ಹೋಂಡಾ ಹಿಂದಿಕ್ಕಿದ ಟಾಟಾ ಇದೀಗ ದೇಶದ 4ನೇ ಅತಿದೊಡ್ಡ ಪ್ರಯಾಣಿಕ ಕಾರು ಸಂಸ್ಥೆ
ಟಾಟಾ ಟಿಯಾಗೊ ಹ್ಯಾಚ್ ಬ್ಯಾಕ್ ಕಾರಿನ ನೆರವಿನೊಂದಿಗೆ ಹೆಚ್ಚಿನ ಬೇಡಿಕೆ ಗಿಟ್ಟಿಸಿಕೊಳ್ಳಲು ಟಾಟಾಗೆ ಸಾಧ್ಯವಾಗಿದೆ.
ಮಗದೊಂದು ಅಧ್ಯಾಯ ಆರಂಭವಾಗುತ್ತಿದ್ದು, ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯನ್ನು ಹಿಂದಿಕ್ಕಿರುವ ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್, ಇದೀಗ ಪ್ರಯಾಣಿಕ ಕಾರು ವಿಭಾಗದಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಅತಿ ನೂತನ ಟಿಯಾಗೊ ಹ್ಯಾಚ್ ಬ್ಯಾಕ್ ಕಾರಿನ ಬೆಂಬಲದೊಂದಿಗೆ ಮಾರಾಟದಲ್ಲಿ ಏರುಗತಿ ಸಾಧಿಸುವಲ್ಲಿ ಟಾಟಾಗೆ ಸಾಧ್ಯವಾಗಿದೆ.

ಕಳೆದ ಕೆಲವು ವರ್ಷಗಳಲ್ಲಿ ಟಾಟಾ ಕಾರುಗಳ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದವು. ಇದರಿಂದ ಫ್ಯಾಮಿಲಿ ಕಾರು ನಿರ್ಮಿಸಲು ಟಾಟಾದಿಂದ ಸಾಧ್ಯವೇ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.

ಇವೆಲ್ಲದಕ್ಕೂ ಉತ್ತರವಾಗಿ ಟಾಟಾ ಟಿಯಾಗೊ ಹ್ಯಾಚ್ ಬ್ಯಾಕ್ ಕಾರು ಮಾರುಕಟ್ಟೆಯನ್ನು ಪ್ರವೇಶಿಸಿತ್ತಲ್ಲದೆ ಗರಿಷ್ಠ ಬೇಡಿಕೆಯನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

2016 ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಹೋಂಡಾ ಸಂಸ್ಥೆಯನ್ನು ಹಿಂದಕ್ಕೆ ತಳ್ಳಿರುವ ಟಾಟಾ ಮೋಟಾರ್ಸ್ ದೇಶದ ಪ್ರಯಾಣಿಕ ಕಾರು ವಿಭಾಗದಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

2016 ಅಕ್ಟೋಬರ್ ತಿಂಗಳ ಅವಧಿಯಲ್ಲಿ 16,311 ಯುನಿಟ್ ಗಳ ಮಾರಾಟ ದಾಖಲಿಸಿರುವ ಟಾಟಾ ಮೋಟಾರ್ಸ್ ಶೇಕಡಾ 28ರಷ್ಟು ಮಾರಾಟ ಏರುಗತಿ ಸಾಧಿಸಿದೆ.

ಇದೇ ಅವಧಿಯಲ್ಲಿ ಶೇಕಡಾ 23ರಷ್ಟು ಮಾರಾಟ ಕುಸಿತ ಅನುಭವಿಸಿರುವ ಹೋಂಡಾ ಸಂಸ್ಥೆಗೆ 15,567 ಯುನಿಟ್ ಗಳಷ್ಟು ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ಸಾಧ್ಯವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಹೋಂಡಾ ಸಂಸ್ಥೆಯು 20166 ಯುನಿಟ್ ಗಳ ಮಾರಾಟವನ್ನು ದಾಖಲಿಸಿತ್ತು.

ವಾಣಿಜ್ಯ ವಿಭಾಗದಲ್ಲಿ ಶೇಕಡಾ 17ರಷ್ಟು ಮಾರಾಟ ಏರುಗತಿ ಸಾಧಿಸಿರುವ ಟಾಟಾ, ಅಕ್ಟೋಬರ್ ತಿಂಗಳಲ್ಲಿ 88,976 ಯುನಿಟ್ ಗಳ ಮಾರಾಟವನ್ನು ದಾಖಲಿಸಿದೆ.

ರಫ್ತು ವಿಭಾಗದಲ್ಲೂ ಶೇಕಡಾ 39ರಷ್ಟು ಏರಿಕೆ ದಾಖಲಿಸಿರುವ ಟಾಟಾ ಮೋಟಾರ್ಸ್ 6333 ಯುನಿಟ್ ಗಳನ್ನು ವಿದೇಶಕ್ಕೆ ರವಾನಿಸಿದೆ.

ಅಂದ ಹಾಗೆ ಟಾಟಾ ಟಿಯಾಗೊ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಿರುತ್ತದೆ. ಇದರ ರವೊಟ್ರಾನ್ 1.2 ಲೀಟರ್ ತ್ರಿ ಸಿಲಿಂಡರ್ ಎಂಪಿಎಫ್ ಐ ಪೆಟ್ರೋಲ್ ಎಂಜಿನ್ 114 ಎನ್ ಎಂ ತಿರುಗುಬಲದಲ್ಲಿ 84 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಇನ್ನೊಂದೆಡೆ ರೆವೊಟಾರ್ಕ್ ತ್ರಿ ಸಿಲಿಂಡರ್ 1050 ಸಿಸಿ ಡೀಸೆಲ್ ಎಂಜಿನ್ 140 ಎನ್ ಎಂ ತಿರುಗುಬಲದಲ್ಲಿ 69 ಅಶ್ವಶಕ್ತಿಯನ್ನು ನೀಡಲಿದೆ.

ಟಾಟಾ ಟಿಯಾಗೊ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳ ಬೆಲೆಯು ದೆಹಲಿ ಎಕ್ಸ್ ಶೋ ರೂಂ ಪ್ರಕಾರ ಅನುಕ್ರಮವಾಗಿ 3.21 ಲಕ್ಷ ರು. ಮತ್ತು 3.95 ಲಕ್ಷ ರು.ಗಳಿಂದ ಆರಂಭವಾಗುತ್ತದೆ.


Click it and Unblock the Notifications








