ನ್ಯೂ ಜನರೇಷನ್ ಮಾರುತಿ ಸ್ವಿಫ್ಟ್; ಹತ್ತಿರದಿಂದ ಅರಿಯೋಣವೇ?
ದೇಶದ ಸರ್ವಕಾಲಿಕ ಶ್ರೇಷ್ಠ ಹ್ಯಾಚ್ ಬ್ಯಾಕ್ ಕಾರುಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ಸ್ವಿಫ್ಟ್, ಆಧುನಿಕತೆಗೆ ತಕ್ಕಂತೆ ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಈ ನಡುವೆ ಹೊಸ ತಲೆಮಾರಿನ ಸ್ವಿಫ್ಟ್ ಕಾರಿನ ಚಿತ್ರಗಳು ಬಿಡುಗಡೆಯಾಗಿದೆ.
ಕಳೆದ ಕೆಲವು ಸಮಯಗಳಿಂದ ನೂತನ ಸ್ವಿಫ್ಟ್ ಕಾರಿನ ನಿರ್ಮಾಣದಲ್ಲಿ ಮಾರುತಿ ಸುಜುಕಿ ತೊಡಗಿಸಿಕೊಂಡಿದ್ದು, ಹೊರಮೈ ಮತ್ತು ಒಳಮೈ ಚಿತ್ರಗಳು ಪರಿಣಾಮಕಾರಿ ಎನಿಸಿಕೊಂಡಿದೆ.

ಬಲ್ಲ ಮೂಲಗಳ ಪ್ರಕಾರ ನೂತನ ಸ್ವಿಫ್ಟ್ ಯುರೋಪ್ ಡೀಲರ್ ಗಳ ಬಳಿ ಪ್ರತ್ಯಕ್ಷಗೊಂಡಿದ್ದು, ಹೆಚ್ಚು ಗಮನಕ್ಕೆ ಪಾತ್ರವಾಗಿದೆ.

ನೂತನ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರಿನಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಾಗಿದೆ. ಮುಂದುಗಡೆ ಹನಿಕಾಂಬ್ ಗ್ರಿಲ್, ಪರಿಷ್ಕೃತ ಹೆಡ್ ಲ್ಯಾಂಪ್, ಹೊಸ ಫಾಗ್ ಲ್ಯಾಂಪ್, ದೊಡ್ಡದಾದ ಏರ್ ವೆಂಟ್ಸ್ ಮುಂತಾದ ವ್ಯವಸ್ಥೆಗಳಿರಲಿದೆ.

ಈಗ ಮಾರುಕಟ್ಟೆಯಲ್ಲಿರುವ ಸ್ವಿಫ್ಟ್ ಕಾರಿಗೆ ಹೋಲಿಸಿದಾಗ 2017 ಸ್ವಿಫ್ಟ್ ಅನೇಕ ಬದಲಾವಣೆಗಳನ್ನು ಪಡೆದಿದೆ. ಇದು ಬಾಗಿದ ರೂಫ್ ಲೈನ್, ಕಪ್ಪು ವರ್ಣದ ಸಿ ಪಿಲ್ಲರ್, ಸ್ವಭಾವ ರೇಖೆಗಳು, ರಿಯರ್ ಗೇಟ್ ಡೋರ್ ಹ್ಯಾಂಡಲ್, ವೀಲ್ ಆರ್ಚ್ ಮತ್ತು ಹೊಸ ಅಲಾಯ್ ವೀಲ್ ಗಿಟ್ಟಿಸಿಕೊಳ್ಳಲಿದೆ.

ಇನ್ನು ಕಾರಿನ ಹಿಂದುಗಡೆ ಹೊಸತಾದ ಟೈಲ್ ಲ್ಯಾಂಪ್ ಮತ್ತು ಬಂಪರ್ ಗಳು ಕಂಡುಬರಲಿದೆ. ಇವೆಲ್ಲವೂ ತಾಜಾತನವನ್ನು ಕಾಪಾಡಿಕೊಂಡಿದೆ.

ಹಾಗಿದ್ದರೂ ಕಾರಿನಡಿಯಲ್ಲಿ ಯಾವ ಎಂಜಿನ್ ಇರಲಿದೆ ಎಂಬುದಕ್ಕೆ ಸ್ಪಷ್ಟನೆ ಬಂದಿಲ್ಲ. ಆದರೆ ಸುಜುಕಿ ಬೂಸ್ಟರ್ ಜೆಟ್ ಫ್ಯಾಮಿಲಿಯ ನೂತನ 1.0 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಬಳಕೆಯಾಗುವ ಸಾಧ್ಯತೆಯಿದೆ. ಇದು ಮುಂಬರುವ ಬಲೆನೊ ಆರ್ ಎಸ್ ಮುಖಾಂತರ ಪಾದಾರ್ಪಣೆಗೈಯಲಿದೆ.

ಇದರ 1.0 ಲೀಟರ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ 175 ಎನ್ ಎಂ ತಿರುಗುಬಲದಲ್ಲಿ 112 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇನ್ನು ಡೀಸೆಲ್ ಎಂಜಿನ್ ಆಯ್ಕೆಯೂ ಇರುತ್ತದೆ.

ಒಟ್ಟಿನಲ್ಲಿ ನೂತನ ಸ್ವಿಫ್ಟ್ ಯಾವಾಗ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ ಎಂಬುದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ವರ್ಷಾಂತ್ಯದಲ್ಲಿ ಅಥವಾ ಮುಂದಿನ ವರ್ಷ ಮಾರುಕಟ್ಟೆ ಪ್ರವೇಶಿಸಲಿದೆ.


Click it and Unblock the Notifications