ಕೊಂಚ ನಿರಾಳ; ಮಾರುತಿ ವಿಟಾರಾ ಬ್ರಿಝಾ ನಿರ್ಮಾಣ ಏರಿಕೆ
ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ಅಬ್ಬರಿಸುತ್ತಿರುವ ವಿಟಾರಾ ಬ್ರಿಝಾ ಬೇಡಿಕೆಯನ್ನು ಸರಿದೂಗಿಸಲು ಮುಂದಾಗಿರುವ ದೇಶದ ಅತಿ ದೊಡ್ಡ ಮಾರುತಿ ಸುಜುಕಿ ಸಂಸ್ಥೆಯು ತನ್ನ ಜನಪ್ರಿಯ ಮಾದರಿಯ ನಿರ್ಮಾಣ ಸಾಮರ್ಥ್ಯವನ್ನು ಏರಿಸಲು ನಿರ್ಧರಿಸಿದೆ.
ಬಲ್ಲ ಮೂಲಗಳ ಪ್ರಕಾರ ಮಾರುತಿ ಸುಜುಕಿ ವಿಟಾರಾ ಬ್ರಿಝಾ ನಿರ್ಮಾಣ ಸಾಮರ್ಥ್ಯವನ್ನು ಜುಲೈ ತಿಂಗಳಿಂದ 10,000ಕ್ಕೆ ಏರಿಕೆಗೊಳಿಸಲಾಗುವುದು. ಈ ಮೂಲಕ ಕಾಯುವಿಕೆ ಅವಧಿ ಗಣನೀಯವಾಗಿ ಕುಸಿಯಲಿದೆ.

ಬಿಡುಗಡೆ ವೇಳೆ ಮೊದಲ ಒಂದು ಸಾಲಿನಲ್ಲಿ 80,000 ಯುನಿಟ್ ಗಳಷ್ಟು ವಿಟಾರಾ ಬ್ರಿಝಾ ನಿರ್ಮಿಸುವ ಇರಾದೆಯನ್ನು ಮಾರುತಿ ಹೊಂದಿತ್ತು. ಆದರೆ ಈಗ ಭಾರಿ ಬೇಡಿಕೆಯ ಹಿನ್ನಲೆಯಲ್ಲಿ ನಿರ್ಮಾಣ ಗುರಿಯನ್ನು ಒಂದು ಲಕ್ಷ ಯುನಿಟ್ ಗಳಿಗೆ ಏರಿಕೆಗೊಳಿಸಲಾಗಿದೆ.

ಮಾರುತಿ ವಿಟಾರಾ ಬ್ರಿಝಾಗೆ ಈಗಾಗಲೇ 70,000ಕ್ಕೂ ಹೆಚ್ಚು ಬುಕ್ಕಿಂಗ್ ದಾಖಲಾಗಿದೆ. ಈ ಪೈಕಿ 52,000 ಯುನಿಟ್ ಗಳು ಸರದಿಯಲ್ಲಿದ್ದು, ಇನ್ನಷ್ಟೇ ಹಸ್ತಾಂತರಿಸಬೇಕಿದೆ.

1.3 ಲೀಟರ್ ಫೋರ್ ಸಿಲಿಂಡರ್ ಡಿಡಿಐಎಸ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ವಿಟಾರಾ ಬ್ರಿಝಾ 200 ಎನ್ ಎಂ ತಿರುಗುಬಲದಲ್ಲಿ 90 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಇದು ಐದು ಸ್ಪೀಡ್ ಗೇರ್ ಬಾಕ್ಸ್ ಪಡೆದಿದ್ದು, ಭಾರತೀಯ ವಾಹನ ಅಧ್ಯಯನ ಸಂಸ್ಥೆ ಮಾನ್ಯತೆಯ ಪ್ರಕಾರ ಪ್ರತಿ ಲೀಟರ್ ಗೆ 24.3 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ನೂತನ ಮಾರುತಿ ವಿಟಾರಾ ಬ್ರಿಝಾ 2995 ಎಂಎಂ ಉದ್ದ, 1790 ಎಂಎಂ ಅಗಲ, 1640 ಎಂಎಂ ಎತ್ತರ ಮತ್ತು 2500 ಎಂಎಂ ಚಕ್ರಾಂತರವನ್ನು ಪಡೆದಿದೆ. ಅಲ್ಲದೆ 198 ಎಂಎಂ ಗ್ರೌಂಡ್ ಕ್ಲಿಯರನ್ಸ್ ಇದರಲ್ಲಿರುತ್ತದೆ.

ಸಬ್ ಫೋರ್ ಮೀಟರ್ ಎಸ್ ಯುವಿ ವಿಭಾಗದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಮತ್ತು ಮಹೀಂದ್ರ ಟಿವಿಯು 300 ಮುಂತಾದ ಮಾದರಿಗಳಿಗೆ ಮಾರುತಿ ವಿಟಾರಾ ಬ್ರಿಝಾ ಪೈಪೋಟಿಯನ್ನು ಒಡ್ಡುತ್ತಿದೆ.


Click it and Unblock the Notifications