ಸ್ಮಾರ್ಟ್‌ಫೋನ್‍ನಷ್ಟೇ ವೇಗದಲ್ಲಿ ಚಾರ್ಜ್ ಆಗುತ್ತೆ ಹ್ಯುಂಡೈ ಎಲೆಕ್ಟ್ರಿಕ್ ಕಾರು
ಹ್ಯುಂಡೈ ಕಂಪನಿಯು ತನ್ನ ಮುಂಬರುವ ಕೋನಾ ಎಸ್‍ಯುವಿ ಎಲೆಕ್ಟ್ರಿಕ್ ಕಾರು, ಸ್ಮಾರ್ಟ್‌ಫೋನ್ ಚಾರ್ಜ್ ಆಗುವಷ್ಟೇ ವೇಗದಲ್ಲಿ ಚಾರ್ಜ್ ಆಗಲಿದೆ ಎಂದು ತಿಳಿಸಿದೆ. ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಕಂಪನಿಯು ವೀಡಿಯೊವೊಂದನ್ನು ಬಿಡುಗಡೆಗೊಳಿಸಿದ್ದು, ಈ ವೀಡಿಯೊದಲ್ಲಿ ಸ್ಮಾರ್ಟ್‌ಫೋನ್ ಹಾಗೂ ಹ್ಯುಂಡೈ ಕೋನಾಗಳೆರಡನ್ನು ಒಂದೇ ವೇಗದಲ್ಲಿ ಚಾರ್ಜ್ ಮಾಡಬಹುದೆಂದು ತೋರಿಸಲಾಗಿದೆ. ಈ ವೀಡಿಯೋಗೆ ಹ್ಯುಂಡೈ ಕಂಪನಿಯು, ನಿಮಗೆ ಗೊತ್ತೆ, ಕೋನಾ ಎಲೆಕ್ಟ್ರಿಕ್ ಕಾರ್ ಅನ್ನು ಮೊಬೈಲ್ ಫೋನ್‌ನಷ್ಟೆ ವೇಗವಾಗಿ ಚಾರ್ಜ್ ಮಾಡಬಹುದು ಎಂಬ ಶೀರ್ಷಿಕೆ ನೀಡಿದೆ.

ಹ್ಯುಂಡೈ ಕಂಪನಿಯು ಈ ತಿಂಗಳ ಕೊನೆಯಲ್ಲಿ ಕೋನಾ ಎಲೆಕ್ಟ್ರಿಕ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ ಕಾರ್ ಅನ್ನು ಬಿಡುಗಡೆಗೊಳಿಸುವ ಮುನ್ನ, ಹ್ಯುಂಡೈ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಬಗೆಗಿರುವ ಸುಳ್ಳುಗಳನ್ನು ಹೋಗಲಾಡಿಸುವ ಪ್ರಯತ್ನದಲ್ಲಿದೆ. ಅದಕ್ಕಾಗಿ ಈ ವೀಡಿಯೊವನ್ನು ಹೊರತಂದಿದೆ. ಎಲೆಕ್ಟ್ರಿಕ್ ಕಾರುಗಳು ಇಂದಿಗೂ ಭಾರತದ ಬಹುತೇಕ ಜನರಿಗೆ ಹೊಸದಾದ ಹಾಗೂ ಭವಿಷ್ಯದ ಪರಿಕಲ್ಪನೆಯಾಗಿವೆ. ಸಾಕಷ್ಟು ಜನರು ಎಲೆಕ್ಟ್ರಿಕ್ ವಾಹನಗಳನ್ನು ಬಳಸುವ ಬಗ್ಗೆ ಇನ್ನೂ ಅನುಮಾನ ಹೊಂದಿದ್ದಾರೆ.
ಬಹುತೇಕ ಜನರು ಎಲೆಕ್ಟ್ರಿಕ್ ಕಾರುಗಳನ್ನು ಭವಿಷ್ಯದಲ್ಲಿ ನಿರ್ಮಿಸಲಾಗುವುದೆಂದು ತಿಳಿದುಕೊಂಡಿದ್ದಾರೆ. ಆದರೆ ಸಾಕಷ್ಟು ಕಂಪನಿಗಳು ಎಲೆಕ್ಟ್ರಿಕ್ ಕಾರುಗಳನ್ನು ಈಗಾಗಲೇ ತಯಾರಿಸಿದ್ದು, ಕೆಲವೇ ದಿನಗಳಲ್ಲಿ ಭಾರತದ ರಸ್ತೆಗಳಿಗಿಳಿಯಲಿವೆ. ಎಲೆಕ್ಟ್ರಿಕ್ ಕಾರುಗಳು ಭವಿಷ್ಯದಲ್ಲಿ ಭಾರತದ ಮಾರುಕಟ್ಟೆಯನ್ನು ಆಳಲಿವೆ. ಇದುವರೆಗೂ ಮಹೀಂದ್ರಾ ಹಾಗೂ ಟಾಟಾ ಕಂಪನಿಗಳು ಮಾತ್ರ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಿದ್ದವು. ಟಾಟಾದ ಎಲೆಕ್ಟ್ರಿಕ್ ಕಾರುಗಳನ್ನು ವಾಣಿಜ್ಯ ಬಳಕೆದಾರರನ್ನು ಗುರಿಯಾಗಿರಿಸಿಕೊಂಡು ತಯಾರಿಸಲಾಗಿತ್ತು.

ಈಗ ದೊಡ್ಡ ದೊಡ್ಡ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುತ್ತಿವೆ. ಆಡಿ ಕಂಪನಿಯು ಇ-ಟ್ರಾನ್ ಹೆಸರಿನ ಕಾರ್ ಅನ್ನು ಬಿಡುಗಡೆಗೊಳಿಸುತ್ತಿದ್ದರೆ, ಎಂಜಿ ಕಂಪನಿಯು ಇಝಡ್‍ಎಸ್ ಎಲೆಕ್ಟ್ರಿಕ್ ಕಾರ್ ಅನ್ನು ಈ ವರ್ಷದ ಕೊನೆಯ ಭಾಗದಲ್ಲಿ ಬಿಡುಗಡೆಗೊಳಿಸಲಿದೆ. ಹ್ಯುಂಡೈ ಕಂಪನಿಯು ಕೋನಾ ಎಲೆಕ್ಟ್ರಿಕ್ ಕಾರ್ ಅನ್ನು ಈ ತಿಂಗಳ ಕೊನೆಯ ಭಾಗದಲ್ಲಿ ಬಿಡುಗಡೆಗೊಳಿಸಲಿದೆ.

ತನ್ನ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸುವ ಮುನ್ನ ಹ್ಯುಂಡೈ ಕಂಪನಿಯು ಎಲೆಕ್ಟ್ರಿಕ್ ಕಾರುಗಳ ಬಗೆಗಿರುವ ಸುಳ್ಳುಗಳನ್ನು ಹೋಗಲಾಡಿಸುವ ಸಲುವಾಗಿ, ಹ್ಯುಂಡೈ-ಕೋನಾ ಎಲೆಕ್ಟ್ರಿಕ್-ನಿಮಗೆ ಗೊತ್ತೆ, ಎಂಬ ಹೆಸರಿನ ವೀಡಿಯೊವನ್ನು ಬಿಡುಗಡೆಗೊಳಿಸಿದೆ. ಈ ವೀಡಿಯೊದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಚಾರ್ಜ್ ಮಾಡಲು ಬಹಳಷ್ಟು ಸಮಯ ಹಿಡಿಯಲಿದೆ ಎಂಬ ಸುಳ್ಳನ್ನು ಹೋಗಲಾಡಿಸುವ ಪ್ರಯತ್ನ ಮಾಡಲಾಗಿದೆ.
ಈ ವೀಡಿಯೊದಲ್ಲಿ ಹ್ಯುಂಡೈ ಕಂಪನಿಯು ಹೇಳಿರುವಂತೆ ಕೋನಾ ಎಲೆಕ್ಟ್ರಿಕ್ ಕಾರ್ ಹಾಗೂ ಸ್ಮಾರ್ಟ್ ಮೊಬೈಲ್ ಎರಡನ್ನೂ 80%ವರೆಗೆ ಒಂದೇ ವೇಗದಲ್ಲಿ ಚಾರ್ಜ್ ಮಾಡಬಹುದಾಗಿದೆ. ಆದರೆ ಈ ರೀತಿಯಾಗಿ ವೇಗವಾಗಿ ಚಾರ್ಜ್ ಮಾಡಬೇಕಾದರೆ, ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರ್ ಅನ್ನು ಫಾಸ್ಟ್-ಚಾರ್ಜರ್‍ನಲ್ಲಿ ಚಾರ್ಜ್ ಮಾಡಬೇಕು. ಆದರೆ ಹ್ಯುಂಡೈ ಕಂಪನಿಯು, ವೇಗದ ಚಾರ್ಜರ್‍ನ ವ್ಯಾಟ್ ಬಗ್ಗೆ ಬಹಿರಂಗಪಡಿಸಿಲ್ಲ.

ಜೊತೆಗೆ ವೇಗದ ಚಾರ್ಜರ್ ಬಳಸಿ ಕಾರ್ ಅನ್ನು ಚಾರ್ಜ್ ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಬಹಿರಂಗಪಡಿಸಿಲ್ಲ. ಈ ಎಲೆಕ್ಟ್ರಿಕ್ ಕಾರಿನ ಬಿಡುಗಡೆಯ ನಂತರ ಇದರ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯಲಿದೆ. ಈ ವೀಡಿಯೊದ ಇತರ ಭಾಗಗಳಲ್ಲಿ ಹ್ಯುಂಡೈ ಕೋನಾದ ಕಾರ್ಯಕ್ಷಮತೆ, ಅನುಕೂಲತೆ, ಕಡಿಮೆ ಚಾಲನಾ ವೆಚ್ಚ ಮುಂತಾದವುಗಳ ಬಗ್ಗೆ ಹೇಳಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿರುವ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿನಲ್ಲಿ 39.2 ಕಿ.ವ್ಯಾ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 300 ಕಿ.ಮೀ ಚಲಿಸುತ್ತದೆ. ಈ ಎಲೆಕ್ಟ್ರಿಕ್ ಮೋಟಾರ್ 335ಎನ್‍ಎಂ ಟಾರ್ಕ್ ಹಾಗೂ 132 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ. ಅಂತಾರಾಷ್ಟ್ರೀಯ ಮಾದರಿಗಳನ್ನು ಸಾಮಾನ್ಯ ರೀತಿಯಲ್ಲಿ ಚಾರ್ಜ್ ಮಾಡಲು ಕೆಲವು ಗಂಟೆಗಳು ಬೇಕಾಗುತ್ತವೆ. ವೇಗದ ಚಾರ್ಜರ್ ಬಳಸಿ ಚಾರ್ಜ್ ಮಾಡಿದರೆ ಕೇವಲ 54 ನಿಮಿಷಗಳಲ್ಲಿ 80%ನಷ್ಟು ಚಾರ್ಜ್ ಮಾಡಬಹುದು.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಖಾಸಗಿ ಖರೀದಿದಾರರನ್ನು ಗುರಿಯಾಗಿಸಿಕೊಂಡು ಬಿಡುಗಡೆಯಾಗುತ್ತಿದ್ದ ಎಲೆಕ್ಟ್ರಿಕ್ ಕಾರುಗಳು ಕಡಿಮೆ ಕಾರ್ಯಕ್ಷಮತೆ ಹಾಗೂ ಕಡಿಮೆ ವ್ಯಾಪ್ತಿಯನ್ನು ನೀಡುತ್ತಿದ್ದವು. ಈ ತಿಂಗಳಿನ ಕೊನೆಗೆ ಬಿಡುಗಡೆಯಾಗುತ್ತಿರುವ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು, ದೇಶಿಯ ಎಲೆಕ್ಟ್ರಿಕ್ ಕಾರುಗಳ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡುವ ಸಾಧ್ಯತೆಗಳಿವೆ. ಹ್ಯುಂಡೈ ಕಂಪನಿಯು ತನ್ನ ಎಲೆಕ್ಟ್ರಿಕ್ ಕಾರಿನ ಮೂಲಕ ತನ್ನ ಗ್ರಾಹಕರಿಗೆ ಪೆಟ್ರೋಲ್ ಹಾಗೂ ಡೀಸೆಲ್ ಚಾಲಿತ ಕಾರುಗಳಿಗೆ ಸಮನಾದ ಕಾರ್ಯಕ್ಷಮತೆಯನ್ನು ಒದಗಿಸಲಿದೆ.


Click it and Unblock the Notifications