ಮರ್ಸಿಡಿಸ್ ಬೆಂಝ್ ಎಎಂಜಿ ಸಿ43 ಭಾರತದಲ್ಲಿ ಬಿಡುಗಡೆ; ಬೆಲೆ 74.35 ಲಕ್ಷ ರು.
ಮರ್ಸಿಡಿಸ್ ಬೆಂಝ್ ಎಎಂಜಿ ಸಿ43 ಕಾರು ಭಾರತದಲ್ಲಿ ಭರ್ಜರಿ ಬಿಡುಗಡೆ ಭಾಗ್ಯವನ್ನು ಕಂಡಿದೆ.
ಜರ್ಮನಿಯ ಐಷಾರಾಮಿ ವಾಹನ ಸಂಸ್ಥೆ ಮರ್ಸಿಡಿಸ್ ಬೆಂಝ್, ಭಾರತದಲ್ಲಿ ಅತಿ ನೂತನ ಎಎಂಜಿ ಸಿ43 ಕಾರನ್ನು ಬಿಡುಗಡೆಗೊಳಿಸಿದೆ. ತನ್ಮೂಲಕ ದೇಶದಲ್ಲಿ ನಿರ್ವಹಣಾ ಕಾರುಗಳ ಶ್ರೇಣಿಯನ್ನು ಮತ್ತಷ್ಟು ಬಲ ವೃದ್ಧಿಸಿಕೊಂಡಿದೆ.

ನೂತನ ಮರ್ಸಿಡಿಸ್ ಬೆಂಝ್ ಎಎಂಜಿ ಸಿ43 ಶಕ್ತಿಶಾಲಿ ಕಾರು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 74.35 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಇದು ಪ್ರಸಕ್ತ ಸಾಲಿನಲ್ಲಿ ಮರ್ಸಿಡಿಸ್ ಬೆಂಝ್ ದೇಶದಲ್ಲಿ ಬಿಡುಗಡೆ ಮಾಡುತ್ತಿರುವ 13ನೇ ಮಾದರಿಯಾಗಿದೆ. ತನ್ಮೂಲಕ ದೇಶದಲ್ಲಿ ಬದ್ಧತೆಯನ್ನು ಪ್ರದರ್ಶಿಸಿದೆ.

ಮರ್ಸಿಡಿಸ್ ಬೆಂಝ್ ಸಿ200 ಮತ್ತು ಎಎಂಜಿ63 ನಡುವಣ ಅಂತರವನ್ನು ನೂತನ ಎಎಂಜಿ ಸಿ43 ತುಂಬಿಕೊಳ್ಳಲಿದೆ.

3.0 ಲೀಟರ್ ವಿ6 ಎಂಜಿನ್ ನಿಂದ ನಿಯಂತ್ರಿಸಲ್ಪಡುವ ನೂತನ ಎಎಂಜಿ ಸಿ43 ಕಾರು 520 ಎನ್ ಎಂ ತಿರುಗುಬಲದಲ್ಲಿ 357 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, 9ಜಿ ಟ್ರಾನಿಕ್ ಗೇರ್ ಬಾಕ್ಸ್ ಗಿಟ್ಟಿಸಿಕೊಳ್ಳಲಿದೆ.

ಹಾಗೆಯೇ ಕೇವಲ 4.7 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವಷ್ಟು ಸಮರ್ಥವಾಗಿದೆ. ಹಾಗೆಯೇ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಬೆಂಝ್ ಸಿ63 ಹಾಗೂ ಸಿ200 ಮಾದರಿಗಿಂತಲೂ ವಿಭಿನ್ನವಾಗಿ 4 ಮ್ಯಾಟಿಕ್ ಆಲ್ ವೀಲ್ ಚಾಲನಾ ವ್ಯವಸ್ಥೆಯೊಂದಿಗೆ ಲಭ್ಯವಾಗಲಿರುವ ಸಿ43, ಜರ್ಮನಿಯದ್ದೇ ಆಗಿರುವ ಆಡಿ ಎಸ್4 ಮಾದರಿಗೆ ಸವಾಲಾಗಲಿದೆ.

ಹಾಗಿದ್ದರೂ ಭಾರತದಲ್ಲಿ ಎಸ್4 ಮಾರಾಟದಲ್ಲಿ ಇಲ್ಲವಾಗಿರುವುದರಿಂದ ಎಸ್5 ಸ್ಪೋರ್ಟ್ಸ್ ಬ್ಯಾಕ್ ಮತ್ತು ಮುಂಬರುವ ವೋಲ್ವೋ ಎಸ್60 ಪೋಲ್ ಸ್ಟಾರ್ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

ಆಕ್ರಮಣಕಾರಿ ಸಾನಿಧ್ಯ, ಕ್ರೀಡಾತ್ಮಕ ವಿನ್ಯಾಸ ಹಾಗೂ ಗರಿಷ್ಠ ಗುಣಮಟ್ಟದ ಒಳಮೈಗಳನ್ನು ನೂತನ ಬೆಂಝ್ ಎಎಂಜಿ ಸಿ43 ಕಾರು ಗಿಟ್ಟಿಸಿಕೊಳ್ಳಲಿದೆ.

ಬೆಂಝ್ ಎಎಂಜಿ ವಿಭಾಗದ ರೈಡ್ ಕಂಟ್ರೋಲ್ ಸಸ್ಪೆನ್ಷನ್ ವ್ಯವಸ್ಥೆಯು ಇದರಲ್ಲಿರಲಿದ್ದು, ವಿದ್ಯುನ್ಮಾನವಾಗಿ ಶಾಕ್ ಅಬ್ಸಾರ್ಬರ್ ನಿಯಂತ್ರಿಸಲಿದೆ.


Click it and Unblock the Notifications








