ಮುಂಬೈನಲ್ಲಿ ಇನ್ಮುಂದೆ ಸೆಲ್ಪ್ ಡ್ರೈವ್ ಎಲೆಕ್ಟ್ರಿಕ್ ಕಾರುಗಳ ಸದ್ದು...
ದೇಶದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಮಹೀಂದ್ರಾ ಮತ್ತು ಜೂಮ್ ಕಾರ್ ಸಂಸ್ಥೆಯ ಸಹಯೋಗದಲ್ಲಿ ಪರಿಸರಿ ಮಾಲಿನ್ಯ ತಡೆಯುವ ಉದ್ದೇಶದೊಂದಿಗೆ ಹೊಸ ಯೋಜನೆಯೊಂದು ಜಾರಿಗೆ ತರಲಾಗಿದೆ.
ದೇಶದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಮಹೀಂದ್ರಾ ಮತ್ತು ಜೂಮ್ ಕಾರ್ ಸಂಸ್ಥೆಯ ಸಹಯೋಗದಲ್ಲಿ ಪರಿಸರಿ ಮಾಲಿನ್ಯ ತಡೆಯುವ ಉದ್ದೇಶದೊಂದಿಗೆ ಹೊಸ ಯೋಜನೆಯೊಂದು ಜಾರಿಗೆ ತರಲಾಗಿದ್ದು, ಇನ್ಮುಂದೆ ದೇಶದ ಪ್ರಮುಖ ನಗರಗಳಲ್ಲಿ ಸೆಲ್ಪ್ ಡ್ರೈವ್ ಎಲೆಕ್ಟ್ರಿಕ್ ಕಾರುಗಳ ಸದ್ದು ಜೋರಾಗಲಿದೆ.

ದೇಶದಲ್ಲೇ ಮೊದಲ ಬಾರಿಗೆ ಮುಹೀಂದ್ರಾ ಮತ್ತು ಜೂಮ್ ಕಾರ್ ಸಂಸ್ಥೆಯು ಮುಂಬೈ ಮಹಾನಗರದಲ್ಲಿ ಸೆಲ್ಪ್ ಡ್ರೈವ್ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಿದ್ದು, ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಇನ್ಮುಂದೆ ಸೆಲ್ಪ್ ಡ್ರೈವ್ ಮಾಡಲು ಎಲೆಕ್ಟ್ರಿಕ್ ಕಾರುಗಳನ್ನು ಸಹ ಆಯ್ಕೆ ಮಾಡಬಹುದಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಜೂಮ್ ಕಾರು ಸಂಸ್ಥೆಯು ಈಗಾಗಲೇ ಸೆಲ್ಪ್ ಡ್ರೈವ್ ಕಾರುಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದ್ದು, ಈ ಮೂಲಕ ಕಾರು ಪ್ರಿಯರನ್ನು ಎಲೆಕ್ಟ್ರಿಕ್ ಕಾರುಗಳತ್ತ ಆಕರ್ಷಿಸಲು ಮಹೀಂದ್ರಾ ಸಂಸ್ಥೆಯು ಜೂಮ್ ಕಾರು ಸಂಸ್ಥೆಯ ಜೊತೆ ಕೈಜೋಡಿಸಿದೆ.

ಸದ್ಯ ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದಲ್ಲಿ ಮುಂಚೂಣಿ ಸಾಧಿಸಿರುವ ಮಹೀಂದ್ರಾ ಸಂಸ್ಥೆಯು ಎಲೆಕ್ಟ್ರಿಕ್ ಕಾರುಗಳತ್ತ ಗ್ರಾಹಕನ್ನು ಸೆಳೆಯುವ ಪ್ರಯತ್ನದಲ್ಲಿದ್ದು, ಇದಕ್ಕಾಗಿಯೇ ಜೂಮ್ ಕಾರ್ ಸಂಸ್ಥೆಗೆ ತನ್ನ ಜನಪ್ರಿಯ ಇ2ಒ ಮತ್ತು ಇ2ಒ ಪ್ಲಸ್ ಎಲೆಕ್ಟ್ರಿಕ್ ಕಾರುಗಳನ್ನು ಒದಗಿಸುವ ಒಪ್ಪಂದಕ್ಕೆ ಸಹಿ ಹಾಕಿವೆ.

ಹೆಚ್ಚುತ್ತಿರುವ ಮಾಲಿನ್ಯ ತಡೆ ಉದ್ದೇಶದಿಂದ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳನ್ನು ತಗ್ಗಿಸುವುದು ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದ್ದು, ಇದೇ ಕಾರಣಕ್ಕೆ ಮಹಾರಾಷ್ಟ್ರ ಸರ್ಕಾರ ಸಹ ಮಹತ್ವದ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೊಸ ಯೋಜನೆಗೆ ಹಸಿರು ನಿಶಾನೆ ತೋರಿದ ಸಿಎಂ ದೇವೇಂದ್ರ ಫಡ್ನವಿಸ್ ಅವರು ಮಹೀಂದ್ರಾ ಮತ್ತು ಜೂಮ್ ಕಾರ್ ಸಂಸ್ಥೆಯ ನಡೆಗೆ ಅಭಿನಂದನೆ ಸಲ್ಲಿಸಿದ್ದಲ್ಲದೇ ಎಲೆಕ್ಟ್ರಿಕ್ ಕಾರು ಸವಾರರಿಗೆ ಬೇಕಿರುವ ಅಗತ್ಯ ಚಾರ್ಜಿಂಗ್ ಸ್ಟೇಷನ್‌ಗಳನ್ನು ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮಹೀಂದ್ರಾ ಸಿಇಒ ಮಹೇಶ್ ಬಾಬು, "ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದಲ್ಲಿ ಮಹೀಂದ್ರಾ ಸಂಸ್ಥೆಯು ಈಗಾಗಲೇ ಮುಂಚೂಣಿಯಲ್ಲಿದ್ದು, ಈ ಸಂದರ್ಭದಲ್ಲಿ ಇವಿ ಕಾರುಗಳತ್ತ ಗ್ರಾಹಕರನ್ನು ಸೆಳೆಯಲು ಜೂಮ್ ಕಾರ್ ಸಂಸ್ಥೆಯೊಂದಿಗೆ ಕೈಜೋಡಿಸಿರುವುದು ನಮಗೆ ಖುಷಿ ತಂದಿದೆ" ಎಂದಿದ್ದಾರೆ.

ಇದಲ್ಲದೇ ಮಹಾರಾಷ್ಟ್ರ ಸರ್ಕಾರ ಸಹ ಎಲೆಕ್ಟ್ರಿಕ್ ಕಾರುಗಳತ್ತ ಹೆಚ್ಚಿನ ಗಮನಹರಿಸಿದ್ದು, ನೀತಿ ಆಯೋಗದ ಶಿಫಾರಸ್ಸು ಅನ್ವಯ ಸರ್ಕಾರಿ ಅಧಿಕಾರಿಗಳಿಗಾಗಿ ಬರೋಬ್ಬರಿ 1 ಸಾವಿರ ಎಲೆಕ್ಟ್ರಿಕ್ ಕಾರುಗಳ ಖರೀದಿಗಾಗಿ ಟಾಟಾ ಮೋಟಾರ್ಸ್‌ನೊಂದಿಗೆ ಕಳೆದ ವಾರವಷ್ಟೇ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.

ಒಟ್ಟಿನಲ್ಲಿ ಇವಿ ಕಾರುಗಳ ಖರೀದಿಗೆ ಗ್ರಾಹಕರನ್ನು ಉತ್ತೇಜಿಸಲು ಆಟೋ ಉತ್ಪಾದನಾ ಸಂಸ್ಥೆಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ಮೂಲಕ 2030ರ ವೇಳೆಗೆ ಶೇ.100ರಷ್ಟು ಇವಿ ಮತ್ತು ಹೈಬ್ರಿಡ್ ಕಾರುಗಳನ್ನು ರಸ್ತೆಗಿಳಿಸುವ ಗುರಿಹೊಂದಲಾಗಿದೆ.


Click it and Unblock the Notifications