ಭಾರತದಲ್ಲಿ ಬೆಲೆ ಏರಿಕೆ ಚಾಟಿಯೇಟು ನೀಡಿದ ಬೆಂಝ್
ಹೊಸ ವರ್ಷ ಆಗಮನದೊಂದಿಗೆ ಮರ್ಸಿಡಿಸ್ ಬೆಂಝ್ ಬೆಲೆ ಏರಿಕೆ ನೀತಿಗೆ ತಲೆ ಬಾಗಿಸಿಕೊಂಡಿದೆ.
ಜರ್ಮನಿಯ ಐಷಾರಾಮಿ ವಾಹನ ಸಂಸ್ಥೆ ಮರ್ಸಿಡಿಸ್ ಬೆಂಝ್, ಭಾರತದಲ್ಲಿ ತನ್ನೆಲ್ಲ ಶ್ರೇಣಿಯ ಕಾರುಗಳಿಗೆ ಬೆಲೆ ಏರಿಕೆಗೊಳಿಸಲು ನಿರ್ಧರಿಸಿದೆ. ಇದರೊಂದಿಗೆ ಬೆಲೆ ಏರಿಕೆಗೊಳಿಸಿರುವ ಸಾಲಿಗೆ ಮಗದೊಂದು ಜನಪ್ರಿಯ ಕಾರು ಸಂಸ್ಥೆ ಸೇರ್ಪಡೆಗೊಂಡಿದೆ.

2017 ಜನವರಿ 01ರಂದು ಜಾರಿಗೆ ಬರುವಂತೆಯೇ ಬೆಂಝ್ ಕಾರುಗಳಿಗೆ ಶೇಕಡಾ 2ರಷ್ಟು ಬೆಲೆ ಏರಿಕೆಗೊಳ್ಳಲಿದೆ.

ಹಣದುಬ್ಬರ, ನಿರ್ಮಾಣ ವೆಚ್ಚ ಏರಿಕೆ ಹಾಗೂ ವಿದೇಶ ವಿನಿಮಯ ಕೇಂದ್ರಗಳಲ್ಲಿ ದರ ಹೆಚ್ಚುತ್ತಿರುವುದರಿಂದ ಬೆಲೆ ಏರಿಕೆ ಅನಿವಾರ್ಯವಾಗಿದೆ.

ಪ್ರೀಮಿಯಂ ಕಾರು ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನ ಉಳಿಸಿಕೊಂಡಿರುವ ಬೆಂಝ್, ಗ್ರಾಹಕರಿಗೆ ಹೊಡೆತ ಬೀಳುವುದನ್ನು ತಡೆಯಲು ಪ್ರಯತ್ನ ನಡೆಸಿದೆ.

ಆದರೆ ಅನಿವಾರ್ಯ ಪರಿಸ್ಥಿತಿ ಎದುರಾಗಿರುವ ಹಿನ್ನಲೆಯಲ್ಲಿ ಬೆಲೆ ಏರಿಕೆಗೊಳಿಸಲು ನಿರ್ಧರಿಸಿದೆ.

ಭಾರತದಲ್ಲಿ ಬೆಂಝ್ ಸಂಸ್ಧೆಯು 27 ಲಕ್ಷ ರು.ಗಳ ಎ ಕ್ಲಾಸ್ ನಿಂದ ಹಿಡಿದು 2.6 ಕೋಟಿ ರುಪಾಯಿ ಬೆಲೆ ಬಾಳುವ ಮರ್ಸಿಡಿಸ್ ಮೇಬ್ಯಾಕ್ ಎಸ್600 ಕಾರುಗಳನ್ನು ಮಾರಾಟ ಮಾಡುತ್ತಿದೆ.

ಮರ್ಸಿಡಿಸ್ ಬೆಂಝ್ ಯಾವೆಲ್ಲ ಕಾರುಗಳಿಗೆ ಎಷ್ಟೆಷ್ಟು ಬೆಲೆ ಏರಿಕೆಗೊಳ್ಳಲಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

ಅತ್ತ ಗ್ರಾಹಕರಿಗೆ ಹಲವಾರು ಹಣಕಾಸು ಸೇವೆಗಳನ್ನು ಬೆಂಝ್ ಒದಿಸುತ್ತಿದೆ. ಇದರಲ್ಲಿ ಸ್ಟಾರ್ ಎಜಿಲಿಟಿ, ಸ್ಟಾರ್ ಫೈನಾನ್ಸ್, ಸ್ಟಾರ್ ಲೀಸ್, ಕಾರ್ಪೋರೇಟ್ ಸ್ಟಾರ್ ಲೀಸ್ ಇತ್ಯಾದಿಗಳು ಸೇರಿಕೊಂಡಿದೆ.

ಭಾರತದಲ್ಲಿ ಆಕ್ರಮಣಕಾರಿ ನಿಲುವನ್ನು ಮುಂದುವರಿಸಿರುವ ಬೆಂಝ್ 2015 ಹಾಗೂ 2016ನೇ ಸಾಲಿನಲ್ಲಿ ಅನುಕ್ರಮವಾಗಿ 15 ಮತ್ತು 13 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.

ಇನ್ನೊಂದೆಡೆ ಟಾಟಾ ಮೋಟಾರ್ಸ್, ನಿಸ್ಸಾನ್, ಟೊಯೊಟಾ, ಹ್ಯುಂಡೈ ಮತ್ತು ಫೋಕ್ಸ್ ವ್ಯಾಗನ್ ಸಂಸ್ಥೆಗಳು ಬೆಲೆ ಏರಿಕೆ ನೀತಿಯನ್ನು ಪ್ರಕಟಿಸಿವೆ.


Click it and Unblock the Notifications








