ನ್ಯೂ ಮಿಟ್ಸುಬಿಸಿ ಔಟ್‌ಲ್ಯಾಂಡರ್ ಖರೀದಿಗಾಗಿ ಬುಕ್ಕಿಂಗ್ ಶುರು
ವಿನೂತನ ಔಟ್‌ಲ್ಯಾಂಡರ್ ಕ್ರಾಸ್ಒವರ್ ಹೆಸರಿನ ಮೂರನೇ ಎಸ್‌ಯುವಿ ಕಾರನ್ನು ಮುಂದಿನ ತಿಂಗಳು ಮೇ ಆರಂಭದಲ್ಲಿ ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಇದೀಗ ಹೊಸ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.
ಮಿಟ್ಸುಬಿಸಿ ಸಂಸ್ಥೆಯು ಭಾರತೀಯ ಮಾರುಕಟ್ಟೆಗಾಗಿ ತನ್ನ ವಿನೂತನ ಔಟ್‌ಲ್ಯಾಂಡರ್ ಕ್ರಾಸ್ಒವರ್ ಹೆಸರಿನ ಮೂರನೇ ಎಸ್‌ಯುವಿ ಕಾರನ್ನು ಮುಂದಿನ ತಿಂಗಳು ಮೇ ಆರಂಭದಲ್ಲಿ ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಇದೀಗ ಹೊಸ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

ವಿನೂತನ ವಿನ್ಯಾಸಗಳು ಮತ್ತು ಸುಧಾರಿತ ತಂತ್ರಜ್ಞಾನ ಪ್ರೇರಿತ ಹೊಸ ಔಟ್‌ಲ್ಯಾಂಡರ್ ಕ್ರಾಸ್ಒವರ್ ಕಾರು ಸಂಪೂರ್ಣವಾಗಿ ಸಿ.ಕೆ.ಡಿ ಮಾರ್ಗದ ಮೂಲಕ ಆಮದು ಮಾಡಿಕೊಳ್ಳಲಿರುವ ಮಿಟ್ಸುಬಿಸಿ ಇಂಡಿಯಾ ಸಂಸ್ಥೆಯು ಹೊಸ ಕ್ರಾಸ್‌ಒವರ್ ಎಸ್‌ಯುವಿಯ ಬೆಲೆಯನ್ನು ರೂ. 30 ಲಕ್ಷಕ್ಕೆ ನಿಗದಿಪಡಿಸುವ ಸಾಧ್ಯತೆಗಳಿವೆ.

ಏಳು ಆಸನಗಳ ವಿನ್ಯಾಸವನ್ನು ಹೊಂದಿರುವ ಈ ಕಾರು ಪೆಟ್ರೋಲ್ ಮತ್ತು ಡೀಸಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದ್ದು, ಭಾರತದಲ್ಲಿ 7 ಸ್ಥಾನಗಳನ್ನು ಹೊಂದಿರುವ ಹೊಸ ಹೋಂಡಾ ಸಿಆರ್ ವಿ ಕಾರಿನ ಜೊತೆ ಸ್ಪರ್ಧಿಸಲಿದೆ.

ಆದಾಗ್ಯೂ, ಭಾರತದಲ್ಲಿ ಮಾರಾಟವಾಗುವ ಮಾದರಿಯು ಬಿಡುಗಡೆಯ ಸಮಯದಲ್ಲಿ ಕೇವಲ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಅನಾವರಣಗೊಳ್ಳಲಿದೆ ಹಾಗು ನಂತರದ ದಿನಗಳಲ್ಲಿ ಡೀಸಲ್ ಎಂಜಿನ್ ಮಾದರಿಯನ್ನು ಪರಿಚಯಿಸುವ ಸಂಭವವಿದೆ.

ಹೀಗಾಗಿ ಪೆಟ್ರೋಲ್ ಎಂಜಿನ್ ಆಯ್ಕೆಯ ಎಸ್‌ಯುವಿ ಕಾರುಗಳು2.4 ಲೀಟರ್ ಎಂಐವಿಸಿ ಎಂಜಿನ್ ಆಯ್ಕೆಯನ್ನು ಪಡೆದುಕೊಳ್ಳಲಿದ್ದು, ಈ ಎಂಜಿನ್ 164 ಬಿಎಚ್‌ಪಿ ಅಶ್ವಶಕ್ತಿ ಮತ್ತು 222 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ ಮತ್ತು 6 ವರ್ಗಾವಣೆಗಳನ್ನು ಹೊಂದಿರುವ ಸಿವಿಟಿ ಸ್ವಯಂಚಾಲಿತ ಗೇರ್‌ಬಾಕ್ಸ್ ನೀಡಲಾಗುತ್ತದೆ.

ಜೊತೆಗೆ ಎಲ್‌ಇಡಿ ಪ್ರೇರಿತ ಹೆಡ್‌ಲ್ಯಾಂಪ್ಸ್, ಡೇ ಟೈಮ್ ರನ್ನಿಂಗ್ ಲೈಟ್, ಟೈಲ್ ಗೇಟ್ ಕ್ಲಸ್ಟರ್, ಫಾಗ್ ಲೈಟ್‌ನೊಂದಿಗೆ 16-ಇಂಚಿನ ಅಲಾಯ್ ಚಕ್ರಗಳು, 6.1-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲರ್, 710ಡಬ್ಲ್ಯು ಸೌಂಡ್ ಸಿಸ್ಟಂ, ಪ್ರಿಮಿಯಂ ಮಾದರಿಯ ಇಂಟಿರಿಯರ್, ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಅಳವಡಿಸಲಾಗಿದೆ.

ಹೊಸ ಕಾರಿನ ಸುರಕ್ಷತಾ ಸಲಕರಣೆಗಳ ವಿಚಾರದ ಬಗ್ಗೆ ಹೇಳುವುದಾದರೇ, ಈ ಕಾರು ಎಬಿಎಸ್, ಇಬಿಡಿ, ಎಳೆತ ನಿಯಂತ್ರಣ, ಆರು ಏರ್‌ಬ್ಯಾಗ್‌ಗಳು, ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ, ಹಿಲ್ ಸ್ಟಾರ್ಟ್ ಸಹಾಯ ಹಾಗು ಇತರ ಗಮನಾರ್ಹ ವೈಶಿಷ್ಟ್ಯಗಳನ್ನು ಅಳವಡಿಕೆಗೊಳ್ಳುವ ನಿರೀಕ್ಷೆ ಇದೆ.

ಇನ್ನು ಮಿಟ್ಸುಬಿಸಿ 2008ರಲ್ಲೇ ಔಟ್‌ಲ್ಯಾಂಡರ್ ಕಾರಿನ ಎರಡನೇ ಪೀಳಿಗೆಯ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಆದರೆ, ಕಳಪೆ ಮಾರಾಟದ ಕಾರಣದಿಂದಾಗಿ 4 ವರ್ಷಗಳ ಹಿಂದಷ್ಟೇ ಉತ್ಪಾದನೆಯನ್ನು ನಿಲ್ಲಿಸಿತ್ತು. ಇದೀಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಕಾರುನ್ನು ಅಭಿವೃದ್ಧಿಗೊಳಿಸಿ ಮರು ಪರಿಚಯಿಸುತ್ತಿದೆ.


Click it and Unblock the Notifications








