Expressway: ಕರ್ನಾಟಕದ ಈ ಹೆದ್ದಾರಿಯಾಗಲಿದೆ ಹೊಸ ಎಕ್ಸ್‌ಪ್ರೆಸ್‌ವೇ, ಯಾವ್ಯಾವ ಜಿಲ್ಲೆಗಳಿಗೆ ಅನುಕೂಲ?
ನೆಲಮಂಗಲ ಹಾಗೂ ತುಮಕೂರು ನಡುವೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ-48ನ್ನು ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್‌ವೇ ಮಾಡಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್ಎಐ - NHAI) ಮುಂದಾಗಿದೆ. ಇದರಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳ ಜನರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ (Bengaluru-Mysuru Expressway) ಮಾದರಿಯಲ್ಲಿ ನೆಲಮಂಗಲ ಹಾಗೂ ತುಮಕೂರು ಹೆದ್ದಾರಿಯನ್ನು 2025ರ ಡಿಸೆಂಬರ್ ಅಂತ್ಯದ ವೇಳೆಗೆ ಅಭಿವೃದ್ಧಿಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾರ್ಯಪ್ರವೃತ್ತವಾಗಿದೆ. ಅದರ ಭಾಗವಾಗಿ ಈ ರಸ್ತೆಯನ್ನು ಪ್ರವೇಶ ನಿಯಂತ್ರಿತ (Access-Controlled) ಹೆದ್ದಾರಿಯನ್ನಾಗಿಸಲು ಸದ್ಯವಿರುವ ಎರಡು ಟೋಲ್ ಪ್ಲಾಜಾಗಳನ್ನು ಮುಚ್ಚಿ, ಹೊಸ ಟೋಲ್‌ನ್ನು ನಿರ್ಮಾಣ ಮಾಡಲಿದೆ.

ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯೆ ನೀಡಿರುವ ಎನ್‌ಎಚ್ಎಐ ಹಿರಿಯ ಅಧಿಕಾರಿಯೊಬ್ಬರು, 'ನಾವು ತುಮಕೂರು ರಸ್ತೆಯಲ್ಲಿರುವ ಚೊಕ್ಕೇನಹಳ್ಳಿ ಮತ್ತು ಕುಲುಮೆಪಾಳ್ಯ ಟೋಲ್ ಪ್ಲಾಜಾಗಳನ್ನು ಬಂದ್ ಮಾಡುತ್ತೇವೆ. ಇದೇ ಹೆದ್ದಾರಿಯಲ್ಲಿರುವ ರಾಯರಪಾಳ್ಯದಲ್ಲಿ ನೂತನ ಟೋಲ್ ಪ್ಲಾಜಾವನ್ನು ತೆರೆಯುತ್ತೇವೆ. ಪ್ರಸ್ತುತವಿರುವ ಎರಡು ಟೋಲ್‌ಗಳು ಸಮೀಪದಲ್ಲಿವೆ' ಎಂದು ಹೇಳಿದ್ದಾರೆ.
'ಈಗಿರುವ ರಸ್ತೆಯನ್ನು 6 ಪಥಗಳಿಗೆ ವಿಸ್ತರಿಸುವ ಕೆಲಸಗಳು ಸಹ ನಡೆಯುತ್ತಿದ್ದು, ನೂತನ ಹೆದ್ದಾರಿಯ ಕಾಮಗಾರಿಯನ್ನು ಮಾಡಿ ಮುಗಿಸಲು 2025 ಆಗಸ್ಟ್ ವರೆಗೆ ಗಡುವನ್ನು ನೀಡಲಾಗಿತ್ತು. ಆದರೆ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿರುವ ಹಿನ್ನೆಲೆ, ಬಹುತೇಕ 2025ರ ಡಿಸೆಂಬರ್ ವೇಳೆಗೆ ರಸ್ತೆ ನಿರ್ಮಾಣ ಕಾರ್ಯಗಳು ಮುಕ್ತಾಯಗೊಳ್ಳಲಿದೆ' ಎಂದು ಅವರು ತಿಳಿಸಿದ್ದಾರೆ.
ಹೊಸ ಪ್ಲಾಜಾದಲ್ಲಿ ವಿಧಿಸಲಾಗುವ ಟೋಲ್ ಶುಲ್ಕದ ಮೊತ್ತವನ್ನು ಇನ್ನೂ ನಿಗದಿಪಡಿಸಿಲ್ಲ. ಈಗಾಗಲೇ ಬೆಂಗಳೂರಿನ ಗೋರಗುಂಟೆಪಾಳ್ಯದಿಂದ ನೆಲಮಂಗಲವರೆಗಿನ ರಸ್ತೆಯು ಪ್ರವೇಶ ನಿಯಂತ್ರಿತವಾಗಿದೆ. ಅದೇ ರೀತಿಯ ಸೌಕರ್ಯವನ್ನು ನೆಲಮಂಗಲ - ತುಮಕೂರು ನಡುವೆಯು ವಾಹನ ಸವಾರರಿಗೆ ಕಲ್ಪಿಸಲು ಎರಡು ಟೋಲ್ ಪ್ಲಾಜಾಗಳನ್ನು ಮುಚ್ಚುವ ಕೆಲಸಗಳು ಆರಂಭಗೊಂಡಿದೆ. ಮುಂಬರುವ ದಿನಗಳಲ್ಲಿ ಚಿತ್ರದುರ್ಗದವರೆಗೆ ಪ್ರವೇಶ ನಿಯಂತ್ರಿತ ಹೆದ್ದಾರಿಯು ವಿಸ್ತರಣೆಯಾಗಲಿದೆ.
ನೆಲಮಂಗಲ ಹಾಗೂ ತುಮಕೂರು ಮಧ್ಯೆ ಹೊಸ ರಸ್ತೆ ಲೋಕಾರ್ಪಣೆಗೊಂಡ ಮೇಲೆ ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಪ್ರಯಾಣದ ಅವಧಿಯು ಒಂದಷ್ಟು ಮಟ್ಟಿಗೆ ಇಳಿಕೆಯಾಗಲಿದೆ. ಪ್ರವಾಸೋದ್ಯಮ ಹಾಗೂ ಕೈಗಾರಿಕಾ ಕ್ಷೇತ್ರಗಳು ಕೂಡ ಬೆಳವಣಿಗೆ ಹೊಂದಲಿವೆ.
ಬೆಂಗಳೂರು-ಚೆನ್ನೈ ನಡುವೆಯೂ ಈ ವರ್ಷಾಂತ್ಯದೊಳಗೆ ನೂತನ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಗೊಳ್ಳಲಿದೆ. 262 ಕಿಮೀ ಉದ್ದದ ಈ ಹೆದ್ದಾರಿಯು ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಮೂಲಕ ಹಾದುಹೋಗಲಿದ್ದು, ಈಗಿರುವ 5 - 6 ಗಂಟೆ ಪ್ರಯಾಣ ಅವಧಿಯು 2 ಗಂಟೆ 30 ನಿಮಿಷಗಳಿಗೆ ಕಡಿಮೆಯಾಗಲಿದೆ. 4 ಪಥದ ಈ ರಸ್ತೆಯು ಬೆಂಗಳೂರು ಬಳಿಯ ಹೊಸಕೋಟೆಯಲ್ಲಿ ಶುರುವಾಗಿ, ಚೆನ್ನೈ ಹೊರವಲಯದ ಶ್ರೀಪೆರಂಬದೂರಿನಲ್ಲಿ ಮುಕ್ತಾಯಗೊಳ್ಳಲಿದೆ.
ಬೆಂಗಳೂರು-ಪುಣೆ ಮಧ್ಯೆ ಹೊಸ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಾಕಷ್ಟು ತಯಾರಿಯನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ. ಸುಮಾರು 700 ಕಿಲೋಮೀಟರ್ ಉದ್ದದ ಈ ಎಕ್ಸ್‌ಪ್ರೆಸ್‌ವೇಯು ಕರ್ನಾಟಕದ 9 ಜಿಲ್ಲೆಗಳು ಮತ್ತು ಮಹಾರಾಷ್ಟ್ರದ 3 ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ಈ ಹೆದ್ದಾರಿ ಲೋಕಾರ್ಪಣೆಗೊಂಡ ಮೇಲೆ ಬೆಂಗಳೂರಿಂದ ಪುಣೆಯನ್ನು ಕೇವಲ 7 ಗಂಟೆಯಲ್ಲಿ ತಲುಪಬಹುದು ಎನ್ನಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications