ್ನಿಸ್ ಹೊಸ ವರ್ಷಕ್ಕೆ ಆಗಮನ ಖಚಿತ
ಸಾಕಷ್ಟು ಊಹಾಪೋಹಗಳ ಬಳಿಕ ಅತಿ ನೂತನ ಮಾರುತಿ ಸುಜುಕಿ ಇಗ್ನಿಸ್ ಬಿಡುಗಡೆ ಮುಹೂರ್ತ ಕೊನೆಗೂ ಫಿಕ್ಸ್ ಆಗಿದೆ. ಇದಕ್ಕೂ ಮೊದಲು ಬಹು ನಿರೀಕ್ಷಿತ ಮಾರುತಿ ಇಗ್ನಿಸ್ ಪ್ರಸಕ್ತ ಸಾಲಿನಲ್ಲೇ ಬಿಡುಗಡೆಯಾಗುವ ಬಗ್ಗೆ ಮಾಹಿತಿಗಳಿದ್ದರೆ ತಾಜಾ ಮಾಹಿತಿಗಳ ಪ್ರಕಾರ ಹೊಸ ವರ್ಷದ ವೇಳೆಯಲ್ಲಷ್ಟೇ ಮಾರುಕಟ್ಟೆ ಪ್ರವೇಶಿಸಲಿದೆ ಎಂಬುದು ತಿಳಿದು ಬಂದಿದೆ.

ಮಾರುತಿ ಉನ್ನತಧಿಕಾರಿಗಳಿಂದ ಬಂದಿರುವ ಮಾಹಿತಿಗಳ ಪ್ರಕಾರ ಮಾರುತಿ ಸುಜುಕಿ ಇಗ್ನಿಸ್ ಪ್ರಸಕ್ತ ಆರ್ಥಿಕ ಸಾಲಿನ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಷ್ಟೇ ಮಾರುಕಟ್ಟೆ ತಲುಪಲಿದೆ. ಅಂದರೆ 2017 ಜನವರಿಯಿಂದ ಮಾರ್ಚ್ ತಿಂಗಳ ವೇಳೆಯಲ್ಲಿ ಬಿಡುಗಡೆ ಭಾಗ್ಯ ಕಾಣಲಿದೆ.

ಆರಂಭದಲ್ಲಿ ಪ್ರಸಕ್ತ ಸಾಲಿನ ಹಬ್ಬದ ಆವೃತ್ತಿಯಲ್ಲಿ ಬಿಡುಗಡೆಯಾಗಲು ನಿಗದಿಯಾಗಿದ್ದರೂ, ಅತಿ ಹೆಚ್ಚು ಮಾರಾಟದಲ್ಲಿರುವ ಮಾರುತಿ ಬ್ರಿಝಾ ಹಾಗೂ ಬಲೆನೊ ಉತ್ಪನ್ನ ಹೆಚ್ಚಿಸುವ ಹಿನ್ನಲೆಯಲ್ಲಿ ಇಗ್ನಿಸ್ ಬಿಡುಗಡೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿಯೆಂಬ ಮಾಹಿತಿಗಳು ಬಂದಿದ್ದವು.

ಬಳಿಕ ಬಂದ ವರದಿಗಳಂತೆ ನಿಗದಿತ ವೇಳೆಯಲ್ಲೇ ಅಂದರೆ ಪ್ರಸಕ್ತ ಸಾಲಿನ ಹಬ್ಬದ ಸಂಭ್ರಮದಲ್ಲೇ ಮಾರುತಿ ಇಗ್ನಿಸ್ ಲಾಂಚ್ ಆಗಲಿದೆ ಎಂಬುದು ತಿಳಿದು ಬಂದಿತ್ತು.

ಈಗ ಮಗದೊಮ್ಮೆ ಸ್ಪಷೀಕರಣ ಬಂದಿದ್ದು, ಹೊಸ ವರ್ಷದಲ್ಲಿ ಬಿಡುಗಡೆಯಾಗುವುದು ಖಚಿತವೆನಿಸಿದೆ. ಇದರೊಂದಿಗೆ ಇಗ್ನಿಸ್ ಗಾಗಿ ಕಾಯುತ್ತಿದ್ದ ಗ್ರಾಹಕರ ಮನದಲ್ಲಿ ನಿರಾಸೆ ಕಾದಿದೆ.

ಕ್ರಾಸೋವರ್ ಶೈಲಿಯ ಮಾರುತಿ ಇಗ್ನಿಸ್ ಪ್ರಮುಖವಾಗಿಯೂ ಮಾರುಕಟ್ಟೆಯಲ್ಲಿರುವ ತಾಜಾ ಮಹೀಂದ್ರ ಕೆಯುವಿ100 ಇತ್ಯಾದಿ ವಾಹನಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

ಸಮಕಾಲೀನ ವಿನ್ಯಾಸ, ವರ್ಧಿತ ಗ್ರೌಂಡ್ ಕ್ಲಿಯರನ್ಸ್, ದೊಡ್ಡದಾದ ವಿಂಡ್ ಶೀಲ್ಡ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಆಕರ್ಷಕ ಫ್ರಂಟ್ ಗ್ರಿಲ್, ಡೇಟೈಮ್ ರನ್ನಿಂಗ್ ಎಲ್ ಇಡಿ, 15 ಅಥವಾ 16 ಇಂಚುಗಳ ಅಲಾಯ್ ವೀಲ್, ಟೈಲ್ ಲ್ಯಾಂಪ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಟಚ್ ಸ್ಕ್ರೀನ್ ಸ್ಮಾರ್ಟ್ ಪ್ಲೇ ಸಿಸ್ಟಂ ಜೊತೆ ರಿವರ್ಸ್ ಕ್ಯಾಮೆರಾ, ಡಿಜಿಟಲ್ ಎಂಐಡಿ ಇತ್ಯಾದಿ ವೈಶಿಷ್ಟ್ಯಗಳಿರಲಿದೆ.

ಅಂದ ಹಾಗೆ ಮಾರುತಿ ಇಗ್ನಿಸ್ 1.2 ಲೀಟರ್ ಕೆ ಸಿರೀಸ್ ಪೆಟ್ರೋಲ್ ಮತ್ತು 1.3 ಲೀಟರ್ ಡಿಡಿಐಎಸ್ ಡೀಸೆಲ್ ಗೇರ್ ಬಾಕ್ಸ್ ಪಡೆಯುವ ಸಾಧ್ಯತೆಯಿದ್ದು, ಮ್ಯಾನುವಲ್ ಜೊತೆ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ನಿರೀಕ್ಷೆ ಮಾಡಬಹುದಾಗಿದೆ.

ನಾಲ್ಕರಿಂದ ಆರು ಲಕ್ಷ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿರುವ ಮಾರುತಿ ಇಗ್ನಿಸ್ ಮಾರುತಿಯ ಪ್ರೀಮಿಯಂ ನೆಕ್ಸಾ ಡೀಲರ್ ಶಿಪ್ ಗಳ ಮುಖಾಂತರ ಮಾರಾಟವಾಗಲಿದೆ. ಈ ಮೂಲಕ ಮಾರುತಿ ಎಸ್ ಕ್ರಾಸ್ ಮತ್ತು ಬಲೆನೊ ಸಾಲಿಗೆ ಸೇರ್ಪಡೆಯಾಗಲಿದೆ.


Click it and Unblock the Notifications








