ಸ್ವಿಫ್ಟ್ ಓವರ್ ಟೇಕ್ ಮಾಡಲಿರುವ ಮಾರುತಿ ಸ್ವಿಫ್ಟ್ ಡಿಜೈರ್
ಭಾರತದಲ್ಲಿ ತನ್ನ ನೀತಿಯನ್ನು ಬದಲಾಯಿಸಿರುವ ಮಾರುತಿ ಸುಜುಕಿ, ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರಿಗಿಂತಲೂ ಮುಂಚಿತವಾಗಿ ಸ್ವಿಫ್ಟ್ ಡಿಜೈರ್ ಕಾಂಪಾಕ್ಟ್ ಸೆಡಾನ್ ಕಾರನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.
ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನೆರಡು ಜನಪ್ರಿಯ ಕಾರುಗಳನ್ನು ಹೊಸ ಸ್ವರೂಪದಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಅದುವೇ ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಮತ್ತು ಸ್ವಿಫ್ಟ್ ಡಿಜೈರ್ ಕಾಂಪಾಕ್ಟ್ ಸೆಡಾನ್ ಕಾರು. ವಾಹನ ಮೂಲಗಳಿಂದ ಬಂದಿರುವ ತಾಜಾ ಮಾಹಿತಿಗಳ ಪ್ರಕಾರ, ಸ್ವಿಫ್ಟ್ ಓವರ್ ಟೇಕ್ ಮಾಡಲಿರುವ ಡಿಜೈರ್ ದೇಶದಲ್ಲಿ ಮೊದಲು ಬಿಡುಗಡೆಯಾಗಲಿದೆ.

2017 ಮಾರುತಿ ಸ್ವಿಫ್ಟ್ ಡಿಜೈರ್ ಬಿಡುಗಡೆಯಾದ ಬಳಿಕವಷ್ಟೇ ಹೊಸ ತಲೆಮಾರಿನ 2017 ಮಾರುತಿ ಸ್ವಿಫ್ಟ್ ಬಿಡುಗಡೆಯಾಗಲಿದೆ.

ಸ್ವಿಫ್ಟ್ ಹಾಗೂ ಡಿಜೈರ್ ಆವೃತ್ತಿಗಳು ನಿರಂತರ ರಸ್ತೆ ಚಾಲನಾ ಪರೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದು, ಈ ಸಂಬಂಧ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಇಲ್ಲಿ ಗಮನಾರ್ಹವೆನಿಸುತ್ತದೆ.

ಇದಕ್ಕೂ ಮೊದಲು ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರನ್ನು ಮೊದಲು ಬಿಡುಗಡೆ ಮಾಡಲು ಸಂಸ್ಥೆಯು ನಿರ್ಧರಿಸಿದೆ. ಆದರೆ ಇದೀಗ ಮಾರುಕಟ್ಟೆ ಬೆಳವಣಿಗೆಯನ್ನು ಪರಿಶೀಲಿಸುತ್ತಿರುವ ಮಾರುತಿ ಏಕಾಏಕಿ ತನ್ನ ನಿರ್ಧಾರವನ್ನು ಬದಲಾಯಿಸಿದೆ.

ಅತಿ ನೂತನ ಬೆಲನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ಬಿಡುಗಡೆ ಮಾಡುವುದರೊಂದಿಗೆ ದೇಶದಲ್ಲಿ ಸ್ವಿಫ್ಟ್ ಕಾರಿನ ಬೇಡಿಕೆ ಕುಸಿದಿದೆ.

ಸ್ವಿಫ್ಟ್ ಗಿಂತಲೂ ಪ್ರೀಮಿಯಂ ಎನಿಸಿಕೊಂಡಿರುವ ಬಲೆನೊ 50,000 ರು.ಗಳಷ್ಟು ದುಬಾರಿಯೆನಿಸಿದ್ದು, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಮತ್ತು ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ಗಳಂತಹ ಆಧುನಿಕ ವೈಶಿಷ್ಟ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ಗಿಟ್ಟಿಸಿಕೊಂಡಿದೆ.

ಇನ್ನೊಂದೆಡೆ ಕಾಂಪಾಕ್ಟ್ ಸೆಡಾನ್ ಕಾರಿನ ಸ್ಥಿತಿ ಬೇರೆಯೇ ಆಗಿದೆ. ಇಲ್ಲಿ ಸ್ವಿಫ್ಟ್ ಡಿಜೈರ್ ಮಾತ್ರವೊಂದೇ ಮಾರುತಿಗಿರುವ ಉತ್ಪನ್ನವಾಗಿದ್ದು, ದೇಶದಲ್ಲೇ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಮುಂಚೂಣಿಯಲ್ಲಿದೆ.

ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲಿ ನಿಕಟ ಪೈಪೋಟಿ ಏರ್ಪಟ್ಟಿದೆ. ಈಗಾಗಲೇ ಮಾರಾಟದಲ್ಲಿರುವ ಫೋಕ್ಸ್ ವ್ಯಾಗಾನ್ ಎಮಿಯೊ, ಹ್ಯುಂಡೈ ಎಕ್ಸ್ ಸೆಂಟ್, ಹೋಂಡಾ ಅಮೇಜ್ ಹೊರತಾಗಿ ಷೆವರ್ಲೆ ಅತಿ ನೂತನ ಎನ್ಷೆನ್ಷಿಯಾ ಮತ್ತು ಟಾಟಾ ಮೋಟಾರ್ಸ್ ಕೈಟ್ 5 ಕಾರುಗಳನ್ನು ಬಿಡುಗಡೆ ಮಾಡಲಿದೆ.

ಹೊಸ ತಲೆಮಾರಿನ ಸ್ವಿಫ್ಟ್ ಕಾರು ಯುರೋಪ್ ಮಾರುಕಟ್ಟೆಯನ್ನು ತಲುಪಿದ ಬಳಿಕ ಭಾರತವನ್ನು ಹಿಂಬಾಲಿಸಲಿದೆ. ಇನ್ನೊಂದೆಡೆ ಸ್ವಿಫ್ಟ್ ಡಿಜೈರ್ ನೇರವಾಗಿ ಭಾರತದತ್ತ ಮುಖ ಮಾಡಲಿದೆ.


Click it and Unblock the Notifications