ಟಾಟಾ ಕೈಟ್ 5 ನಿರ್ಮಾಣ ಸಿದ್ಧ ಕಾರಿನ ಚಿತ್ರಗಳು ಬಯಲು
ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ಬಿಡುಗಡೆ ಮಾಡಲಿರುವ ಅತಿ ನೂತನ 'ಟಾಟಾ ಕೈಟ್ 5' ನಿರ್ಮಾಣ ಸಿದ್ಧ ಕಾರಿನ ಚಿತ್ರಗಳು ಬಯಲಾಗಿದೆ. ಹಲವಾರು ಬಾರಿ ಪರೀಕ್ಷಾರ್ಥ ಹಂತದಲ್ಲಿ ಕ್ಯಾಮೆರಾ ಕಣ್ಣುಗಳಿಗೆ ಸೆರೆ ಸಿಕ್ಕಿರುವ ಟಾಟಾ ಕೈಟ್ 5 ಈಗ ನಿರ್ಮಾಣ ಹಂತವನ್ನು ತಲುಪುತ್ತಿದೆ.
ನಿಮ್ಮ ಮಾಹಿತಿಗಾಗಿ, ಟಾಟಾ ಕೈಟ್ 5 ಎಂಬುದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಟಿಯಾಗೊ ಹ್ಯಾಚ್ ಬ್ಯಾಕ್ ಕಾರಿನ ಕಾಂಪಾಕ್ಟ್ ಸೆಡಾನ್ ಆವೃತ್ತಿಯಾಗಿದೆ. ಇದು ಸಹ ಟಾಟಾದ ನೂತನ ವಿನ್ಯಾಸ ತಂತ್ರಗಾರಿಕೆಯೊಂದಿಗೆ ಮಾರುಕಟ್ಟೆಯನ್ನು ಅಪ್ಪಳಿಸಲಿದೆ.

2016 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿರುವ ಟಾಟಾ ಕೈಟ್ 5, ನಾಲ್ಕು ಮೀಟರ್ ಉದ್ದ ಪರಿಧಿಯೊಳಗೆ ನಿರ್ಮಾಣವಾಗುತ್ತಿದ್ದು, ತೆರಿಗೆ ವಿನಾಯಿತಿ ಗಿಟ್ಟಿಸಿಕೊಳ್ಳಲು ನೆರವಾಗಲಿದೆ. ತನ್ಮೂಲಕ ಸ್ಪರ್ಧಾತ್ಮಕ ಬೆಲೆಗಳಲ್ಲಿ ಮಾರುಕಟ್ಟೆಯನ್ನು ತಲುಪಲಿದೆ.

ಶ್ವೇತ ವರ್ಣದಲ್ಲಿ ಕಂಗೊಳಿಸುತ್ತಿರುವ ನೂತನ ಟಾಟಾ ಕೈಟ್, ಮೇಲ್ಚಾವಣಿಯಲ್ಲಿ ಕಪ್ಪು ಪಟ್ಟಿಯನ್ನು ಲಗತ್ತಿಸಲಾಗಿದೆ. ಇನ್ನುಳಿದಂತೆ ಕಾನ್ಸೆಪ್ಟ್ ಮಾದರಿಯಲ್ಲಿರುವುದಕ್ಕೆ ಸಮಾನವಾದ ವಿನ್ಯಾಸವನ್ನು ಉಳಿಸಿಕೊಳ್ಳಲಾಗಿದೆ.

ಹಿಂಬದಿಯಲ್ಲಿ ಎರಡು ಟೈಲ್ ಲ್ಯಾಂಪ್ ಗಳ ನಡುವೆ ಕ್ರೋಮ್ ಪಟ್ಟಿ ಹಾದು ಹೋಗುತ್ತದೆ. ಇನ್ನು ಸಂಯೋಜಿತ ಸ್ಪಾಯ್ಲರ್, ರೆಡಿಯೋ ಏರಿಯಲ್ ಇತ್ಯಾದಿ ಸೌಲಭ್ಯಗಳಿರಲಿದೆ.

ಬದಿಯಿಂದ ನೋಡಿದಾಗ ಕೂಪೆ ಶೈಲಿಯ ವಿನ್ಯಾಸವನ್ನು ಟಾಟಾ ಕೈಟ್ ಕಾಪಾಡಿಕೊಂಡಿದೆ. ಒಟ್ಟಾರೆಯಾಗಿ ಆಕರ್ಷಕ ಮೈಮಾಟವನ್ನು ಪಡೆದಿದೆ.

ಕಾರಿನೊಳಗೆ ಎಲ್ಲ ಕಪ್ಪು ವರ್ಣದ ವಿನ್ಯಾಸ ನೀತಿಯನ್ನು ಅನುಸರಿಸಲಾಗಿದೆ. ಹಿಂದುಗಡೆ ಸೀಟಿನಲ್ಲೂ ಸಂಯೋಜಿತ ಆರ್ಮ್ ರೆಸ್ಟ್ ಸಹ ಇರಲಿದೆ.

ಟಾಪ್ ಎಂಡ್ ವೆರಿಯಂಟ್ ನಲ್ಲಿ ಹರ್ಮಾನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಯುಎಸ್ ಬಿ, ಆಕ್ಸ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿ, ಎಬಿಎಸ್, ಡ್ಯುಯಲ್ ಫ್ರಂಟ್ ಏರ್ ಬ್ಯಾಗ್, ಅಲಾಯ್ ವೀಲ್, ಫಾಗ್ ಲ್ಯಾಂಪ್ ಮುಂತಾದ ವೈಶಿಷ್ಟ್ಯಗಳಿರಲಿದೆ.

ನೂತನ ಟಾಟಾ ಕೈಟ್ 5 ಸಹ 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಮತ್ತು 1.5 ಲೀಟರ್ ರೆವೊಟಾರ್ಕ್ ಡೀಸೆಲ್ ಎಂಜಿನ್ ಪಡೆಯುವ ಸಾಧ್ಯತೆಯಿದೆ. ಇವೆರಡು ಅನುಕ್ರಮವಾಗಿ 83 (114 ಎನ್ ಎಂ ತಿರುಗುಬಲ) ಹಾಗೂ 69 ಅಶ್ವಶಕ್ತಿಗಳನ್ನು (140 ಎನ್ ಎಂ ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಅಂತೆಯೇ ಐದು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೊತೆಗೆ ಆಟೋಮ್ಯಾಟಡ್ ಮ್ಯಾನುವಲ್ ಗೇರ್ ಬಾಕ್ಸ್ ಲಗತ್ತಿಸುವ ಸಾಧ್ಯತೆಯಿದೆ.

ಅಂದ ಹಾಗೆ ನೂತನ ಟಾಟಾ ಕೈಟ್ ಕಾರು ಹಳೆಯ ಮತ್ತು ಕಳೆಗುಂದಿರುವ ಇಂಡಿಗೊ ಇಸಿಎಸ್ ಮಾದರಿಗೆ ಬದಲಿ ಆಯ್ಕೆಯಾಗಿರಲಿದೆ.


Click it and Unblock the Notifications