ಜೀಪ್ ರೆನೆಗಡ್ ಪ್ಲಗ್-ಇನ್ ಹೈಬ್ರಿಡ್ ವರ್ಷನ್ ಅನಾವರಣ
ಅಮೆರಿಕದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಜೀಪ್ ತನ್ನ ಬಹುಬೇಡಿಕೆಯ ಕಂಪ್ಯಾಕ್ಟ್ ಎಸ್‌ಯುವಿ ರೆನೆಗಡ್ ಆವೃತ್ತಿಯಲ್ಲಿ ಪ್ಲಗ್-ಇನ್ ಹೈಬ್ರಿಡ್ ತಂತ್ರಜ್ಞಾನವನ್ನು ಪರಿಚಯಿಸಿದ್ದು, ಹೊಸ ಕಾರು ಯುಎಸ್ಎ ಮಾರುಕಟ್ಟೆಯಲ್ಲಿ ಮಾತ್ರವಲ್ಲದೇ ಭಾರತದಲ್ಲೂ ಬಿಡುಗಡೆಯಾಗುವ ಸುಳಿವು ನೀಡಿದೆ.

ಪ್ಲಗ್-ಇನ್ ಹೈಬ್ರಿಡ್ ರೆನೆಗಡ್ ಆವೃತ್ತಿಯು 1.5-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದ್ದು, ಕೇವಲ ಬ್ಯಾಟರಿ ಸಾಮರ್ಥ್ಯದ ಮೇಲೆ ಗರಿಷ್ಠ 50 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ. ಜೊತೆಗೆ ಹೊಸ ಕಾರಿನಲ್ಲಿರುವ ಬ್ಯಾಟರಿಯನ್ನು ಹೊರಭಾಗದ ಚಾರ್ಜಿಂಗ್ ಸಾಕೇಟ್ ಮೂಲಕ ಚಾರ್ಜ್ ಮಾಡಬಹುದು ಇಲ್ಲವಾದಲ್ಲಿ ಆನ್ ಬೋರ್ಡ್‌ನಲ್ಲೇ ಪೆಟ್ರೋಲ್ ಎಂಜಿನ್ ಮೂಲಕವು ಚಾರ್ಜ್ ಮಾಡಬಹುದಾದ ವ್ಯವಸ್ಥೆ ಈ ಕಾರಿನಲ್ಲಿದೆ.

ಈ ಮೂಲಕ ಐಡಿಯಲ್ ಕಂಡಿಷನ್‌ನಲ್ಲಿ 50ಕಿ.ಮೀ ನಿಂದ 130ಕಿ.ಮೀ ಮೈಲೇಜ್ ಅನ್ನು ಎಲೆಕ್ಟ್ರಿಕ್ ಮೋಟಾರ್ ಮೂಲಕವೇ ಪಡೆದುಕೊಳ್ಳಬಹುದಾಗಿದ್ದು, 39-ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ನೀಡಲಾಗಿದೆ.

ಹೊಸ ಕಾರನ್ನು ಸದ್ಯ ಅನಾವರಣಗೊಳಿಸಿರುವ ಜೀಪ್ ಸಂಸ್ಥೆಯು 2020 ಮಧ್ಯಂತರದಲ್ಲಿ ಯುಎಸ್ಎ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದ್ದು, ತದನಂತರವಷ್ಟೇ ಚೀನಾ ಮತ್ತು ಭಾರತದಲ್ಲಿ ಹೊಸ ಕಾರನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

ಇನ್ನು ಭಾರತದಲ್ಲಿ ಬಿಡುಗಡೆಯಾಗುವ ರೆನೆಗಡ್ ಕಾರು ಕೆಲವು ಮಹತ್ವದ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದ್ದು, ಹೈಬ್ರಿಡ್ ವರ್ಷನ್ ಬಿಡುಗಡೆಗೂ ಮುನ್ನ ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಾಗಲಿದೆ. ಹೊಸ ಕಾರು ಬಿಡುಗಡೆಯಾದ ಕೆಲವು ದಿನಗಳ ನಂತರವಷ್ಟೇ ಹೈಬ್ರಿಡ್ ವರ್ಷನ್ ಪರಿಚಯಿಸಲಿರುವ ಜೀಪ್ ಸಂಸ್ಥೆಯು ಅದಕ್ಕೂ ಮುನ್ನ ಕಂಪಾಸ್ ಆವೃತ್ತಿಯನ್ನು ಉನ್ನತೀಕರಣಗೊಳಿಸಲಿದೆ.

ಹೊಸ ಕಾರಿನ ಬಿಡುಗಡೆಯ ಬಗ್ಗೆ ಈಗಾಗಲೇ ಜೀಪ್ ಸಂಸ್ಥೆಯು ಸುಳಿವು ನೀಡಿದ್ದು, ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆ ಇಂತದೊಂದು ಮಹತ್ವದ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಜೊತೆಗೆ ಹೊಸ ಕಾರನ್ನು 4x4 ಡ್ರೈವ್ ವೈಶಿಷ್ಟ್ಯತೆಗಳೊಂದಿಗೆ ಪರಿಚಯಿಸುತ್ತಿರುವ ಜೀಪ್ ಸಂಸ್ಥೆಯು ಆಪ್ ರೋಡ್ ವಿನ್ಯಾಸಗಳೊಂದಿಗೆ ಗ್ರಾಹಕರನ್ನು ಸೆಳೆಯುವ ತವಕದಲ್ಲಿದೆ.

ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ಸುಜುಕಿ ವಿಟಾರಾ ಬ್ರೆಝಾ, ಎಕ್ಸ್‌ಯುವಿ300, ಕಿಯಾ ಸೆಲ್ಟೊಸ್ ಮತ್ತು ಹ್ಯುಂಡೈ ಕ್ರೆಟಾ ಕಾರುಗಳಿಗೆ ಪೈಪೋಟಿಯಾಗಿ ಅಭಿವೃದ್ದಿಗೊಳ್ಳಲಿದ್ದು, ಸದ್ಯ ವಿದೇಶಿ ಮಾರುಕಟ್ಟೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಾರಾಟ ಹೊಂದಿರುವ ರೆನೆಗಡ್ ಕಾರಿನ ತಳಹದಿಯಲ್ಲೇ ಸಣ್ಣ ಗಾತ್ರದ ಎಸ್‌ಯುವಿಗಳನ್ನು ಅಭಿವೃದ್ಧಿಪಡಿಸಲಿದೆ.

ಜೊತೆಗೆ ಜೀಪ್ ಸಂಸ್ಥೆಯು ಪರಿಚಯಿಸಲಿರುವ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ನೆಕ್ಸ್ಟ್ ಜನರೇಷನ್ ಫಿಯೆಟ್ ಪಾಂಡಾ ಕಾರಿನ ಕೆಲವು ವೈಶಿಷ್ಟ್ಯತೆಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಮಹತ್ವದ ಬದಲಾವಣೆಯೊಂದಿಗೆ ಹೊಸ ಕಾರು ಬಿಡುಗಡೆಯಾಗಲಿದೆ.

ಮೂಲಗಳ ಪ್ರಕಾರ, 2020ರ ಮಧ್ಯಂತರದಲ್ಲಿ ಹೊಸ ಕಾರುನ್ನು ಬಿಡುಗಡೆಗೊಳಿಸುವ ಯೋಜನೆ ರೂಪಿಸಿರುವ ಜೀಪ್ ಸಂಸ್ಥೆಯು ಹೊಸ ಕಾರುಗಳಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಅಳವಡಿಸುವ ಸಾಧ್ಯತೆಗಳಿವೆ.

ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲೇ ವಿಶೇಷ ಎನ್ನಿಸಲಿರುವ ಜೀಪ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.50 ಲಕ್ಷದಿಂದ ರೂ.12 ಲಕ್ಷ ಬೆಲೆ ಹೊಂದಿರಬಹುದೆಂದು ಅಂದಾಜಿಸಲಾಗಿದೆ.


Click it and Unblock the Notifications