ರೇಸ್‌ಮೊ ರೇಸಿಂಗ್ ಕಾರು ಅಭಿವೃದ್ಧಿ ಯೋಜನೆಯನ್ನು ಕೈಬಿಟ್ಟ ಟಾಟಾ...
ವಿಶ್ವದಾದ್ಯಂತ ಯುವಜನತೆಯಲ್ಲಿ ಸ್ಪೋರ್ಟ್ಸ್ ಕಾರುಗಳ ಬಗೆಗಿನ ಕ್ರೇಜ್ ಹೆಚ್ಚುತ್ತಿದ್ದು, ಇದಕ್ಕೆ ಪೂರಕವಾಗಿ ಎಲ್ಲಾ ಕಾರು ಉತ್ಪಾದನಾ ಸಂಸ್ಥೆಗಳು ಸಹ ಒಂದರ ಹಿಂದೊಂದು ವಿನೂತನ ಸ್ಪೋರ್ಟ್ಸ್ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿವೆ. ಇದೇ ನಿಟ್ಟಿನಲ್ಲಿ ಹೊಸ ಯೋಜನೆಯೊಂದನ್ನು ಕೈಗೆತ್ತಿಕೊಂಡಿದ್ದ ಟಾಟಾ ಮೋಟಾರ್ಸ್ ಅದು ಕಾರ್ಯರೂಪಕ್ಕೆ ಬರುವ ಮುನ್ನವೇ ಬೃಹತ್ ಯೋಜನೆಯಿಂದ ಹೊರಬಂದಿದೆ.

ಭಾರತೀಯ ಮಾರುಕಟ್ಟೆಯ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಟಾಟಾ ಮೋಟಾರ್ಸ್ ನಿರ್ಮಾಣದ ಮೊದಲ ಸ್ಪೋರ್ಟ್ ಕಾರು ಆವೃತ್ತಿಯಾದ ಟಮೋ ರೆಸ್‌ಮೋ ಬಿಡುಗಡೆಗೂ ಮುನ್ನವೇ ಯುವಜನತೆಯಲ್ಲಿ ಭಾರೀ ಕ್ರೇಜ್ ಹುಟ್ಟುಹಾಕಿದ್ದಲ್ಲದೇ ಇನ್ನು ಕೆಲವೇ ದಿನಗಳಲ್ಲಿ ಖರೀದಿಗೆ ಲಭ್ಯವಾಗುವ ನೀರಿಕ್ಷೆಯಲ್ಲಿತ್ತು. ಆದ್ರೆ ರೇಸ್‌ಮೊ ರೇಸಿಂಗ್ ಕಾರು ಖರೀದಿಸಲು ಕಾಯ್ದು ಕುಳಿತಿದ್ದ ಗ್ರಾಹಕರಿಗೆ ಟಾಟಾ ಮೋಟಾರ್ಸ್ ನಿರಾಸೆ ಮೂಡಿಸಿದೆ.

ಫೆಬ್ರುವರಿನಲ್ಲಿ ನಡೆದ 2018ರ ದೆಹಲಿ ಆಟೋ ಎಕ್ಸ್ ಪೋ ದಲ್ಲಿ ಹೊಸ ನಮೂನೆಯ ಟಮೋ ರೆಸ್‌ಮೋ ಅನಾವರಣಗೊಳಿಸಿದ್ದ ಟಾಟಾ ಸಂಸ್ಥೆಯು ಮುಂದಿನ ಕೆಲವೇ ದಿನಗಳಲ್ಲಿ ಹೊಸ ಕಾರುನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿತ್ತು. ಆದ್ರೆ ಇದೀಗ ಹೊಸ ಯೋಜನೆ ಕಾರ್ಯರೂಪಕ್ಕೆ ಬರುವ ಮುನ್ನವೇ ಟಮೋ ರೆಸ್‌ಮೋ ಬಿಡುಗಡೆ ಮಾಡುತ್ತಿಲ್ಲ ಎಂಬ ಶಾಕಿಂಗ್ ಸುದ್ದಿ ನೀಡಿದೆ.

ಈ ಮೊದಲ ಟಮೋ ರೆಸ್‌ಮೋ ರೇಸಿಂಗ್ ಕಾರುಗಳ ಉತ್ಪಾದನೆಗಾಗಿ ಬರೋಬ್ಬರಿ 250 ಕೋಟಿ ಬಂಡವಾಳ ಹೂಡಿಕೆಗೆ ಮುಂದಾಗಿದ್ದ ಟಾಟಾ ಸಂಸ್ಥೆಯು, ಇದೀಗ ಅದೇ ಬಂಡವಾಳವನ್ನು ವಾಣಿಜ್ಯ ವಾಹನ ಉತ್ಪಾದನೆ ಮೇಲೆ ಹೂಡಿಕೆ ಮಾಡಲು ನಿರ್ಧರಿಸಿದೆ.

ಆರ್ಥಿಕ ಹೊರೆ ತಪ್ಪಿಸಲು ಟಾಟಾ ಮೋಟಾರ್ಸ್ ಸಂಸ್ಥೆಯು ವೆಚ್ಚದಾಯಕ ಯೋಜನೆಯಾದ ಟಮೋ ರೆಸ್‌ಮೋ ಕಾರುಗಳ ಉತ್ಪಾದನೆಯಿಂದ ಹಿಂದೆ ಸರಿಯಲು ನಿರ್ಧರಿಸಿದೆ ಎನ್ನಲಾಗಿದ್ದು, ಇದೇ ಯೋಜನೆಯನ್ನು ಬೇರೆ ಯಾವುದೇ ಆಟೋ ಉತ್ಪಾದನೆ ಸಂಸ್ಥೆ ಖರೀದಿ ಮಾಡಲು ಬಯಸಿದ್ದಲ್ಲಿ ಹೊಸ ಯೋಜನೆಯನ್ನು ಮಾರಾಟ ಮಾಡುವುದಕ್ಕೂ ಸಹ ಟಾಟಾ ಎದರು ನೋಡುತ್ತಿದೆ.

ಮಾರುಕಟ್ಟೆಗಳ ಅಧ್ಯಯನ ಪ್ರಕಾರ, ಟಾಟಾ ನಿರ್ಮಾಣದ ರೇಸಿಂಗ್ ಎಡಿಷನ್ ಕಾರುಗಳಿಗೆ ನಿಗದಿತ ಮಟ್ಟದ ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗದ ಹಿನ್ನೆಲೆಯಲ್ಲಿ ಯೋಜನೆಯಿಂದ ಹಿಂದೆ ಸರಿಯಲು ನಿರ್ಧರಿಸುವ ಟಾಟಾ ಸಂಸ್ಥೆಯು ತನ್ನ ಸಾಂಪ್ರಾದಾಯಿಕ ವಾಹನ ಉತ್ಪನ್ನಗಳ ಮೇಲೆ ಹೆಚ್ಚಿನ ಗಮನಹರಿಸುತ್ತಿದೆ.

ಇನ್ನು ರೇಸ್ಮೋ ಕಾರು ಭಾರತದ ಮೊದಲ ಕ್ಯಾಬಿನ್ ಕನೆಕ್ಟಿವಿಟಿ ಹೊಂದಿರುವ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಈ ತಂತ್ರಜ್ಞಾನವನ್ನು ಮೈಕ್ರೋಸಾಫ್ಟ್ ಇಂಡಿಯಾ ಅಭಿವೃದ್ಧಿಪಡಿಸಿದೆ. ಇದರಿಂದ ಈ ಕಾರು ಸಾಗಬೇಕಾದ ಮಾರ್ಗಗಳ ಕುರಿತು ಪೂರ್ವ ಮಾಹಿತಿ ದೊರೆಯುವುದಲ್ಲದೇ ರಿಮೋಟ್ ನಿರ್ವಹಣೆ ವ್ಯವಸ್ಥೆ ಕೂಡ ಇರಲಿದೆ.

ಇಟಾಲಿಯ ವಿನ್ಯಾಸ
ಟಮೋ ರೆಸ್‌ಮೋ ಕಾರುಗಳನ್ನು ಇಟಾಲಿಯ ಟ್ಯುರಿನ್‌ನಲ್ಲಿರುವ ಟಾಟಾ ಡಿಸೈನ್ ಸ್ಟುಡಿಯೋದಲ್ಲಿ ನಿರ್ಮಾಣ ಮಾಡಲಾಗಿದ್ದು, ಭಾರತೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿತ್ತು.

ಎಂಜಿನ್ ಸಾಮರ್ಥ್ಯ
1.2 ಲೀಟರ್ ಸಾಮರ್ಥ್ಯದ ಟಬೋ ಚಾರ್ಜ್ಡ್ ಹಾಗೂ ಇಂಟರ್ಕೂಲ್ ರೆವೋಟ್ರೋನ್ ಇಂಜಿನ್ ಅಳವಡಿಸಲಾಗಿದ್ದು, 3 ಸಿಲಿಂಡರ್ನ ಪೆಟ್ರೋಲ್ ಇಂಜಿನ್, ಪೆಡಲ್ ಶಿಫ್ಟರ್ಸ್ ಜತೆಗೆ 6-ಸ್ಪೀಡ್ ಸ್ವಯಂಚಾಲಿತ ಹಾಗೂ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಕೂಡ ಇರಲಿದೆ.

ಈ ಕಾರು ಸಾಕಷ್ಟು ಹಗುರ ಇಂಜಿನ್ ಹೊಂದಿರುವುದರಿಂದ ಕೇವಲ 6 ಸೆಕೆಂಡ್ಗಳಲ್ಲಿ ಸೊನ್ನೆಯಿಂದ 100 ಕಿ.ಮೀ(ಗಂಟೆಗೆ) ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿರುವ ಟಮೋ ರೆಸ್‌ಮೋ ಕಾರುಗಳಲ್ಲಿ ಅಪಘಾತ ನಿರ್ವಹಣಾ ವ್ಯವಸ್ಥೆ, 7 ಏರ್ಬ್ಯಾಗ್ಗಳು ಮತ್ತಿತರ ಸುರಕ್ಷತಾ ವಿಧಾನಗಳನ್ನು ಅಳವಡಿಸಲಾಗಿದೆ.

ಜೊತೆಗೆ ಹತ್ತು ಹಲವು ವಿಶೇಷಗಳನ್ನು ಹೊತ್ತು ಬರಲು ಸಿದ್ದವಾಗಿದ್ದ ಟಾಟಾ ಟಮೋ ರೆಸ್‌ಮೋ ಕಾರುಗಳು ಸದ್ಯಕ್ಕೆ ಬಿಡುಗಡೆಯಾಗುವುದಿಲ್ಲ ಎಂಬುವುದು ಖಚಿತವಾಗಿದ್ದು, ಮುಂಬರುವ ದಿನಗಳಲ್ಲಿ ಇತರೆ ಯಾವುದಾದರೂ ಆಟೋ ಸಂಸ್ಥೆಗಳು ಟಾಟಾ ಯೋಜನೆ ಖರೀದಿ ಮಾಡಿ ಹೊಸ ಹೆಸರಿನೊಂದಿಗೆ ಬಿಡುಗಡೆ ಮಾಡಬಹುದಾದ ಸಾಧ್ಯತೆಗಳಿವೆ.


Click it and Unblock the Notifications








