2020ರ ಆಟೋ ಎಕ್ಸ್‌ಪೋ ಆರಂಭಕ್ಕೂ ಮುನ್ನವೇ ಬಿಡುಗಡೆಯಾಗಲಿದೆ ಹ್ಯುಂಡೈ ಫೇಸ್‌ಲಿಫ್ಟ್ ವೆರ್ನಾ
ಹ್ಯುಂಡೈ ಇಂಡಿಯಾ ಸಂಸ್ಥೆಯು ಸದ್ಯ ಕ್ರೆಟಾ ನೆಕ್ಸ್ ಜನರೇಷನ್ ಆವೃತ್ತಿಯನ್ನು ಬಿಡುಗಡೆಗೊಳಿಸಲು ಭರ್ಜರಿ ಸಿದ್ದತೆ ನಡೆಸುತ್ತಿದ್ದು, ಹೊಸ ಕ್ರೆಟಾ ಬಿಡುಗಡೆಗೂ ಮುನ್ನವೇ ವೆರ್ನಾ ಫೇಸ್‌ಲಿಫ್ಟ್ ಆವೃತ್ತಿಯನ್ನು ಪರಿಚಯಿಸುವ ಸುಳಿವು ನೀಡಿದೆ.

ಫೇಸ್‌ಲಿಫ್ಟ್ ಕಾರು ಆವೃತ್ತಿಗಳನ್ನು ಬಿಡುಗಡೆಗೊಳಿಸಲು ಮಹತ್ವದ ಯೋಜನೆ ರೂಪಿಸಿರುವ ಹ್ಯುಂಡೈ ಸಂಸ್ಥೆಯು 2020ರ ಆರಂಭದಲ್ಲಿ ವೆರ್ನಾ ಸೆಡಾನ್, ಕ್ರೆಟಾ ಮತ್ತು ಐ20 ಫೇಸ್‌ಲಿಫ್ಟ್ ಆವೃತ್ತಿಗಳನ್ನು ಭಾರೀ ಬದಲಾವಣೆಗಳೊಂದಿಗೆ ಬಿಡುಗಡೆ ಮಾಡುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ಹೊಸ ಕಾರುಗಳ ಎಂಜಿನ್ ಕಾರ್ಯಕ್ಷಮತೆ ಕುರಿತಾಗಿ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ನಡೆಸಿದ್ದು, ವೆರ್ನಾ ಸೆಡಾನ್ ಕೂಡಾ ಹಲವು ಹೊಸ ಸೌಲಭ್ಯಗಳೊಂದಿಗೆ ರಸ್ತೆಗಿಳಿಯಲಿದೆ.

ಮಾಹಿತಿಗಳ ಪ್ರಕಾರ, 2020ರ ಫೆಬ್ರುವರಿ 5ರಿಂದ ದೆಹಲಿ ನಡೆಯಲಿರುವ ಆಟೋ ಎಕ್ಸ್‌ಪೋ ಆರಂಭಕ್ಕೂ ಮುನ್ನ ವೆರ್ನಾ ಫೇಸ್‌ಲಿಫ್ಟ್ ಕಾರು ಖರೀದಿಗೆ ಲಭ್ಯವಿರಲಿದ್ದು, ರೋಡ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿರುವ ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸಾಮಾನ್ಯ ಮಾದರಿಗಿಂತಲೂ ವಿಭಿನ್ನ ವಿನ್ಯಾಸವನ್ನು ಪಡೆದುಕೊಂಡಿದೆ.

ರೋಡ್ ಟೆಸ್ಟಿಂಗ್‌ನಲ್ಲಿ ಕಂಡುಬಂದ ವೆರ್ನಾ ಮಾದರಿಯು ಮುಂಭಾಗದ ಗ್ರಿಲ್ ಸ್ಲಾಟ್ ಸಾಕಷ್ಟು ಬದಲಾವಣೆ ಹೊಂದಿದ್ದು, ವಿದೇಶಿ ಮಾರುಕಟ್ಟೆಗಳಲ್ಲಿ ಸದ್ಯ ಮಾರಾಟದಲ್ಲಿರುವ ಸೊನಾಟಾ ಸೆಡಾನ್ ಮಾದರಿಯ ಹೋಲಿಕೆಯನ್ನು ಪಡೆದುಕೊಂಡಿರುವುದು ಬಹಿರಂಗವಾಗಿದೆ.

ಹೊಸ ಕಾರು ಮಾದರಿಯ ಹೆಡ್‌ಲ್ಯಾಂಪ್ ಸೌಲಭ್ಯವು ಕಾರಿನ ನೋಟಕ್ಕೆ ಮತ್ತಷ್ಟು ಬಲಿಷ್ಠತೆಯನ್ನು ತುಂಬಲಿದ್ದು, ಮೂರು ಲೈಟ್‌ಗಳೂ ಪ್ರತ್ಯೇಕ ಹೋಸ್ ವಿನ್ಯಾಸವನ್ನು ಪಡೆದುಕೊಂಡಿರುವುದು ಪ್ರೀಮಿಯಂಗೆ ಮತ್ತಷ್ಟು ಪೂರಕವಾಗಿದೆ. ಹಾಗೆಯೇ ಎಲ್ಇಡಿ ಹೆಡ್‌ಲ್ಯಾಂಪ್ ಭೀಮ್, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಮತ್ತು ಸನ್‌ರೂಫ್ ಇದರಲ್ಲಿದ್ದು,ಕಾರಿನ ಹಿಂಭಾಗದ ತಾಂತ್ರಿಕ ವಿನ್ಯಾಸದಲ್ಲೂ ಮಹತ್ವದ ಬದಲಾವಣೆಗಳನ್ನು ತರಲಾಗಿದೆ.

ಜೊತೆಗೆ ಟೈಲ್ ಲ್ಯಾಂಪ್, ಬೂಟ್ ಲಿಡ್ ಮತ್ತು ಸ್ಪೋರ್ಟಿ ಮಾದರಿಯ ಕ್ರೊಮ್ ನೀಡಿರುವುದು ಕೂಡಾ ಮಹತ್ವದ ಬದಲಾವಣೆ ಕಾರಣವಾಗಿದ್ದು, ಕಾರಿನ ಹೊರವಿನ್ಯಾಸದ ಹೊರತಾಗಿ ಇಂಟಿರಿಯರ್ ಮಾಹಿತಿ ಲಭ್ಯವಾಗಿಲ್ಲವಾದರೂ ಪ್ರಸ್ತುತ ಮಾದರಿಗಿಂತಲೂ ಅತ್ಯುತ್ತಮ ಫೀರ್ಚಸ್ ಹೊಂದಿರುವುದು ಬಹುತೇಕ ಖಚಿತವಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಹ್ಯುಂಡೈ ವೆರ್ನಾ ಮಾದರಿಯು 1.6-ಲೀಟರ್ ಡೀಸೆಲ್ ಮತ್ತು 1.6-ಲೀಟರ್ ಪೆಟ್ರೋಲ್ ಜೊತೆಗೆ 1.4-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಬಿಎಸ್-6 ನಿಯಮಾವಳಿಗೆ ಅನುಗುಣವಾಗಿ ಕೆಲವು ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದೆ.

ಮಾಲಿನ್ಯ ಉತ್ಪಾದನೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ 1.5-ಲೀಟರ್ ಡೀಸೆಲ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಮಾತ್ರವೇ ಫೇಸ್‌ಲಿಫ್ಟ್ ವೆರ್ನಾದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಹೀಗಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ತೆಗೆದುಹಾಕಲಿರುವ ಹ್ಯುಂಡೈ ಸಂಸ್ಥೆಯು 1.5-ಲೀಟರ್ ಎಂಜಿನ್ ಮಾದರಿಯನ್ನು ಬಿಡುಗಡೆಗಾಗಿ ನಿರ್ಧರಿಸಿರುವ ಕ್ರೆಟಾ ಫೇಸ್‌ಲಿಫ್ಟ್ ಮಾದರಿಯಲ್ಲೂ ಪರಿಚಯಿಸುವ ನೀರಿಕ್ಷೆಗಳಿವೆ.

ಇನ್ನು 2020ರ ಏಪ್ರಿಲ್ 1ರಿಂದ ದೇಶಾದ್ಯಂತ ಬಿಎಸ್-6 ನಿಯಮವು ಜಾರಿಗೆ ಬರಲಿದ್ದು, ಬಿಎಸ್-4 ವಾಹನಗಳ ಉತ್ಪಾದನೆ ಮತ್ತು ಮಾರಾಟವು ಸಂಪೂರ್ಣ ಬಂದ್ ಆಗಲಿದೆ. ಹೀಗಾಗಿ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಕೇಂದ್ರ ಸರ್ಕಾರದ ನಿರ್ದೇಶನದಂತೆ ಬಿಎಸ್-6 ನಿಯಮವನ್ನು ಜಾರಿಗೆ ತರುತ್ತಿದ್ದು, ನಿಯಮ ಮೀರಿ ಮಾಲಿನ್ಯ ಉತ್ಪತ್ತಿ ಮಾಡುತ್ತಿರುವ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ಮಹತ್ವದ ಬದಲಾವಣೆ ತರಲಾಗುತ್ತಿದೆ.
Source: Autocarindia


Click it and Unblock the Notifications