ಬಜೆಟ್ ಎಫೆಕ್ಟ್; ದುಬಾರಿಯಾಯ್ತು ಟಾಟಾ ಕಾರುಗಳು
ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್, ಹೊಸ ವರ್ಷ ಹಾಗೂ 2016 ಆಟೋ ಎಕ್ಸ್ ಪೋ ಬೆನ್ನಲ್ಲೇ ಬೆಲೆ ಏರಿಕೆ ನೀತಿ ಅನುಸರಿಸಿದೆ. ಟಾಟಾ ಪ್ರಯಾಣಿಕ ಕಾರುಗಳಿಗೆ 2,000 ರು.ಗಳಿಂದ ಆರಂಭವಾಗಿ ಗರಿಷ್ಠ 35,000 ರು.ಗಳ ವರೆಗೆ ಬೆಲೆ ಏರಿಕೆ ಕಂಡುಬಂದಿದ.
ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿರುವ 2016-17 ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾವಿತ ಮೂಲಸೌಕರ್ಯ ಮೇಲಿನ ತೆರಿಗೆ (ಸೆಸ್) ಪರಿಣಾಮವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಟಾಟಾದಿಂದ ಇಂತಹದೊಂದು ನೀತಿ ವ್ಯಕ್ತವಾಗಿದೆ.

ಟಾಟಾದ ನೂತನ ಬೆಲೆ ಏರಿಕೆ ನೀತಿಯು ಈ ಕೂಡಲೇ ಜಾರಿಗೆ ಬರಲಿದೆ. ಇದರೊಂದಿಗೆ ನ್ಯಾನೋದಿಂದ ಹಿಡಿದು ಎಲ್ಲ ಟಾಟಾ ಶ್ರೇಣಿಯ ಕಾರುಗಳಿಗೆ ಬೆಲೆ ಏರಿಕೆ ಅನ್ವಯವಾಗಲಿದೆ.

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಟಾಟಾ ವಕ್ತಾರ, "ಬಜೆಟ್ ನಲ್ಲಿ ಹೆಚ್ಚುವರಿ ತೆರಿಗೆ ವಿಧಿಸಿರುವ ಹಿನ್ನೆಲೆಯಲ್ಲಿ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆಯೇ ಬೆಲೆ ಏರಿಕೆ ಘೋಷಣೆ ಮಾಡಲಾಗಿದೆ" ಎಂದಿದ್ದಾರೆ.

ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಟಾಟಾದ ಅತಿ ಅಗ್ಗದ ನ್ಯಾನೋ 2.04 ಲಕ್ಷ ರು.ಗಳಿಂದ ಆರಂಭವಾಗಿ ಟಾಪ್ ಎಂಡ್ ಆರಿಯಾ 15.79 ಲಕ್ಷ ರು.ಗಳ ವರೆಗೆ ದುಬಾರಿಯೆನಿಸುತ್ತದೆ. ಈಗ ಮಾದರಿಗೆ ಅನ್ವಯವಾಗಿ ಬೆಲೆ ಏರಿಕೆ ನಿರ್ಧಾರವಾಗಲಿದೆ.

ಸರಕಾರದ ನೂತನ ನೀತಿಯ ಪ್ರಕಾರ ನಾಲ್ಕು ಮೀಟರ್ ಉದ್ದ ಪರಿಧಿಯೊಳಗಿನ 1500 ಸಿಸಿ ಡೀಸೆಲ್ ಕಾರುಗಳಿಗೆ ಶೇಕಡಾ 2.5 ಮತ್ತು ಇದಕ್ಕಿಂತಲೂ ಹೆಚ್ಚು ಸಾಮರ್ಥ್ಯದ ಎಸ್ ಯುವಿ ಹಾಗೂ ಸೆಡಾನ್ ಕಾರುಗಳಿಗೆ ಶೇಕಡಾ 4ರಷ್ಟು ಸೆಸ್ ವಿಧಿಸಲಾಗಿತ್ತು.

ಅಂತೆಯೇ ನಾಲ್ಕು ಮೀಟರ್ ಉದ್ದ ಪರಿಧಿಯೊಳಗಿನ 1,200 ಸಿಸಿ ಒಳಗಡೆಯ ಪೆಟ್ರೋಲ್/ಎಲ್‌ಪಿಜಿ/ಸಿಎನ್‌ಜಿ ಕಾರುಗಳಿಗೆ ಶೇಕಡಾ ಒಂದರಷ್ಟು ಸೆಸ್ ವಿಧಿಸಲಾಗಿದೆ.

ಅತ್ತ ದೇಶದ ಇತರೆ ಮುಂಚೂಣಿಯ ಸಂಸ್ಥೆಗಳು ಸಹ ಬೆಲೆ ಏರಿಕೆ ಪ್ರಕಟಿಸುವ ಇರಾದೆಯಲ್ಲಿದೆ. ಇವುಗಳಲ್ಲಿ ಹ್ಯುಂಡೈ, ಹೋಂಡಾ ಸಂಸ್ಥೆಗಳು ಕಾಣಿಸಿಕೊಂಡಿದೆ.


Click it and Unblock the Notifications








