ಹಬ್ಬದ ಆವೃತ್ತಿಯಲ್ಲಿ ಟಿಯಾಗೊ ಎಎಂಟಿ, ಸೆಡಾನ್ ಕಾರು ಬಿಡುಗಡೆ?
ಸಮಕಾಲೀನ ಮಾರುಕಟ್ಟೆಗೆ 'ಟಿಯಾಗೊ' ಎಂಬ ಅತ್ಯುತ್ತಮ ಹ್ಯಾಚ್ ಬ್ಯಾಕ್ ಕಾರನ್ನು ಕೊಡುಗೆಯಾಗಿ ನೀಡಿರುವ ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್, ಮುಂದಿನ ಹಂತದ ಯೋಜನೆಯ ಭಾಗವಾಗಿ ಪ್ರಸಕ್ತ ಸಾಲಿನ ಹಬ್ಬದ ಆವೃತ್ತಿಯಲ್ಲಿ ಟಿಯಾಗೊ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಮತ್ತು ಸೆಡಾನ್ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.
ಬಲ್ಲ ಮೂಲಗಳ ಪ್ರಕಾರ 2016 ಎಪ್ರಿಲ್ ತಿಂಗಳಲ್ಲಿ ಮಾರುಕಟ್ಟೆಗೆ ಪ್ರವೇಶಿಸಿರುವ ಟಿಯಾಗೊ ಹ್ಯಾಚ್ ಬ್ಯಾಕ್ ಕಾರಿಗೆ ಅತಿ ಹೆಚ್ಚಿನ ಬೇಡಿಕೆ ದಾಖಲಾಗಿದ್ದು, ಮುಂಗಡ ಬುಕ್ಕಿಂಗ್ ಮಾಡಿದ ಗ್ರಾಹಕರು ತಮ್ಮ ಕನಸಿನ ಕಾರಿನ ಆಗಮನಕ್ಕಾಗಿ ಮೂರು ತಿಂಗಳ ವರೆಗೆ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

ಡೀಸೆಲ್ ಕಾರನ್ನು ಹೋಲಿಸಿದಾಗ ಟಿಯಾಗೊ ಪೆಟ್ರೋಲ್ ಕಾರಿಗೆ ಹೆಚ್ಚಿನ ಬೇಡಿಕೆ ದಾಖಲಾಗುತ್ತಿದೆ. ಟಿಯಾಗೊ ಬೇಸ್ ಹಾಗೂ ಟಾಪ್ ಎಂಡ್ ವೆರಿಯಂಟ್ ಗಳು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಅನುಕ್ರಮವಾಗಿ 3.20 ಹಾಗೂ 5.54 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

ಮಾರುತಿ ಟಿಯಾಗೊ ಎಎಂಟಿ ಕಾರು ದೇಶದ ಅಗ್ರ ಕಾರು ಸಂಸ್ಥೆಗಳಾದ ಮಾರುತಿ ಸುಜುಕಿಯ ಜನಪ್ರಿಯ ಸೆಲೆರಿಯೊ ಎಎಂಟಿ ಮತ್ತು ಹ್ಯುಂಡೈ ಗ್ರಾಂಡ್ ಐ10 ಎಎಂಟಿ ಮಾದರಿಗಳಿಗೆ ನೇರ ಪ್ರತಿಸ್ಪರ್ಧಿಯಾಗಲಿದೆ.

ಸದ್ಯಕ್ಕೆ ಟಿಯಾಗೊ ಎಎಂಟಿ ಕಾರು ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರ ಲಭ್ಯವಾಗಲಿದೆ. ತದಾ ಬಳಿಕವಷ್ಟೇ ಡೀಸೆಲ್ ಎಎಂಟಿ ಬಗ್ಗೆ ಸಂಸ್ಥೆಯು ನಿರ್ಧಾರ ಕೈಗೊಳ್ಳಲಿದೆ.

ಇದರೊಂದಿಗೆ ಟಾಟಾ ನ್ಯಾನೋ ಹಾಗೂ ಟಾಟಾ ಜೆಸ್ಟ್ ಬಳಿಕ ಎಎಂಟಿ ಗೇರ್ ಬಾಕ್ಸ್ ತಂತ್ರಗಾರಿಕೆಯನ್ನು ಪೆಡಯುತ್ತಿರುವ ಮೂರನೇ ಕಾರೆಂಬ ಹೆಗ್ಗಳಿಕೆಗೆ ಟಾಟಾ ಟಿಯಾಗೊ ಪಾತ್ರವಾಗಲಿದೆ.

ಸದ್ಯ ಮಾರಾಟದಲ್ಲಿರುವ ಟಿಯಾಗೊ 1.2 ಲೀಟರ್ 3 ಸಿಲಿಂಡರ್ ರೆವೊಟ್ರಾನ್ ಪೆಟ್ರೋಲ್ ಮತ್ತು 1.5 ಲೀಟರ್ 3 ಸಿಲಿಂಡರ್ ರೆವೊಟಾರ್ಕ್ ಡೀಸೆಲ್ ಎಂಜಿನ್ ಗಳನ್ನು ಪೆಡದಿದೆ. ಇವೆರಡು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದಿದೆ.

ಅದೇ ಹೊತ್ತಿಗೆ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ದೀಪಾವಳಿ ಹಬ್ಬದ ಆವೃತ್ತಿಯಲ್ಲಿ ಟಾಟಾ ಕೈಟ್ 5 ಸೆಡಾನ್ ಕಾರನ್ನು ಬಿಡುಗಡೆ ಮಾಡುವ ಯೋಜನೆಯನ್ನು ಟಾಟಾ ಸಂಸ್ಥೆಯುು ಹೊಂದಿದೆ.

ಟಾಟಾ ಟಿಯಾಗೊ ಸೆಡಾನ್ ಕಾರು ಸಹ ಎಎಂಟಿ ಆಯ್ಕೆಯನ್ನು ಪಡೆಯಲಿದೆ. ಈ ಎಲ್ಲ ಯೋಜನೆಗಳನ್ನು ಟಾಟಾ ಅತಿ ಬೇಗನೇ ಪ್ರಕಟಿಸುವ ಸಾಧ್ಯತೆಯಿದೆ.

ನಿಮ್ಮ ಮಾಹಿತಿಗಾಗಿ, ಟಾಟಾ ಕೈಟ್ 5 ಎಂಬುದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಟಿಯಾಗೊ ಹ್ಯಾಚ್ ಬ್ಯಾಕ್ ಕಾರಿನ ಕಾಂಪಾಕ್ಟ್ ಸೆಡಾನ್ ಆವೃತ್ತಿಯಾಗಿದ್ದು, ಸಂಸ್ಥೆಯ ಸನಂದ್ ಘಟಕದಲ್ಲಿ ನಿರ್ಮಾಣವಾಗಲಿದೆ. ಅಲ್ಲದೆ ಟಿಯಾಗೊದಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಬಳಕೆಯಾಗಲಿದೆ.

2016 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿರುವ ಟಾಟಾ ಕೈಟ್ 5, ನಾಲ್ಕು ಮೀಟರ್ ಉದ್ದ ಪರಿಧಿಯೊಳಗೆ ನಿರ್ಮಾಣವಾಗುತ್ತಿದ್ದು, ತೆರಿಗೆ ವಿನಾಯಿತಿ ಗಿಟ್ಟಿಸಿಕೊಳ್ಳಲು ನೆರವಾಗಲಿದೆ.


Click it and Unblock the Notifications