ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಲಿರುವ ಮಾರುತಿ ಇಗ್ನಿಸ್
ಬಹುನಿರೀಕ್ಷಿತ ಮಾರುತಿ ಇಗ್ನಿಸ್ ಬಿಡುಗಡೆಗೆ ಪದೇ ಪದೇ ತೊಡಕುಗಳು ಎದುರಾಗುತ್ತಿದೆ. ಈ ನಡುವೆ ಇಗ್ನಿಸ್ ನಲ್ಲಿ ಹೈಬ್ರಿಡ್ ತಂತ್ರಜ್ಞಾನವು ಬಳಕೆಯಾಗಲಿದೆಯೆಂಬ ಸುದ್ದಿ ಹರಡಿದೆ.
ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ 2017ನೇ ಸಾಲಿನಲ್ಲಿ ಅತಿ ನೂತನ ಇಗ್ನಿಸ್ ಕಾಂಪಾಕ್ಟ್ ಕ್ರಾಸೋವರ್ ಕಾರನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಬಹುನಿರೀಕ್ಷಿತ ಮಾರುತಿ ಇಗ್ನಿಸ್ ಪ್ರಸಕ್ತ ಸಾಲಿನ ಹಬ್ಬದ ಆವೃತ್ತಿಯ ವೇಳೆಯಲ್ಲೇ ಬಿಡುಗಡೆ ಮಾಡುವ ಯೋಜನೆಯಿದ್ದರೂ ಕಾರಣಾಂತರಗಳಿಂದಾಗಿ ಬಿಡುಗಡೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.

ಈ ನಡುವೆ ಬಂದಿರುವ ಖುಷಿ ಸುದ್ದಿ ಏನೆಂದರೆ ನೂತನ ಮಾರುತಿ ಸುಜುಕಿ ಇಗ್ನಿಸ್ ಹೈಬ್ರಿಡ್ ಆವೃತ್ತಿಯಲ್ಲೂ ಬಿಡುಗಡೆಯಾಗಲಿದೆ. ಇದು ವಾಹನ ಪ್ರೇಮಿಗಳಲ್ಲಿ ಮತ್ತಷ್ಟು ಆಸಕ್ತಿ ಕೆರಳಿಸುವಂತಾಗಿದೆ.

ಇಡೀ ಜಗತ್ತಿನ ವಾಹನ ವಲಯವು ಪರಿಸರ ಸ್ನೇಹಿ ಹೈಬ್ರಿಡ್ ವಾಹನಗಳಿಗೆ ಒಗ್ಗಿಕೊಳ್ಳುತ್ತಿದೆ. ಇದರಿಂದ ಪರಿಸರಕ್ಕೆ ಕಡಿಮೆ ಹಾನಿಯಾಗಿದ್ದು, ಹೆಚ್ಚಿನ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳುತ್ತದೆ.

ಮಾರುತಿ ಅಂಗಸಂಸ್ಥೆಯಾಗಿರುವ ಜಪಾನ್ ಮೂಲದ ಸುಜುಕಿ ಅಭಿವೃದ್ಧಿಪಡಿಸಿರುವ ನೂತನ ಹೈಬ್ರಿಡ್ ತಂತ್ರಜ್ಞಾನವನ್ನು ಇಗ್ನಿಸ್ ನಲ್ಲೂ ಬಳಕೆ ಮಾಡುವುದು ಸಂಸ್ಥೆಯ ಗುರಿಯಾಗಿದೆ.

ಸುಜುಕಿ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ (ಎಸ್ ಎಚ್ ವಿಎಸ್) ತಂತ್ರಜ್ಞಾನವನ್ನು ನೂತನ ಇಗ್ನಿಸ್ ನಲ್ಲಿ ಆಳವಡಿಸಲಾಗುವುದು.

ಇದರಿಂದ ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಕಾರುಗಳ ಮಾರಾಟಕ್ಕೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರಕಾರದ ಮಹತ್ತರ 'ಫೇಮ್' ಯೋಜನೆಯಡಿಯಲ್ಲಿ ವಿಶೇಷ ಸಬ್ಸಿಡಿ ಗಿಟ್ಟಿಸಿಕೊಳ್ಳಲು ನೆರವಾಗಲಿದೆ.

ಸ್ಪರ್ಧಾತ್ಮಕ ಬೆಲೆಯಲ್ಲಿ ಮುಂದಿನ ತಲೆಮಾರಿನ ಹೈಬ್ರಿಡ್ ಕಾರು ತಂತ್ರಜ್ಞಾನವನ್ನು ಆಳವಡಿಸುವುದರಲ್ಲಿ ಮಾರುತಿ ಕಾರ್ಯ ಮಗ್ನವಾಗಿದೆ. ಇಗ್ನಿಸ್ ಮುಖಾಂತರ ತನ್ನ ಶ್ರೇಣಿಯ ಹೈಬ್ರಿಡ್ ತಂತ್ರಗಾರಿಕೆಯನ್ನು ವಿಸ್ತರಿಸಲಿದೆ.

ಇದೊಂದು ಪರಿಪೂರ್ಣ ಹೈಬ್ರಿಡ್ ಕಾರಲ್ಲ. ಬದಲಾಗಿ ಮಾರುತಿ ಇಗ್ನಿಸ್ ನಲ್ಲಿ ಸಣ್ಣ ಪ್ರಮಾಣದ ಹೈಬ್ರಿಡ್ ತಂತ್ರಜ್ಞಾನವು ಬಳಕೆಯಾಗಲಿದೆ.

ಇಗ್ನಿಸ್ ಭಾರತ ಆವೃತ್ತಿಯು 1.2 ಲೀಟರ್ ಪೆಟ್ರೋಲ್ ಮತ್ತು 1.3 ಲೀಟರ್ ಡಿಡಿಐಎಸ್ ವೆರಿಯಂಟ್ ಗಳನ್ನು ಗಿಟ್ಟಿಸಿಕೊಳ್ಳಲಿದೆ.

ಮಾರುತಿ ಬಲೆನೊ ಬಳಿಕ ಹಗುರ ಭಾರದ ತಳಹದಿಯಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ಕಾರು ಇಗ್ನಿಸ್ ಆಗಿದೆ. ಇದು 3,700 ಎಂಎಂ ಉದ್ದ , 1660-1690 ಎಂಎಂ ಅಗಲ, 1595 ಎಂಎಂ ಎತ್ತರ, 2435 ಎಂಎಂ ಚಕ್ರಾಂತರ ಮತ್ತು 180 ಎಂಎಂ ಗ್ರೌಂಡ್ ಕ್ಲಿಯರನ್ಸ್ ಗಿಟ್ಟಿಸಿಕೊಂಡಿದೆ.

2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಮಾರುತಿ ಸುಜುಕಿ ಇಗ್ನಿಸ್, ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, 15 ಅಥವಾ 16 ಇಂಚುಗಳ ಅಲಾಯ್ ಚಕ್ರಗಳು, ಇಂಡಿಕೇಟರ್ ಜೊತೆಗಿನ ಹೊರಗಿನ ರಿಯರ್ ವ್ಯೂ ಮಿರರ್, ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸ್ಮಾರ್ಟ್ ಪ್ಲೇ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಮತ್ತು ರಿವರ್ಸಿಂಗ್ ಕ್ಯಾಮೆರಾ ವ್ಯವಸ್ಥೆಗಳನ್ನು ಪಡೆಯಲಿದೆ.


Click it and Unblock the Notifications








