ಹೇಗಿರಲಿದೆ ಆಸ್ಟನ್ ಮಾರ್ಟಿನ್ ನಿರ್ಮಾಣದ ಮೊದಲ ಐಷಾರಾಮಿ ಎಸ್‌ಯುವಿ..!?
ವಿಶ್ವಾದ್ಯಂತ ಐಷಾರಾಮಿ ಎಸ್‌ಯುವಿ ಕಾರುಗಳ ನಿರ್ಮಾಣ ಪ್ರಕ್ರಿಯೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಆಸ್ಟನ್ ಮಾರ್ಟಿನ್ ಕೂಡಾ ವಿನೂತನ ಎಸ್‌ಯುವಿ ಪರಿಚಯಿಸುವ ಇರಾದೆಯಲ್ಲಿದೆ.
ವಿಶ್ವಾದ್ಯಂತ ಐಷಾರಾಮಿ ಎಸ್‌ಯುವಿ ಕಾರುಗಳ ನಿರ್ಮಾಣ ಪ್ರಕ್ರಿಯೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ರೋಲ್ಸ್ ರಾಯ್ಸ್ ಸಂಸ್ಥೆಯ ನಂತರ ಇದೀಗ ಮತ್ತೊಂದು ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಆಸ್ಟನ್ ಮಾರ್ಟಿನ್ ಕೂಡಾ ವಿನೂತನ ಎಸ್‌ಯುವಿ ಮಾದರಿಯೊಂದನ್ನ ಪರಿಚಯಿಸುವ ಸುಳಿವು ನೀಡಿದೆ.

ರೋಲ್ಸ್ ರಾಯ್ಸ್ ಸಂಸ್ಥೆಯು ಮೊನ್ನೆಯಷ್ಟೇ ತನ್ನ ಮೊದಲ ಎಸ್‌ಯುವಿ ಮಾದರಿಯಾದ ಕಲಿನಿಯನ್ ಪ್ರದರ್ಶನಗೊಳಿಸುವ ಮೂಲಕ ಹಲವು ಅಂತಾರಾಷ್ಟ್ರೀಯ ಆಟೋ ಉದ್ಯಮದಲ್ಲಿ ಭಾರೀ ಕುತೂಹಲ ಹುಟ್ಟುಹಾಕಿದ್ದು, ಇದರ ಬೆನ್ನಲ್ಲೇ ಆಸ್ಟನ್ ಮಾರ್ಟಿನ್ ಸಂಸ್ಥೆಯು ವಿನೂತನ ವಿನ್ಯಾಸದ ಎಸ್‌ಯುವಿವೊಂದನ್ನ ಸಿದ್ದಗೊಳಿಸಿರುವುದಾಗಿ ಹೇಳಿಕೊಂಡಿದೆ.

ಆಸ್ಟನ್ ಮಾರ್ಟಿನ್ ಸಂಸ್ಥೆಯು ಈಗಾಗಲೇ ಸೆಡಾನ್ ಮತ್ತು ಸೂಪರ್ ಕಾರುಗಳ ಉತ್ಪಾದನೆಯಲ್ಲಿ ಜನಪ್ರಿಯತೆ ಸಾಧಿಸಿರುವುದಲ್ಲದೇ ವಿಂಟೇಜ್ ಕಾರು ಮಾದರಿಯಲ್ಲೂ ತನ್ನ ಛಾಫು ಮೂಡಿಸಿದ್ದು, ಇದೀಗ ಗ್ರಾಹಕರ ಬೇಡಿಕೆಗೆ ತಕ್ಕಂತೆ ಸಿದ್ದಪಡಿಸಿಲಾಗಿರುವ ಎಸ್‌ಯುವಿ ಆವೃತ್ತಿಯು ಕೂಡಾ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.

ಅಮೆರಿಕದ ಸೌಥ್ ವೆಲ್ಸ್‌ನಲ್ಲಿರುವ ಆಸ್ಟನ್ ಮಾರ್ಟಿನ್ ಕೇಂದ್ರ ಕಾರು ಉತ್ಪಾದನಾ ಘಟಕದಲ್ಲೇ ಹೊಸ ಎಸ್‌ಯುವಿ ಉತ್ಪಾದನಾ ಮಾದರಿಯನ್ನ ಈಗಾಗಲೇ ಸಿದ್ದಗೊಳಿಸಿ ಎಂಜಿನ್ ಕಾರ್ಯಕ್ಷಮತೆಗಳ ಬಗೆಗೆ ವಿವಿಧ ಹಂತದ ಪರೀಕ್ಷಾರ್ಥ ಪ್ರಕ್ರಿಯೆ ನಡೆಸಲಾಗುತ್ತಿದ್ದು, 2019ರ ಮಧ್ಯಂತರದಲ್ಲಿ ಹೊಸ ಎಸ್‌ಯುವಿಯು ಮಾರುಕಟ್ಟೆ ಪ್ರವೇಶ ಪಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದಕ್ಕಾಗಿಯೇ ಉತ್ಪಾದನಾ ಘಟಕದಲ್ಲಿ ಒಂದೂವರೆ ಸಾವಿರ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಿರುವ ಆಸ್ಟನ್ ಮಾರ್ಟಿನ್ ಸಂಸ್ಥೆಯು, ಹೊಸ ಕಾರಿನ ವಿನ್ಯಾಸ ಮತ್ತು ಎಂಜಿನ್ ಮಾದರಿಗ ಅಭಿವೃದ್ಧಿಗಾಗಿ ತಹರೇವಾರಿ ಅಧ್ಯಯನಗಳನ್ನು ಕೈಕೊಂಡಿರುವುದು ಹೊಸ ಎಸ್‌ಯುವಿಯು ಜಗತ್ತಿನ ಶ್ರೇಷ್ಠ ಎಸ್‌ಯುವಿ ಕಾರು ಆವೃತ್ತಿಯಾಗುವ ತವಕದಲ್ಲಿದೆ.

ಆಸ್ಟನ್ ಮಾರ್ಟಿನ್ ಸಿದ್ದಪಡಿಸಿರುವ ಹೊಸ ಎಸ್‌ಯುವಿ ಕಾರಿಗೆ 'ವರೆಕೈ' ಎಂದು ನಾಮಕರಣ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಹೊಸ ಎಸ್‌ಯುವಿ ಕಾರಿನ ಉತ್ಪಾದನೆ ಮಾಡುತ್ತಿರುವ ಹೊರತಾಗಿ ಯಾವುದೇ ರೀತಿಯ ತಾಂತ್ರಿಕ ಅಂಶಗಳ ಬಗ್ಗೆ ಆಸ್ಟನ್ ಮಾರ್ಟಿನ್ ಸಂಸ್ಥೆಯು ಇದುವರೆಗೂ ಒಂದೇ ಒಂದು ಹೇಳಿಕೆಯನ್ನ ಸಹ ನೀಡಿಲ್ಲ.

ಹೀಗಾಗಿ ಆಸ್ಟನ್ ಮಾರ್ಟಿನ್ ಹೊಸ ಎಸ್‌ಯುವಿ ಬಗೆಗೆ ಐಷಾರಾಮಿ ಕಾರು ಪ್ರಿಯರಲ್ಲಿ ಭಾರೀ ಕುತೂಹಲ ಹುಟ್ಟುಹಾಕಿದ್ದು, ಉತ್ಪಾದನಾ ಕಾರಿನ ವಿನ್ಯಾಸಗಳನ್ನು ಗಮನಿಸಿದಾದ ಹೊಸ ಕಾರು ತ್ರಿ ಡೋರ್ ವಿನ್ಯಾಸ ಪಡೆದಿರುವುದು ಸ್ಪಷ್ಟವಾಗುತ್ತೆ.

ಇನ್ನು ಹೊಸ ಕಾರಿನ ಎಂಜಿನ್ ಕುರಿತಾಗಿ ಕೆಲವು ಗೊಂದಲಗಳಿದ್ದರೂ ಮಾಹಿತಿಗಳ ಪ್ರಕಾರ ಹೊಸ ಕಾರಿನಲ್ಲಿ ಮರ್ಸಿಡಿಸ್-ಎಎಂಜಿ ವಿ8ಎಸ್ ಮತ್ತು ವಿ12ಎಸ್ ಎಂಜಿನ್ ಬಳಕೆ ಮಾಡಬಹುದಾಗಿದ್ದು, ಇದರ ಜೊತೆಗೆ ಹೈಬ್ರಿಡ್ ಎಂಜಿನ್ ಸಹ ಇದರ ಬಳಕೆ ಮಾಡಲಾಗುತಂತೆ.

ಈ ಮೂಲಕ ಪರ್ಫಾಮೆನ್ಸ್ ಜೊತೆ ಆಫ್ ರೋಡ್ ಕೌಶಲ್ಯ ಪ್ರದರ್ಶನದಕ್ಕ ಆಸ್ಟನ್ ಮಾರ್ಟಿನ್ ಹೊಸ ಕಾರುಗಳಲ್ಲಿ ಹೆಚ್ಚಿನ ಗಮನಹರಿಸಲಾಗಿದ್ದು, ಲಂಬೋರ್ಗಿನಿ ಸಂಸ್ಥೆಯು ಪರಿಚಯಿಸಿರುವ ಉರುಸ್ ಎಸ್‌ಯುವಿಗಳಂತೆಯೇ ಇದು ಹಲವು ಹೊಸ ಸೌಲಭ್ಯಗಳನ್ನು ಪಡೆದುಕೊಂಡಿರಲಿದೆ.

ಒಟ್ಟಿನಲ್ಲಿ ಐಷಾರಾಮಿ ಎಸ್‌ಯುವಿಗಳ ಪರ್ವ ಆರಂಭವಾಗಿದ್ದು, ಆಸ್ಟನ್ ಮಾರ್ಟಿನ್ ಸಿದ್ದಪಡಿಸಿರುವ ಕಾರು ಸಹ ಹಲವು ಹೊಸತನಗಳೊಂದಿಗೆ ಮಾರಕಟ್ಟೆ ಪ್ರವೇಶಿಸಲಿದೆ. ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಈ ಹೊಸ ಕಾರಿನ ಬೆಲೆಯು 2 ಕೋಟಿಯಿಂದ 2.50 ಕೋಟಿ ಇರಬಹುದೆಂದು ಅಂದಾಜಿಸಲಾಗಿದೆ.


Click it and Unblock the Notifications








