ಭಾರತದಲ್ಲಿ ತನ್ನ ಮೊದಲ ಕಾರು ಮಾರಾಟ ಮಳಿಗೆಯನ್ನು ತೆರೆದ ಕಿಯಾ ಮೋಟಾರ್ಸ್
ಜಗತ್ತಿನ 8ನೇ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿರುವ ದಕ್ಷಿಣ ಕೊರಿಯಾದ ಕಿಯಾ ಮೋಟಾರ್ಸ್ ಭಾರತದಲ್ಲಿ ಪ್ರಥಮ ಬಾರಿಗೆ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಆರಂಭಗೊಳಿಸುತ್ತಿದ್ದು, 2019ರ ಅಗಸ್ಟ್ ಹೊತ್ತಿಗೆ ತನ್ನ ಮೊದಲ ಕಾರು ಮಾದರಿಯನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಕಿಯಾ ಮೋಟಾರ್ಸ್ ಸಂಸ್ಥೆಯು ಸದ್ಯ ಭಾರತೀಯ ಆಟೋ ಉದ್ಯಮದಲ್ಲಿ ಬಹುದೊಡ್ಡ ಬದಲಾವಣೆ ತರಲಿರುವ ಬಹುನೀರಿಕ್ಷಿತ ಕಾರು ಉತ್ಪಾದನಾ ಸಂಸ್ಥೆ ಅಂದ್ರೆ ತಪ್ಪಾಗುವುದಿಲ್ಲ. ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲು ಸಿದ್ದವಾಗುತ್ತಿರುವ ಕಿಯಾ ಸಂಸ್ಥೆಯು ಈಗಾಗಲೇ ದೇಶಾದ್ಯಂತ ಡೀಲರ್ಸ್ ನೆಟ್‌ವರ್ಕ್ ಸಿದ್ದಗೊಳಿಸಿದ್ದು, ನೋಯ್ಡಾದಲ್ಲಿ ಇಂದು ತನ್ನ ಮೊದಲ ಮಾರಾಟ ಮಳಿಗೆಗೆ ಅಧಿಕೃತವಾಗಿ ಚಾಲನೆ ನೀಡಿತು.
ಕಿಯಾ ಸಂಸ್ಥೆಯು ವಿವಿಧ ಮಾದರಿಯ ಒಟ್ಟು 8 ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ. ಇದರಲ್ಲಿ ಮೊದಲಿಗೆ ಮಾರುಕಟ್ಟೆಗೆ ಲಗ್ಗೆಯಿಡುವುದೇ ಮಾರುತಿ ಸುಜುಕಿ ಬ್ರೆಝಾ ಮತ್ತು ಹ್ಯುಂಡೈ ಕ್ರೆಟಾ ಪ್ರತಿಸ್ಪರ್ಧಿಯಾಗಿರುವ ಎಸ್‌ಪಿ2ಐ ಕಾನ್ಸೆಪ್ಟ್ ಕಂಪ್ಯಾಕ್ಟ್ ಎಸ್‌ಯುವಿ.

ಆಂಧ್ರಪ್ರದೇಶದಲ್ಲಿ ತನ್ನ ಮೊದಲ ಕಾರು ಉತ್ಪಾದನಾ ಘಟಕವನ್ನು ಬರೋಬ್ಬರಿ 7 ಸಾವಿರ ಕೋಟಿ ವೆಚ್ಚದಲ್ಲಿ ತೆರೆದಿರುವ ಕಿಯಾ ಸಂಸ್ಥೆಯು, ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹ್ಯಾಚ್‌ಬ್ಯಾಕ್, ಸೆಡಾನ್, ಎಸ್‌ಯುವಿ, ಎಂಪಿವಿ, ಸ್ಪೋರ್ಟ್, ಐಷಾರಾಮಿ ಎಸ್‌ಯುವಿ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ನಿರ್ಮಾಣ ಮಾಡಲಿದೆ.
ಇದರಲ್ಲಿ ಇನೋವಾ ಕ್ರಿಸ್ಟಾ ಕಾರುಗಳ ಪ್ರತಿಸ್ಪರ್ಧಿಯಾಗಿರುವ ಕಾರ್ನಿವಾಲ್ ಎಂಪಿವಿ ಕಾರಿನ ಭಾರೀ ನೀರಿಕ್ಷೆ ಇಟ್ಟುಕೊಳ್ಳಲಾಗಿದ್ದು, ಕಾರ್ನಿವಾಲ್ ಕಾರುಗಳು 7 ಸೀಟರ್ ಮತ್ತು 9 ಸೀಟರ್ ಮಾದರಿಯಲ್ಲಿ ರಸ್ತೆಗಿಳಿಯುವುದು ಪಕ್ಕಾ ಆಗಿದೆ.

ಇನ್ನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪೆನುಕೊಂಡದದ ಬಳಿ ಆರಂಭಗೊಂಡಿರುವ ಕಿಯಾ ಕಾರು ಉತ್ಪಾದನಾ ಘಟಕವು ಸಹ ಸಾಕಷ್ಟು ವಿಶೇಷತೆಗಳಿಗೆ ಕಾರಣವಾಗಿದ್ದು, ಪ್ರತಿವರ್ಷ 3 ಲಕ್ಷ ಕಾರುಗಳನ್ನು ಉತ್ಪಾದನಾ ಸಾಮರ್ಥ್ಯದ ಘಟಕದ ನಿರ್ಮಾಣಕ್ಕೆ ಬರೋಬ್ಬರಿ 7 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲಾಗಿದೆ.
ಬರೋಬ್ಬರಿ 540 ಎಕರೆ ವಿಸ್ತಿರಣದಲ್ಲಿ ವಿಶ್ವದರ್ಜೆ ಸೌಲಭ್ಯಗಳೊಂದಿಗೆ ಈ ಘಟಕವನ್ನು ನಿರ್ಮಾಣ ಮಾಡಲಾಗಿದ್ದು, ಕಾರು ಬಿಡಿಭಾಗಗಳು, ಎಂಜಿನ್ ಅಭಿವೃದ್ಧಿ, ಸಂಶೋಧನೆ ಸೇರಿದಂತೆ ವಿವಿಧ ತಾಂತ್ರಿಕ ಅಂಶಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ವಿಭಾಗಗಳನ್ನು ಹೊಂದಿದೆ.

ಇದಲ್ಲದೇ ಕಿಯಾ ಮೋಟಾರ್ಸ್ ಸಂಸ್ಥೆಯು ಹೊಸ ಕಾರು ಉತ್ಪಾದನಾ ಘಟಕದಲ್ಲಿ ಶೇ. 90ರಷ್ಟು ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ನೀಡುವ ಭರವಸೆ ನೀಡಿದ್ದು, ಈಗಾಗಲೇ 10 ಸಾವಿರ ಉದ್ಯೋಗಿಗಳನ್ನು ನೇಮಕಗೊಳಿಸಿ ಉದ್ಯೋಗ ಕೌಶಲ್ಯ ಅಭಿವೃದ್ದಿ ಕಾರ್ಯಗಾರವನ್ನು ಸಹ ಕೈಗೊಂಡಿದೆ.
ಒಟ್ಟಿನಲ್ಲಿ ಕಿಯಾ ಮೋಟಾರ್ಸ್ ಸಂಸ್ಥೆಯು ಮಾರುತಿ ಸುಜುಕಿ, ಹ್ಯುಂಡೈ, ಟೊಯೊಟಾ, ಮಹೀಂದ್ರಾ ಮತ್ತು ಟಾಟಾ ಮೋಟಾರ್ಸ್ ನಿರ್ಮಾಣದ ಕಾರುಗಳಿಗೆ ಭಾರೀ ಪೈಪೋಟಿ ನೀಡುವುದು ಸ್ಪಷ್ಟವಾಗಿದ್ದು, ಗ್ರಾಹಕರನ್ನು ಸೆಳೆಯಲು ಕಿಯಾ ಕೈಗೊಳ್ಳುವ ಮುಂದಿನ ಯೋಜನೆಗಳ ಬಗ್ಗೆ ಮತ್ತಷ್ಟು ಕುತೂಹಲವಿದೆ ಎನ್ನಬಹುದು.


Click it and Unblock the Notifications