ರೆನೊ ಕ್ವಿಡ್ ಕಾರಿನಲ್ಲಿ ಸಮಸ್ಯೆ, 50,000 ವಾಪಾಸ್; ನಿಮ್ಮ ಕಾರು ಸೇಫ್ ಆಗಿದೆಯಾ?
ಫ್ರಾನ್ಸ್ ಮೂಲದ ರೆನೊ ಸಂಸ್ಥೆ ಬಿಡುಗಡೆ ಮಾಡಿರುವ ಅತ್ಯಂತ ಜನಪ್ರಿಯ ಕ್ವಿಡ್ ಸಣ್ಣ ಕಾರು ಮಾರುಕಟ್ಟೆಯಲ್ಲಿ ಬಿಸಿ ಬಿಸಿಯಾಗಿ ಮಾರಾಟವಾಗುತ್ತಿದೆ. ಮಗದೊಂದು ಕಡೆ ಈ ಜನಪ್ರಿಯ ಕಾರಿಗೆ ಸಮಸ್ಯೆ ತಟ್ಟಿರುವುದು ಮಾಲಿಕರಲ್ಲಿ ಆತಂಕಕ್ಕೀಡು ಮಾಡಿದೆ. ದೋಷಯುಕ್ತ ಇಂಧನ ಕೊಳವೆಯ ಹಿನ್ನಲೆಯಲ್ಲಿ 50,000 ಯುನಿಟ್ ಗಳಷ್ಟು ರೆನೊ ಕ್ವಿಡ್ ಕಾರುಗಳಿಗೆ ತಾತ್ಕಾಲಿಕ ವಾಪಾಸ್ ಕರೆ ನೀಡಿರುವುದು ಈಗಿನ ಎಕ್ಸ್ ಕ್ಲೂಸಿವ್ ಸುದ್ದಿಯಾಗಿದೆ. ಹಾಗಿದ್ದರೆ ನಿಮ್ಮ ರೆನೊ ಕ್ವಿಡ್ ಕಾರಿಗೂ ಸಮಸ್ಯೆ ತಟ್ಟಿದೆಯೇ ? ಹೆಚ್ಚಿನ ಮಾಹಿತಿಗಾಗಿ ಸಂಪೂರ್ಣ ಲೇಖನದತ್ತ ಕಣ್ಣಾಯಿಸಿರಿ.

ಬಲ್ಲ ಮೂಲಗಳ ಪ್ರಕಾರ ರೆನೊ ಕ್ವಿಡ್ ಕಾರಿನ ಇಂಧನ ವ್ಯವಸ್ಥೆ ಮತ್ತು ಕೊಳವೆ ಕ್ಲಿಪ್ ನಲ್ಲಿ ಸಮಸ್ಯೆ ಕಂಡುಬಂದಿದೆ. ಈ ಹಿನ್ನಲೆಯಲ್ಲಿ 50,000ದಷ್ಟು ಕಾರುಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಾಗಿದೆ.

ಯಾವಾಗ ನಿರ್ಮಾಣ
2015 ಅಕ್ಟೋಬರ್ ತಿಂಗಳಿಂದ 2016 ಮೇ 18ರ ದಿನಾಂಕದ ನಡುವೆ ನಿರ್ಮಾಣವಾದ ರೆನೊ ಕ್ವಿಡ್ 800 ಸಿಸಿ ಕಾರುಗಳಲ್ಲಿ ಸಮಸ್ಯೆ ಕಂಡುಬರುವ ಸಾಧ್ಯತೆಯಿದೆ.

ಇದರಿಂದಾಗಿ ರೆನೊ ಇಂಡಿಯಾ ತಾತ್ಕಾಲಿಕ ರಿಕಾಲ್ ಗೆ ಕರೆ ನೀಡಿದ್ದು, ಪರಿಶೀಲನೆ ನಡೆಸಿ ದೋಷ ಕಂಡುಬಂದಲ್ಲಿ ಸಂಪೂರ್ಣ ಉಚಿತವಾಗಿ ಸಮಸ್ಯೆ ಬಗೆಹರಿಸಿ ಕೊಡಲಾಗುವುದು.

ಮುಂಜಾಗ್ರತಾ ಕ್ರಮವಾಗಿ ರೆನೊ ಸಂಸ್ಥೆಯು ಕ್ವಿಡ್ ಕಾರುಗಳನ್ನು ವಾಪಾಸ್ ಕರೆಯಿಸಿಕೊಳ್ಳುತ್ತಿದೆ. ಇದೀಗ ಇಂಧನ ಪೂರೈಕೆಗೆ ಅಡ್ಡಿ ಬರದಂತೆ ಒಟ್ಟಾರೆ ಇಂಧನ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಪರಿಶೀಲಿಸಲಾಗುತ್ತಿದೆ.

ಹಾಗೊಂದು ವೇಳೆ ಮೇಲೆ ತಿಳಿಸಿದ ದಿನಾಂಕಗಳಲ್ಲಿ ನಿರ್ಮಾಣವಾದ ರೆನೊ ಕ್ವಿಡ್ ಕಾರುಗಳನ್ನು ನೀವು ಖರೀದಿ ಮಾಡಿದ್ದಲ್ಲಿ ಈ ಕೂಡಲೇ ರೆನೊ ಅಧಿಕೃತ ಡೀಲರುಗಳನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಬಹುದಾಗಿದೆ.

2015 ಸೆಪ್ಟೆಂಬರ್ ತಿಂಗಳಲ್ಲಿ ಕ್ವಿಡ್ 800 ಸಿಸಿ ಕಾರನ್ನು ಬಿಡುಗಡೆ ಮಾಡಲಾಗಿತ್ತು. ರೆನೊ ಸಣ್ಣ ಕಾರಿಂದ ಪುಳಕಿತಗೊಂಡ ಸಂಸ್ಥೆಯು 2016 ಆಗಸ್ಟ್ ತಿಂಗಳಲ್ಲಿ ಒಂದು ಲೀಟರ್ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು.

ಪ್ರಸಕ್ತ ಆರ್ಥಿಕ ಸಾಲಿನ ಮೊದಲ ಆರು ತಿಂಗಳಲ್ಲಿ ರೆನೊ ಸಂಸ್ಥೆಯು 56,028ದಷ್ಟು ಕ್ವಿಡ್ ಕಾರುಗಳನ್ನು ಮಾರಾಟ ಮಾಡುವಲ್ಲಿ ಯಶ ಕಂಡಿದೆ.

ಮಾರುತಿಯ ನಂ.1 ಆಲ್ಟೊ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ರೆನೊ ಕಾರುಗಳು 2.64 ಲಕ್ಷ ರು.ಗಳಿಂದ 3.95 ಲಕ್ಷ ರು.ಗಳಷ್ಟು (ದೆಹಲಿ ಎಕ್ಸ್ ಶೋ ರೂಂ ಬೆಲೆ) ದುಬಾರಿಯೆನಿಸಿದೆ.

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾದ ರೆನೊ ಕ್ವಿಡ್ ಇದುವರೆಗೆ 1,65,000 ಕ್ಕೂ ಹೆಚ್ಚು ಬುಕ್ಕಿಂಗ್ಸ್ ಗಿಟ್ಟಿಸಿಕೊಂಡಿದೆ. ಈ ಪೈಕಿ 80,000ದಷ್ಟು ಹೆಮ್ಮೆಯ ಮಾಲಿಕರನ್ನು ಗಿಟ್ಟಿಸಿಕೊಂಡಿದ್ದಾರೆ.

ಸಂಸ್ಥೆಯು ಬಿಡುಗಡೆ ಮಾಡಿರುವ ವರದಿಗಳ ಪೈಕಿ, ಕ್ವಿಡ್ ಒಟ್ಟಾರೆ ಮಾರಾಟದ ಪೈಕಿ ಶೇಕಡಾ 50ರಷ್ಟು ಮಂದಿ ಮೊದಲ ಬಾರಿ ಕಾರು ಖರೀದಿಸುವ ಗ್ರಾಹಕರಾಗಿದ್ದಾರೆ. ಇನ್ನು ಶೇಕಡಾ 60ರಷ್ಟು ಮಂದಿ 35 ವರ್ಷದೊಳಗಿನ ಯುವಕ/ಯುವತಿಯರಾಗಿದ್ದಾರೆ.


Click it and Unblock the Notifications








