7 ತಿಂಗಳಿಗೆ ವಿಸ್ತರಿಸಿದ ಮಾರುತಿ ವಿಟಾರಾ ಬ್ರಿಝಾ ಕಾಯುವಿಕೆ ಅವಧಿ
ಭಾರತದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ ಸಮಕಾಲಿನ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿರುವ ಅತ್ಯಂತ ಯಶಸ್ವಿ ಕಾರುಗಳಲ್ಲಿ ವಿಟಾರಾ ಬ್ರಿಝಾ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನ (ಎಸ್ ಯುವಿ) ಒಂದಾಗಿದೆ. ಮಾರುತಿ ವಿಟಾರಾ ಬ್ರಿಝಾ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಅತ್ಯಲ್ಪ ಅವಧಿಯಲ್ಲೇ 50,000 ಯುನಿಟ್ ಗಳಷ್ಟು ಹೆಚ್ಚು ಮಾರಾಟವನ್ನು ಕಂಡಿದೆ.
ವಿಟಾರಾ ಬ್ರಿಝಾ ಕಾರಿಗೆ ಮೂಡಿ ಬಂದಿರುವ ಬೇಡಿಕೆ ಇನ್ನು ಕುಸಿದಿಲ್ಲ. ಈಗ ಬಂದಿರುವ ತಾಜಾ ಮಾಹಿತಿಗಳ ಪ್ರಕಾರ ವಿಟಾರಾ ಬ್ರಿಝಾಗಾಗಿ ಏಳು ತಿಂಗಳಷ್ಟು ಕಾಲ ಕಾಯಬೇಕಿದೆ. ಒಟ್ಟಾರೆಯಾಗಿ ಒಂದು ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಂಡಿದೆ.

200 ಡಿಡಿಐಎಸ್ 1248 ಸಿಸಿ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ವಿಟಾರಾ ಬ್ರಿಝಾ 200 ಎನ್ ಎಂ ತಿರುಗುಬಲದಲ್ಲಿ 88.5 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದ್ದು, ಪ್ರತಿ ಲೀಟರ್ ಗೆ 24.3 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.
ವಿಟಾರಾ ಬ್ರಿಝಾಗೆ ಅತೀವ ಬೇಡಿಕೆಯನ್ನು ಪರಿಗಣಿಸಿರುವ ಮಾರುತಿ ಜುಲೈ ತಿಂಗಳಿಂದ ನಿರ್ಮಾಣ ಸಾಮರ್ಥ್ಯವನ್ನು 10,000 ಯುನಿಟ್ ಗಳಿಗೆ ಏರಿಕೆಗೊಳಿಸಿತ್ತು.
ಎಲ್ ಡಿಐ, ಎಲ್ ಡಿಐ (ಐಚ್ಚಿಕ), ವಿಡಿಐ, ವಿಡಿಐ (ಐಚ್ಛಿಕ), ಝಡ್ ಡಿ ಐ, ಝಡ್ ಡಿಐ ಪ್ಲಸ್ ಮತ್ತು ಝಡ್ ಡಿಐ ಡ್ಯುಯಲ್ ಟೋನ್ ಜೊತೆಗೆ ಆರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದ್ದಲ್ಲಿ ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್ ಜೊತೆ ಟರ್ನ್-ಇಂಡಿಕೇಟರ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಸ್ಮಾರ್ಟ್ ಪ್ಲೇ ಇನ್ಪೋಟೈನ್ಮೆಂಟ್ ಸಿಸ್ಟಂ, ಕೂಲ್ಡ್ ಗ್ಲೋವ್ ಬಾಕ್ಸ್, ಕ್ರೂಸ್ ಕಂಟ್ರೋಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಇನ್ ಬಿಲ್ಟ್ ನೇವಿಗೇಷನ್ ಸೌಲಭ್ಯಗಳಿವೆ. ಇನ್ನು ಚಾಲಕ ಬದಿಯ ಏರ್ ಬ್ಯಾಗ್, ಪ್ರಯಾಣಿಕ ಏರ್ ಬ್ಯಾಗ್, ಎಬಿಎಸ್ ಮತ್ತು ಇಬಿಡಿ ಸುರಕ್ಷಾ ವೈಶಿಷ್ಟ್ಯಗಳು ಇದರಲ್ಲಿದೆ.


Click it and Unblock the Notifications



















































