ರೆನೊ ಕ್ವಿಡ್ ಶಕ್ತಿಶಾಲಿ ಆವೃತ್ತಿ ಬಿಡುಗಡೆಗೆ ಸಿದ್ಧ; ಮಾರುತಿಗೆ ಭಾರಿ ಹೊಡೆತ?
ಇದೀಗ ಎಲ್ಲವೂ ಅಂತಿಮಗೊಂಡಿದ್ದು, ಬಹುನಿರೀಕ್ಷಿತ ರೆನೊ ಕ್ವಿಡ್ ಶಕ್ತಿಶಾಲಿ 1.0 ಲೀಟರ್ ಆವೃತ್ತಿಯು ಮುಂಬರುವ 2016 ಆಗಸ್ಟ್ 23ರಂದು ಭರ್ಜರಿ ಬಿಡುಗಡೆಯಾಗಲಿದೆ. ಇದೇ ಸಂದರ್ಭದಲ್ಲಿ ರೆನೊ ಕ್ವಿಡ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಆಗಮನವಾಗುವ ಸಾಧ್ಯತೆಯಿದೆ.
ವರ್ಷಾರಂಭದಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ರೆನೊ ಕ್ವಿಡ್ 1.0 ಲೀಟರ್ ಮತ್ತು ಈಸಿ-ಆರ್ ಎಎಂಟಿ ಆವೃತ್ತಿಗಳು ಅನಾವರಣಗೊಂಡಿದ್ದವು. ಈಗ ಹಬ್ಬದ ಆವೃತ್ತಿಗೂ ಮುಂಚಿತವಾಗಿ ವಾಹನ ಪ್ರೇಮಿಗಳನ್ನು ತಲುಪುತ್ತಿದೆ. ಇದು ಮಾರುತಿಗೆ ದೊಡ್ಡ ಹೊಡೆತವನ್ನು ನೀಡಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.

ಕಳೆದ ವರ್ಷ ಬಿಡುಗಡೆಗೊಂಡಿರುವ ರೆನೊ ಕ್ವಿಡ್ 800 ಸಿಸಿ ಆವೃತ್ತಿಗೆ ಮಾರುಕಟ್ಟೆಯಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರಿಂದ ಸ್ಪೂರ್ತಿ ಪಡೆದಿರುವ ರೆನೊ ಸಂಸ್ಥೆಯು ಮತ್ತೆರಡು ಆಕರ್ಷಕ ಮಾದರಿಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.

ನೂತನ ರೆನೊ ಕ್ವಿಡ್ 1.0 ಲೀಟರ್ ಆವೃತ್ತಿಯು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 3 ಲಕ್ಷ ರು.ಗಳಿಂದ 4 ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

ಆಸಕ್ತ ಗ್ರಾಹಕರು ರೆನೊ ಕ್ವಿಡ್ ಶಕ್ತಿಶಾಲಿ ಆವೃತ್ತಿಗಾಗಿ ಆಗಸ್ಟ್ 23ರಿಂದ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಬಳಿಕ ಸೆಪ್ಟೆಂಬರ್ ತಿಂಗಳಲ್ಲಿ ವಿತರಣೆ ಪ್ರಕ್ರಿಯೆಯು ಆರಂಭವಾಗಲಿದೆ.

ನೂತನ ರೆನೊ ಕ್ವಿಡ್ ನಲ್ಲಿರುವ 999 ಸಿಸಿ ಎಂಜಿನ್ 70ರಷ್ಟು ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಲಿದೆ. ಅಂತೆಯೇ ಪ್ರತಿ ಲೀಟರ್ ಗೆ 23ರಿಂದ 24 ಕೀ.ಮೀ. ಮೈಲೇಜ್ ನೀಡುವಷ್ಟು ಸಮರ್ಥವೆನಿಸಿಕೊಳ್ಳಲಿದೆ.

ಮಾರುಕಟ್ಟೆಯಲ್ಲಿರುವ ಸ್ಟ್ಯಾಂಡರ್ಡ್ ಕ್ವಿಡ್ ಆವೃತ್ತಿಗೆ ಹೋಲಿಸಿದಾಗ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ಕಂಡುಬರುವ ಸಾಧ್ಯತೆಯಿಲ್ಲ. ಅಂದರೆ ಎಸ್ ಯುವಿ ಶೈಲಿಯ ಹ್ಯಾಚ್ ಬ್ಯಾಕ್ ಎಂಬ ಪಟ್ಟವನ್ನು ಉಳಿಸಿಕೊಳ್ಳಲಿದೆ.

ಕಾರಿನೊಳಗೆ ಮ್ಯಾನುವಲ್ ಗೇರ್ ಬಾಕ್ಸ್ ಬದಲು ಎಎಂಟಿ ಟ್ರಾನ್ಸ್ ಮಿಷನ್ ವ್ಯವಸ್ಥೆಯು ಲಭ್ಯವಾಗಲಿದೆ. ಇನ್ನು 800 ಸಿಸಿ ಗಿಂತಲೂ ಹೆಚ್ಚಿನ ವೈಶಿಷ್ಟ್ಯಗಳನ್ನು ನಿರೀಕ್ಷೆ ಮಾಡಬಹುದಾಗಿದೆ.

ಪ್ರಮುಖ ವೈಶಿಷ್ಟ್ಯಗಳು
ಟಚ್ ಸ್ಕ್ರೀನ್ ಜೊತೆ ಬ್ಲೂಟೂತ್, ಆಕ್ಸ್, ಯುಎಸ್ ಬಿ, ಎಲೆಕ್ಟ್ರಿಕ್ ಮಿರರ್, ಎಸಿ, ಪವರ್ ವಿಂಡೋ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್.

ಸುರಕ್ಷತೆ
ಇನ್ನು ಟಾಪ್ ಎಂಡ್ ಕ್ವಿಡ್ ಆವೃತ್ತಿಯು ಡ್ಯುಯಲ್ ಎರ್ ಬ್ಯಾಗ್ ಹಾಗೂ ಎಬಿಎಸ್ ಗಳಂತಹ ಸುರಕ್ಷಾ ವೈಶಿಷ್ಟ್ಯಗಳನ್ನು ಪಡೆಯಲಿದೆ.

ಪ್ರತಿಸ್ಪರ್ಧಿಗಳು
ಮಾರುತಿ ಸೆಲೆರಿಯೊ,
ಆಲ್ಟೊ ಕೆ10
ಹ್ಯುಂಡೈ ಇಯಾನ್ 1.0 ಲೀಟರ್


Click it and Unblock the Notifications








