ಹೊಸ ವರ್ಷದಿಂದ ರೆನೊ ಕಾರುಗಳಿಗೆ ಬೆಲೆ ಏರಿಕೆ ಬಿಸಿ
ಹೊಸ ವರ್ಷದಿಂದ ರೆನೊ ಕಾರುಗಳು ಮತ್ತಷ್ಟು ದುಬಾರಿಯೆನಿಸಲಿದೆ.
ಹೊಸ ವರ್ಷ ಆಗಮನವಾಗುತ್ತಿರುವಂತೆಯೇ ದೇಶದ ಮುಂಚೂಣಿಯ ವಾಹನ ಸಂಸ್ಥೆಗಳು ತನ್ನ ಮಾರಾಟ ನೀತಿಯನ್ನು ಬದಲಾಯಿಸುವುದರತ್ತ ಕಾರ್ಯ ಮಗ್ನವಾಗಿದೆ. ಪ್ರಸ್ತುತ ವರ್ಷಾಂತ್ಯದ ವೇಳೆಯಲ್ಲಿ ಗರಿಷ್ಠ ಆಫರುಗಳನ್ನು ನೀಡುತ್ತಿವೆಯಾದರೂ ಹೊಸ ವರ್ಷದಿಂದ ಪ್ರಯಾಣಿಕ ಕಾರುಗಳು ದುಬಾರಿಯೆನಿಸಲಿದೆ.

ಹೊಸ ವರ್ಷ ಮತ್ತು ಕ್ರಿಸ್ಮಸ್ ಬರಮಾಡಿಕೊಳ್ಳಲು ಈ ವರ್ಷಾಂತ್ಯದ ಡಿಸೆಂಬರ್ ತಿಂಗಳಲ್ಲಿ ಗರಿಷ್ಠ ಆಫರುಗಳನ್ನು ನೀಡಲಾಗುತ್ತಿದೆ.

ಕೇಂದ್ರ ಸರಕಾರದ ಅಪನಗದೀಕರಣವು ಸಹ ವಾಹನದ ಮಾರಾಟದ ಮೇಲೆ ಬಿಸಿ ತಟ್ಟಿರುವುದರಿಂದ ಆನ್ ರೋಡ್ ದರದ ಮೇಲೆ ಶೂನ್ಯ ದರದಲ್ಲಿ ಸಾಲದ ನೆರವನ್ನು ನೀಡಲಾಗುತ್ತಿದೆ.

ಆದರೆ ಹೊಸ ವರ್ಷದ ಬಳಿಕ ಪರಿಸ್ಥಿತಿ ಬದಲಾಗಲಿದೆ. ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ದೇಶದಲ್ಲಿರುವ ತನ್ನೆಲ್ಲ ಶ್ರೇಣಿಯ ಕಾರುಗಳಿಗೆ ಶೇಕಡಾ 1.5 ರಿಂದ 3ರ ವರೆಗೆ ಬೆಲೆ ಏರಿಕೆಗೊಳಿಸಲಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ರೆನೊ ಸಂಸ್ಥೆಯು ಕಳೆದ ಕೆಲವು ಸಮಯಗಳಿಂದ ಜಾಗತಿಕ ಮಟ್ಟದಲ್ಲಿ ಲೋಹದ ದರ ಗಣನೀಯವಾಗಿ ವರ್ಧಿಸಿದೆ ಇದು ವಾಹನ ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ ಎಂದಿದೆ.

ಕಳೆದ ಕೆಲವು ತಿಂಗಳುಗಳಿಂದ ಬೆಲೆ ಏರಿಕೆ ಅನಿವಾರ್ಯ ಎನಿಸಿದ್ದರೂ ಕಾಯುವಿಕೆ ತಂತ್ರವನ್ನು ರೆನೊ ಅನುಸರಿಸತ್ತಲೇ ಬಂದಿತ್ತು.

ರೆನೊ ಪರಿಷ್ಕೃತ ಬೆಲೆ ನೀತಿಯು 2017 ಜನವರಿ 01ರಿಂದಲೇ ಜಾರಿಗೆ ಬರಲಿದೆ. ಯಾವೆಲ್ಲ ಮಾದರಿಗಳಿಗೆ ಎಷ್ಟೆಷ್ಟು ಬೆಲೆ ಏರಿಕೆ ತಗುಲಲಿದೆ ಎಂಬುದು ಇನ್ನಷ್ಟೇ ಬಯಲಾಗಬೇಕಿದೆ.

ಭಾರತದಲ್ಲಿ 2.64 ಲಕ್ಷ ರು.ಗಳಿಂದ 13.77 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ರೆನೊ ಶ್ರೇಣಿಯ ಕಾರುಗಳನ್ನು ಮಾರಾಟ ಮಾಡುತ್ತಿದೆ. ಇವುಗಳ ಪೈಕಿ ರೆನೊ ಕ್ವಿಡ್ ಮತ್ತು ಡಸ್ಟರ್ ಹೆಚ್ಚು ಜನಪ್ರಿಯತೆ ದಾಖಲಿಸಿದೆ.


Click it and Unblock the Notifications








