ಅವಿಶ್ವಸನೀಯ ಸಾಧನೆ; ಟಾಟಾ ಜೆಸ್ಟ್ ಅತ್ಯಂತ ಸೇಫ್ ಕಾರು!
ಗ್ಲೋಬಲ್ ಎನ್ ಸಿಎಪಿ ಕ್ರಾಶ್ ಟೆಸ್ಟ್ ನಲ್ಲಿ ನಾಲ್ಕು ಸ್ಟಾರ್ ಗೆದ್ದಿರುವ ಟಾಟಾ ಜೆಸ್ಟ್ ದೇಶದ ಅತ್ಯಂತ ಸುರಕ್ಷಿತ ಕಾರು ಎಂದೆನಿಸಿಕೊಂಡಿದೆ.
ಭಾರತದ ಅತ್ಯಂತ ಸುರಕ್ಷಿತ ಕಾರು ಯಾವುದು ? ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಅಪಘಾತ ಪರೀಕ್ಷೆಯಲ್ಲಿ ದೇಶದಲ್ಲಿ ನಿರ್ಮಿತ ಕಾರುಗಳು ಮಕಾಡೆ ಮಲಗಿರುವ ಘಟನೆಯನ್ನು ನೀವು ಪದೇ ಪದೇ ಕೇಳುತ್ತಲೇ ಬಂದಿರುವಿರಿ. ಹಾಗಿರುವಾಗ ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ನಿರ್ಮಿಸಿರುವ ಜೆಸ್ಟ್ ಕಾರು ಗ್ಲೋಬಲ್ ಎನ್ ಸಿಎಪಿ ಕ್ರಾಶ್ ಟೆಸ್ಟ್ ನಲ್ಲಿ ನಾಲ್ಕು ಸ್ಟಾರ್ ಗಳನ್ನು ಗೆಲ್ಲುವ ಮೂಲಕ ಅವಿಶ್ವಸನೀಯ ಸಾಧನೆ ಮಾಡಿದೆ.

ಹೌದು, ಗ್ಲೋಬಲ್ ನ್ಯೂ ಕಾರ್ ಅಸ್ಸೆಸ್ಮೆಂಟ್ ಪ್ರೋಗ್ರಾಂ ನಡೆಸಿರುವ ಅಪಘಾತ ಪರೀಕ್ಷೆಯಲ್ಲಿ ಟಾಟಾ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಗರಿಷ್ಠ ಐದರಲ್ಲಿ ಕಾರು ನಾಲ್ಕು ತಾರೆಗಳನ್ನು ಗೆಲ್ಲುವ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದು, ದೇಶದ ಅತ್ಯಂತ ಸುರಕ್ಷಿತ ಕಾರೆನಿಸಿಕೊಂಡಿದೆ.

ಗ್ಲೋಬಲ್ ಎನ್ ಸಿಎಪಿ ಟಾಟಾ ಜೆಸ್ಟ್ ನ ಎರಡು ಮಾದರಿಗಳನ್ನು ಢಿಕ್ಕಿ ಪರೀಕ್ಷೆಗೊಳಪಡಿಸಿತ್ತು. ಇದರಲ್ಲಿ ಐಚ್ಛಿಕ ಏರ್ ಬ್ಯಾಗ್ ಮತ್ತು ಏರ್ ಬ್ಯಾಗ್ ರಹಿತ ಮಾದರಿಗಳು ಒಳಗೊಂಡಿದ್ದವು.

ಸ್ಟ್ಯಾಂಡರ್ಡ್ ಏರ್ ಬ್ಯಾಗ್ ರಹಿತ ಜೆಸ್ಟ್ ಆವೃತ್ತಿಯು ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ ರೇಟಿಂಗ್ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿದೆ. ಹಾಗೆಯೇ ಚೈಲ್ಡ್ ಪ್ರಯಾಣಿಕರ ರಕ್ಷಣೆಯಲ್ಲಿ ಒಂದು ಸ್ಟಾರ್ ಮಾತ್ರ ಗೆದ್ದುಕೊಂಡಿತ್ತು.

ಇದೇ ಸಂದರ್ಭದಲ್ಲಿ ಗ್ಲೋಬಲ್ ಎನ್ ಸಿಎಪಿ ಹೆಚ್ಚು ಸುರಕ್ಷಿತ ಟಾಟಾ ಜೆಸ್ಟ್ ಕಾರನ್ನು ಪರೀಕ್ಷೆಗೊಳಿಸಿತ್ತು. ರಚನಾತ್ಮಕ ಬದಲಾವಣೆಗಳನ್ನು ಒಳಗೊಂಡಿರುವ ಐಚ್ಛಿಕ ಏರ್ ಬ್ಯಾಗ್ ಗಳ ಜೆಸ್ಟ್ ಕಾರಿನ ಟೆಸ್ಟಿಂಗ್ ಹಮ್ಮಿಕೊಳ್ಳಲಾಗಿತ್ತು.

ಟಾಟಾ ಜೆಸ್ಟ್ ನಲ್ಲಿ ಆಳವಡಿಸಲಾಗಿದ್ದ ಎರಡು ಏರ್ ಬ್ಯಾಗ್ ಮತ್ತು ಎರಡು ಪ್ರಿಟೆನ್ಷನರ್ ಗಳು ಕಾರಿನ ಒಟ್ಟಾರೆ ಸುರಕ್ಷತೆಯಲ್ಲಿ ಗಮನಾರ್ಹ ಸುಧಾರಣೆ ತರುವಲ್ಲಿ ನೆರವಾಗಿದೆ.

ಚಾಲಕ ಸೀಟಿನಲ್ಲಿ ಸೀಟು ಬೆಲ್ಟ್ ರಿಮೈಂಡರ್ ಸೇರಿದಂತೆ ಗರಿಷ್ಠ ಸುರಕ್ಷಾ ವೈಶಿಷ್ಟ್ಯಗಳನ್ನು ಹೊಂದಿರುವ ಜೆಸ್ಟ್ ಚೈಲ್ಡ್ ಪ್ರಯಾಣಿಕ ರಕ್ಷಣೆಯಲ್ಲಿ ನಾಲ್ಕು ತಾರೆಗಳನ್ನು ಗೆದ್ದುಕೊಂಡಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಟಾಟಾ, ಏರ್ ಬ್ಯಾಗ್ ಮತ್ತು ಏರ್ ಬ್ಯಾಗ್ ರಹಿತ ಮಾದರಿಗಳಲ್ಲೂ ರಚನಾತ್ಮಕ ಬದಲಾವಣೆಯೊಂದಿಗೆ ಗಮನಾರ್ಹ ಸುಧಾರಣೆ ತರಲಾಗಿದೆ ಎಂದಿದೆ.

ಗ್ಲೋಬಲ್ ಎನ್ ಸಿಎಪಿ ಪ್ರಧಾನ ಕಾರ್ಯದರ್ಶಿ ಡೇವಿಡ್ ವಾರ್ಡ್ ಸಹ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, "ಕಾರಿನ ಸುರಕ್ಷತೆಯಲ್ಲಿ ಹೇಗೆ ಗಮನಾರ್ಹ ಸುಧಾರಣೆ ತರಬಹುದು ಎಂಬುದಕ್ಕೆ ಟಾಟಾ ಜೆಸ್ಟ್ ಉದಾಹರಣೆಯಾಗಿದೆ" ಎಂದಿದ್ದಾರೆ.

ಭಾರತೀಯ ಗ್ರಾಹಕರಲ್ಲಿ ಟಾಟಾ ಜೆಸ್ಟ್ ನಂತಹ ಹೆಚ್ಚು ಸುರಕ್ಷಿತ ಕಾರುಗಳನ್ನು ಖರೀದಿ ಮಾಡುವಂತೆ ಸಲಹೆ ಮಾಡಿರುವ ಅವರು, ಟಾಟಾ ಸಂಸ್ಥೆಯು ಜೆಸ್ಟ್ ಬೇಸಿಕ್ ಮಾಡೆಲ್ ನಲ್ಲೂ ಎರಡು ಏರ್ ಬ್ಯಾಗ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡುವಂತೆ ಕೋರಿದ್ದಾರೆ.

ಒಟ್ಟಿನಲ್ಲಿ ಶೂನ್ಯಂಕದಿಂದ ನಾಲ್ಕು ರೇಟಿಂಗ್ ಸ್ಟಾರ್ ಗಳತ್ತ ಟಾಟಾ ಜಿಗಿತ ಕಂಡಿರುವುದು ದೇಶದ ವಾಹನ ವಲಯದಲ್ಲಿ ಹೆಚ್ಚಿನ ಆಸಕ್ತಿಯನ್ನು ಕೆರಳಿಸಿದೆ. ಇದು ಇತರೆ ವಾಹನ ಸಂಸ್ಥೆಗಳಿಗೂ ಹೆಚ್ಚು ಸುರಕ್ಷಿತ ಕಾರುಗಳನ್ನು ನಿರ್ಮಿಸಲು ಪ್ರೇರಣೆಯಾಗಲಿದೆ.

ಇದಕ್ಕೂ ಮೊದಲು ಗ್ಲೋಬಲ್ ಎನ್ ಸಿಪಿ ನಡೆಸಿದ ಕ್ರಾಶ್ ಟೆಸ್ಟ್ ನಲ್ಲಿ ದೇಶದ ಜನಪ್ರಿಯ ಮಾದರಿಗಳಾದ ರೆನೊ ಕ್ವಿಡ್, ಮಹೀಂದ್ರ ಸ್ಕಾರ್ಪಿಯೊ, ಮಾರುತಿ ಸುಜುಕಿ ಸೆಲೆರಿಯೊ, ಹ್ಯುಂಡೈ ಇಯಾನ್, ಮಾರುತಿ ಸುಜುಕಿ ಇಕೊ, ಮಾರುತಿ ಸುಜುಕಿ ಆಲ್ಟೊ 800, ಮಾರುತಿ ಸುಜುಕಿ ಸ್ವಿಫ್ಟ್, ಟಾಟಾ ನ್ಯಾನೋ, ಹ್ಯುಂಡೈ ಐ10 ಮತ್ತು ಹ್ಯುಂಡೈ ಗ್ರಾಂಡ್ ಐ10 ಭಾರಿ ವೈಫಲ್ಯವನ್ನು ಅನುಭವಿಸಿತ್ತು.


Click it and Unblock the Notifications








