ಕಾರ್ ಕದ್ದಿದ್ದು ಆಯ್ತು, ಈಗ ಖದೀಮರ ಕಣ್ಣು ಲೊಗೊ ಮೇಲೆ..!
ಕಾರು ಕಳ್ಳತನವಾಗಿರುವ ಅನೇಕ ಪ್ರಕರಣಗಳನ್ನು ನೋಡಿದ್ದೇವೆ. ಆದ್ರೆ ಕಾರುಗಳನ್ನು ಕದ್ದು ಕಳ್ಳರಿಗೂ ಬೋರ್ ಆಗಿರಬೇಕು ಅಂತಾ ಕಾಣುತ್ತೆ. ಇದೇ ಕಾರಣ ಇತ್ತೀಚೆಗೆ ಕಾರುಗಳ ಬದಲಿಗೆ ಕಾರುಗಳ ಲೊಗೊಗಳನ್ನು ಮಾತ್ರವೇ ಕದಿಯಲು ಶುರು ಮಾಡಿದ್ದಾರೆ.

ಇಂದೋರ್ ನಗರದಲ್ಲಿ ಕಳ್ಳರು ಈಗ ಕಾರುಗಳ ಲೊಗೊಗಳನ್ನು ಕದಿಯಲು ಶುರು ಮಾಡಿದ್ದಾರೆ. ಅದರಲ್ಲೂ ಇಂದೋರ್‍ನಲ್ಲಿರುವ ಪ್ರತಿಷ್ಠಿತ ಏರಿಯಾಗಳಲ್ಲಿರುವ ಕಾರುಗಳ ಲೊಗೊಗಳ ಕಳವು ಪ್ರಮಾಣವು ಹೆಚ್ಚಾಗಿದೆ. ಸಾಕೆತ್ ಹಾಗೂ ಶ್ರೀನಗರ ಏರಿಯಾಗಳಲ್ಲಿ ನಿಲ್ಲಿಸಿದ್ದ ಐಷಾರಾಮಿ ಕಾರುಗಳ ಲೊಗೊಗಳ ಕಳ್ಳತನದ ಪ್ರಕರಣ ವರದಿಯಾಗಿದೆ.

ಐಷಾರಾಮಿ ಕಾರುಗಳ ಲೊಗೊಗಳ ಬೆಲೆಯು ಮಾರುಕಟ್ಟೆಯಲ್ಲಿ ರೂ.7 ಸಾವಿರದಿಂದ ರೂ. 15 ಸಾವಿರ ತನಕ ಬೆಲೆಯಿದೆ. ಆದರೆ ಕಾಳ ಸಂತೆಯಲ್ಲಿ ಈ ಲೊಗೊಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಬಿಎಂಡಬ್ಲ್ಯು, ಆಡಿ, ಫೋಕ್ಸ್ ವ್ಯಾಗನ್, ಸ್ಕೋಡಾ, ಮರ್ಸಿಡಿಸ್ ಕಾರುಗಳಲ್ಲಿರುವ ಲೊಗೊವನ್ನು ಹೆಚ್ಚು ಕಳ್ಳತನ ಮಾಡಲಾಗುತ್ತಿದೆ.

ಕೆಲ ದಿನಗಳ ಹಿಂದಷ್ಟೇ ಹೊಸ ಹೋಂಡಾ ಅಮೇಜ್ ಕಾರ್ ಅನ್ನು ಖರೀದಿಸಿದ್ದ ಶ್ವೇತಾ ಗುಪ್ತಾ ಎಂಬುವವರ ಕಾರಿನಲ್ಲಿದ್ದ ಹೋಂಡಾ ಲೊಗೊವನ್ನು ಕದಿಯಲಾಗಿದೆ. ಶ್ವೇತಾ ಗುಪ್ತಾರವರ ಪ್ರಕಾರ, ಜನರು ಸಾಮಾನ್ಯವಾಗಿ ಕಾರಿನ ಟಯರ್ ಪಂಕ್ಚರ್ ಆಗಿದೆಯೇ ಅಥವಾ ಬಾಡಿಗಳು ಸ್ಕ್ರಾಚ್ ಆಗಿದೆಯೇ ಎಂಬುದನ್ನು ಪರೀಕ್ಷಿಸುತ್ತಾರೆ.

ಆದರೆ ಹಿಂಬದಿಯಲ್ಲಿರುವ ಲೊಗೊಗಳನ್ನು ಅಷ್ಟಾಗಿ ಗಮನಿಸುವುದಿಲ್ಲ. ಶ್ವೇತಾರವರು ಕಳುವಾದ ಲೊಗೊ ಬದಲಿಗೆ ಹೊಸ ಹೋಂಡಾ ಲೊಗೊವನ್ನು ಕಾರಿನಲ್ಲಿ ಅಳವಡಿಸುವ ಬಗ್ಗೆ ಸರ್ವಿಸ್ ಸೆಂಟರ್‍ನಲ್ಲಿ ವಿಚಾರಿಸಿದಾಗ ಕಡಿಮೆ ಎಂದರೂ ರೂ.2,000ಗಳಾಗುವುದಾಗಿ ತಿಳಿದು ಬಂದಿದೆ.

ಆಡಿ, ಬಿಎಂಡಬ್ಲ್ಯು ಹಾಗೂ ಮರ್ಸಿಡಿಸ್ ಕಾರುಗಳಲ್ಲಿರುವ ಲೊಗೊಗಳು ರೂ.10 ಸಾವಿರದಿಂದ ರೂ.15 ಸಾವಿರ ಬೆಲೆಯನ್ನು ಹೊಂದಿವೆ. ಕಂಪನಿಯ ಅಧಿಕಾರಿಗಳ ಪ್ರಕಾರ, ಈ ಲೊಗೊಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುವ ಕಾರಣಕ್ಕೆ ಹೆಚ್ಚಿನ ಬೆಲೆಯನ್ನು ಹೊಂದಿವೆ.

ಲೋಕಮಾನ್ಯ ನಗರದ ನಿವಾಸಿಯಾದ ಇಶಾನ್ ಕೊಠಾರಿರವರು ಮಾತನಾಡಿ, ನಮ್ಮ ಏರಿಯಾದಲ್ಲಿರುವ ಐಷಾರಾಮಿ ಕಾರುಗಳ ಲೊಗೊಗಳನ್ನು ಕಳವು ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇವು ದುಬಾರಿ ಬೆಲೆಯನ್ನು ಹೊಂದಿವೆ ಎಂದಿದ್ದಾರೆ.

ಜನರು ಹೆಚ್ಚಿನ ಬೆಲೆ ತೆತ್ತು ಈ ಲೊಗೊಗಳನ್ನು ತಮ್ಮ ವಾಹನಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಪಲಾಸಿಯಾ ಪೊಲೀಸ್ ಠಾಣಾಧಿಕಾರಿಗಳಾದ ಅಜಿತ್ ಬಯಾಸ್‍ರವರು ಮಾತನಾಡಿ, ನಮ್ಮ ಠಾಣಾ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲಿ ಕಾರಿನ ಲೊಗೊಗಳನ್ನು ಕದಿಯುತ್ತಿರುವ ಪ್ರಕರಣಗಳು ನಮ್ಮ ಗಮನಕ್ಕೂ ಬಂದಿವೆ ಎಂದಿದ್ದಾರೆ.

ಆದರೆ ಇದುವರೆಗೂ ಯಾರೂ ಸಹ ದೂರು ನೀಡಿಲ್ಲವೆಂದು ತಿಳಿಸಿದ್ದಾರೆ. ಯಾರಾದರೂ ಮುಂದೆ ಬಂದು ದೂರು ದಾಖಲಿಸಿದರೆ ತನಿಖೆ ಕೈಗೊಂಡು ತಪ್ಪಿತಸ್ಥರನ್ನು ಪತ್ತೆ ಮಾಡುವುದಾಗಿದೆ ಅವರು ತಿಳಿಸಿದ್ದಾರೆ. ಆಟೋಮೊಬೈಲ್ ಡೀಲರ್‍ಗಳ ಪ್ರಕಾರ ಕಳೆದ ಒಂದು ವರ್ಷದಿಂದ ಐಷಾರಾಮಿ ಕಾರುಗಳ ಲೊಗೊಗಳಿಗಾಗಿ ಭಾರೀ ಪ್ರಮಾಣದ ಬೇಡಿಕೆಯುಂಟಾಗಿದೆ ಎನ್ನುವುದು ಲೊಗೋ ಕಳ್ಳತನಗಳು ಹೆಚ್ಚಾಗಿವೆ ಎನ್ನುವುದಕ್ಕೆ ಪ್ರಮುಖ ಸಾಕ್ಷಿ ಎನ್ನಬಹುದು.


Click it and Unblock the Notifications








